ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ: ತಾಯಿ ಜೈಲಿಗೆ, ಬಾಲಕಿ ಅತಂತ್ರ

Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೀದರ್‌: ಶಾಹಿನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾಲಕಿಯನ್ನು ಬಂಧಿಸಿ ಜೈಲಿಗೆ ಕಳಿಸಿದ ನಂತರ ಬಾಲಕಿಯ ಸ್ಥಿತಿ ಅತಂತ್ರವಾಗಿದೆ.

ಹಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡದಲ್ಲಿ ವಾಸವಾಗಿದ್ದ ಅಂಜುನ್ನೀಸಾ ಪತಿಯ ನಿಧನದ ನಂತರ ಬಾಲಕಿಯೊಂದಿಗೆ ಬೀದರ್‌ಗೆ ಬಂದು ಖಾಸಗಿ ಕೆಲಸ ಮಾಡಿ ಬದುಕು ಸಾಗಿಸಿದ್ದಾಳೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಾಟಕವಾಡಿಸಿದ ಸಂದರ್ಭದಲ್ಲಿ ಮಗಳಿಗೆ ಚಪ್ಪಲಿಕೊಟ್ಟು ‘ಸಿಎಎ, ಎನ್ಆರ್‌ಸಿಗೆ ಯಾರಾದರೂ ದಾಖಲೆ ಕೇಳಲು ಬಂದರೆ ಚಪ್ಪಲಿಯಿಂದ ಹೊಡೆಯುತ್ತೇನೆ’ ಎಂದು ನಾಟಕದಲ್ಲಿ ಆಡಬೇಕು ಎಂದು ಹೇಳಿ ಕಳಿಸಿದ್ದಳು. ಇದೇ ಬಾಲಕಿಯ ತಾಯಿಗೆ ಮುಳುವಾಯಿತು.

ಜನವರಿ 16ರಂದು ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಜನವರಿ 30ರಂದು ಬಾಲಕಿಯ ತಾಯಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಜನವರಿ 30ರಂದು ಶಾಲೆಯಿಂದ ಮನೆಗೆ ಬಂದ ಬಾಲಕಿಗೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬ ಆಶ್ರಯ ಒದಗಿಸಿದೆ. ಐದು ದಿನಗಳಿಂದ ಪಕ್ಕದ ಮನೆಯವರೇ ನಿತ್ಯ ಬಾಲಕಿಯನ್ನು ಶಾಲೆಗೆ ಕಳಿಸಿಕೊಡುತ್ತಿದ್ದಾರೆ.

ತಾಯಿಯ ಬಂಧನದ ನಂತರ ಬಾಲಕಿ ಗಾಬರಿಗೊಂಡಿದ್ದು, ಅವಳಲ್ಲಿ ಆತಂಕ ಮನೆ ಮಾಡಿದೆ. ಸರಿಯಾಗಿ ಊಟ ಹಾಗೂ ನಿದ್ದೆ ಮಾಡುತ್ತಿಲ್ಲ. ನಡು ರಾತ್ರಿಯಲ್ಲಿ ಎಚ್ಚರಗೊಂಡು ಕಿರುಚುತ್ತ ಎದ್ದು ಕುಳಿತುಕೊಳ್ಳುತ್ತಿದ್ದಾಳೆ. ಮುಂದೆ ಏನಾಗುತ್ತದೆ ಗೊತ್ತಿಲ್ಲ. ಮಾನವೀಯ ನೆಲೆಯಲ್ಲಿ ಬಾಲಕಿಗೆ ಆಶ್ರಯ ನೀಡಿದ್ದೇವೆ ಎಂದು ಬಾಲಕಿಗೆ ಆಶ್ರಯ ಕೊಟ್ಟಿರುವ ಪೋಷಕರು ತಿಳಿಸಿದ್ದಾರೆ.

‘ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಪ್ರದರ್ಶನ ನಡೆದಿದ್ದು ನಿಜ. ಬಾಲಕಿ ವಿವಾದಾತ್ಮಕ ಶಬ್ದ ಬಳಸಿದ ನಂತರ ತಕ್ಷಣ ನಾಟಕ ಪ್ರದರ್ಶನ ನಿಲ್ಲಿಸಲಾಯಿತು. ಆದರೆ ಯಾರೊ ಒಬ್ಬರು ದೂರು ಕೊಟ್ಟ ಕಾರಣ ನನ್ನನ್ನು ಹೊಣೆ ಮಾಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಾಲಕಿಯ ತಾಯಿ ಅನಕ್ಷರಸ್ಥಳಾಗಿದ್ದು, ಘಟನೆಯ ನಂತರ ಅವಳ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅವಳು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜೈಲಿನಲ್ಲಿರುವ ಫರೀದಾ ಬೇಗಂ ಹೇಳಿದ್ದಾರೆ.

ಮುಂದುವರಿದ ವಿಚಾರಣೆ:

ಶಾಹಿನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ತನಿಖಾ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಪೊಲೀಸ್‌ ಠಾಣೆಯ ಮಕ್ಕಳ ಘಟಕದ ಪೊಲೀಸ್‌ ಸಿಬ್ಬಂದಿ ನಾಲ್ಕು ದಿನಗಳಿಂದ ಶಾಲೆಗೆ ಭೇಟಿ ಕೊಟ್ಟು ನಾಟಕದಲ್ಲಿ ಪಾತ್ರ ಮಾಡಿದ ಮಕ್ಕಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೊಬೈಲ್‌ನಲ್ಲಿರುವ ದೃಶ್ಯವನ್ನು ತೋರಿಸಿ ಪಾಲಕರ ಮಾಹಿತಿಯನ್ನೂ ಪಡೆಯುತ್ತಿದ್ದಾರೆ.

‘ಶಾಲಾ ಆಡಳಿತ ಮಂಡಳಿ ಪೊಲೀಸರೊಂದಿಗೆ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ತನಿಖೆ ವಿಳಂಬವಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಬೇಕಾಗಿದೆ. ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರ ವಿಶೇಷ ತಂಡ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದೆ’ ಎಂದು ತನಿಖಾಧಿಕಾರಿ ಬೀದರ್‌ ಡಿವೈಎಸ್ಪಿ ಬಸವೇಶ್ವರ ಹೀರಾ ತಿಳಿಸಿದ್ದಾರೆ.

ಅರ್ಜಿ ಅಂಗೀಕಾರ: ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್ ಹಾಗೂ ಇತರ ನಾಲ್ವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ ಅಂಗೀಕಾರವಾಗಿದೆ.

ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್, ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ, ಬಾಲಕಿಯ ತಾಯಿ ಹಾಗೂ ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡಿದ ವ್ಯಕ್ತಿಯ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ವಕೀಲ ಕೇಶವರಾವ್ ಶ್ರೀಮಾಳೆ ತಿಳಿಸಿದ್ದಾರೆ.

ರಿಜ್ವಾನ್ ಭೇಟಿ:ಶಾಹೀನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ  ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ್ದಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣದಡಿ ಬಂಧನಕ್ಕೊಳಗಾದ ಮುಖ್ಯಶಿಕ್ಷಕಿ ಹಾಗೂ ನಾಟಕ ಮಾಡಿದ ಬಾಲಕಿಯ ತಾಯಿಯನ್ನು ಶಾಸಕ ರಿಜ್ವಾನ್‌ ಅರ್ಷದ್‌ ಅವರು ಮಂಗಳವಾರ ಜೈಲಿನಲ್ಲಿ ಭೇಟಿಯಾದರು.

ರಿಜ್ವಾನ್‌ ಅರ್ಷದ್‌ ಅವರು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ಶಾಹಿನ್ ಶಿಕ್ಷಣ ಸಂಸ್ಥೆಯ ಸಿಇಒ ತೌಸಿಫ್ ಮಡಿಕೇರಿ ಹಾಗೂ ಮನ್ನಾನ್‌ ಶೇಟ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಪಾಲಕರೊಂದಿಗೂ ಮಾತನಾಡಿ ನಂತರ ನೇರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ಅವರನ್ನು ಭೇಟಿಯಾದರು.

ಮಕ್ಕಳ ನಾಟಕವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಬಾಲಕಿಯ ತಾಯಿ ಹಾಗೂ ಮುಖ್ಯ ಶಿಕ್ಷಕಿಯ ವಿರುದ್ಧ ದಾಖಲಿಸಿರುವ ದೇಶ ದ್ರೋಹ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ನಂತರ ಬೀದರ್‌ ಜೈಲಿಗೆ ತೆರಳಿ ಆರೋಪಿಗಳನ್ನೂ ಭೇಟಿಯಾದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಅಜ್ಮತ್‌ ಪಟೇಲ್, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ರವಿ ಭೋಜರಾಜ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT