ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 964 ಹಳ್ಳಿಗಳಲ್ಲಿ ‘ಬಿಟ್ಟಿ ಚಾಕರಿ’ ಜೀವಂತ: ಜೀವಿಕ ಸಮೀಕ್ಷೆ

ಅಮಾನವೀಯ ಪದ್ಧತಿ ಮೇಲೆ ಬೆಳಕು
Last Updated 19 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 15 ಜಿಲ್ಲೆಗಳ 964 ಹಳ್ಳಿಗಳಲ್ಲಿ ಈಗಲೂ ‘ಬಿಟ್ಟಿ ಚಾಕರಿ’ ಪದ್ಧತಿ ಜೀವಂತವಾಗಿದೆ. ಈ ಹಳ್ಳಿಗಳಲ್ಲಿ ಒಟ್ಟು 3,387 ದಲಿತ ಕುಟುಂಬಗಳು ಯಾವುದೇ ಮಜೂರಿ ಪಡೆಯದೆಯೇ ಜಮೀನ್ದಾರರ ಮನೆಗಳಲ್ಲಿ ನಿತ್ಯ ಕೆಲವು ಗಂಟೆ ಕೆಲಸ ಮಾಡುತ್ತಿವೆ.

ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಸ್ಥೆ ನಡೆಸಿದ ಸಮೀಕ್ಷಾ ವರದಿ ಜೀತ ಪದ್ಧತಿಗಿಂತಲೂ ಕರಾಳವಾದ ‘ಬಿಟ್ಟಿ ಚಾಕರಿ’ ಪದ್ಧತಿಯ ಹಿಂದಿನ ಅಮಾನವೀಯತೆಯ ಬಗ್ಗೆ ಬೆಳಕು ಚೆಲ್ಲಿದೆ.

ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲೂ ಈ ಆಚರಣೆ ಗಂಭೀರ ಪ್ರಮಾಣದಲ್ಲಿದೆ. ಆದರೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಕಂಡು ಬಂದಿಲ್ಲ ಎನ್ನುತ್ತಾರೆ ಜೀವಿಕ ಸಂಸ್ಥೆಯ ಸಂಚಾಲಕ ಕಿರಣ ಕಮಲ ಪ್ರಸಾದ.

ಸ್ವರೂಪ ಹೇಗೆ?: ದಲಿತ ಕುಟುಂಬಗಳು ಬೆಳಿಗ್ಗೆ ಅಥವಾ ಸಂಜೆ ಒಂದೆರಡು ಗಂಟೆ ಜಮೀನ್ದಾರರ ಮನೆಯಂಗಳಕ್ಕೆ ಸಗಣಿ ಬಳಿಯುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದು, ದನಕರುಗಳ ಆರೈಕೆ, ಹೆಂಡಿ ಕಸ ಎತ್ತುವುದು, ದವಸ ಧಾನ್ಯ ಹಸನು ಮಾಡುವುದು, ಕಟ್ಟಿಗೆ ಒಡೆಯುವುದು ಮುಂತಾದ ಕೆಲಸ ಮಾಡಬೇಕಾಗುತ್ತದೆ. ದಿನವಿಡೀ ಬೇರೆ ಬೇರೆ ಮನೆಗಳಲ್ಲಿ ಇಂತಹ ಕೆಲಸ ಮಾಡುವ ಕುಟುಂಬಗಳೂ ಇವೆ.

ಮದುವೆ, ನಿಶ್ಚಿತಾರ್ಥ ಸಂದರ್ಭಗಳಲ್ಲಿ ಧಣಿಗಳ ಮನೆ ಸಿಂಗರಿಸುವುದು, ಊಟದ ಎಲೆ ತೆಗೆಯುವುದು, ಪಾತ್ರೆ ತೊಳೆಯುವುದು ಮತ್ತಿತರ ಕೆಲಸಗಳ ಹೆಚ್ಚುವರಿ ಹೊರೆಯನ್ನೂ ನಿಭಾಯಿಸಬೇಕು. ಜಾತ್ರೆ ಸಂದರ್ಭದಲ್ಲಿ ದೇವರ ಕಾರ್ಯಕ್ಕೆ ಹಲಗಿ ಬಡಿಯಬೇಕು. ಮಾಲೀಕರ ಮನೆಯ ಕೊಟ್ಟಿಗೆಗೆ ಸುಣ್ಣ ಬಣ್ಣ ಬಳಿಯಬೇಕು. ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಅಡಿ (ತಿಪ್ಪೆ ಗುಂಡಿ) ತಿರುವಿ ಹಾಕಬೇಕು. ನಾಗರ ಪಂಚಮಿ ಸಂದರ್ಭದಲ್ಲಿ ಬಾರುಕೋಲು ಮಾಡಿಕೊಡಬೇಕು.

ಸಾವಿನ ಅಥವಾ ತಿಥಿ ಸಂದರ್ಭದಲ್ಲಿ ಹಲಗಿ ಬಡಿಯುವುದು, ಪಂಜು ಹಿಡಿಯುವುದು, ಶವ ಇಟ್ಟ ಜಾಗ ಸ್ವಚ್ಛಗೊಳಿಸುವುದು ಹಾಗೂ ಸಾಂತ್ವನ ಹೇಳಲು ಬಂದವರ ಸತ್ಕಾರದ ಹೊಣೆಯನ್ನು ಈ ಕುಟುಂಬಗಳಿಗೆ ವಹಿಸಲಾಗುತ್ತದೆ. ಶೋಕದ ದಿನಗಳಲ್ಲಿ ಈ ಕುಟುಂಬಗಳು ಬೇರೆಡೆ ಕೆಲಸಕ್ಕೆ ಹೋಗುವಂತಿಲ್ಲ. ಭೂಮಾಲೀಕರ ಹಸು, ಎಮ್ಮೆ ಸತ್ತಾಗ ಅವುಗಳನ್ನು ಊರ ಹೊರಗೆ ಸಾಗಿಸಿ ಚರ್ಮ ಬಿಡಿಸುವ ಕಾರ್ಯವನ್ನೂ ಮಾಡಬೇಕಾಗುತ್ತದೆ.

‘ಈ ಕಾರ್ಮಿಕರಿಗೆ ಭೂಮಾಲೀಕರು ಚಹಾ, ಒಂದೆರಡು ತಂಗಳು ರೊಟ್ಟಿ ಕೊಟ್ಟರೆ ಹೆಚ್ಚು. ಕೆಲವೆಡೆ, ವರ್ಷಕ್ಕೆ ಒಂದು ದನಕ್ಕೆ ಒಂದು ಚೀಲ ಜೋಳವನ್ನು ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಗೋಧಿ, ಶೇಂಗಾ, ಬೇಳೆ, ಬೆಲ್ಲ ನೀಡುತ್ತಾರೆ. ಬೀದರ್‌ನಲ್ಲಿ ಒಂದೆರಡು ಕಡೆ ದವಸದ ಬದಲು ₹ 1 ಸಾವಿರ ನೀಡುವ ಪರಿಪಾಟವಿದೆ. ಕೆಲವೆಡೆ ಹಳೆ ಪಾತ್ರೆ ಬಟ್ಟೆಗಳನ್ನು ನೀಡುತ್ತಾರೆ’ ಎಂದು ಕಿರಣ ಕಮಲ ಪ್ರಸಾದ ತಿಳಿಸಿದರು.

‘ಬಿಟ್ಟಿ ಚಾಕರಿ ಮಾಡಲು ನಿರಾಕರಿಸುವ ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ ಹಾಕಿದ ಉದಾಹರಣೆಗಳೂ ಇವೆ. ಹಾಗಾಗಿ ಸಾಂಪ್ರದಾಯಿಕ ನಿರ್ಬಂಧವನ್ನು ಕಡಿದುಕೊಳ್ಳುವ ಧೈರ್ಯವನ್ನು ಈ ಕುಟುಂಬಗಳು ಪ್ರದರ್ಶಿಸುವುದಿಲ್ಲ. ಈ ಪದ್ಧತಿಗೂ ಜಾತಿ ವ್ಯವಸ್ಥೆಗೂ ನಿಕಟ ಸಂಬಂಧ ಇದೆ. ಈ ರೀತಿ ಶೋಷಣೆಗೆ ಒಳಗಾಗುತ್ತಿರುವುದು ದಲಿತರು ಮಾತ್ರ’ ಎಂದರು.

‘ಬಿಟ್ಟಿ ಚಾಕರಿ ಜೀತ ಎಂದು ಪರಿಗಣಿಸಿ’

‘ಜೀತ ಪದ್ಧತಿ ರದ್ಧತಿ ಕಾಯ್ದೆ 1976ರ ಅಡಿ ಬಿಟ್ಟಿ ಚಾಕರಿಯನ್ನು ಜೀತ ಎಂದು ಪರಿಗಣಿಸುವುದಕ್ಕೆ ಅವಕಾಶವಿದೆ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿಲ್ಲ. ಜೀತವಿಮುಕ್ತರ ಪುನರ್ವಸತಿಗೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ಬಿಟ್ಟಿ ಚಾಕರಿ ನಡೆಸುವ ಕುಟುಂಬಗಳಿಗೂ ಅನ್ವಿಯಿಸಬೇಕು’ ಎಂದು ಜೀವಿಕ ಸಂಸ್ಥೆ ಒತ್ತಾಯಿಸಿದೆ.

ವಿಚಾರಸಂಕಿರಣ 23ರಂದು

ಜೀವಿಕ ಇದೇ 23ರಂದು ಬೆಳಿಗ್ಗೆ 11ರಿಂದ ನಗರದ ಶಾಸಕರ ಭವನದಲ್ಲಿ ‘ಬಿಟ್ಟಿ ಚಾಕರಿ’ ಕುರಿತು ವಿಚಾರಸಂಕಿರಣ ಏರ್ಪಡಿಸಿದೆ. 2018ರ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ 15 ಜಿಲ್ಲೆಗಳ ಹಳ್ಳಿ ಹಳ್ಳಿಗೂ ತೆರಳಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಂಡ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.

ಬೇಡಿಕೆಗಳು
* ಬಿಟ್ಟಿ ಚಾಕರಿ ಮಾಡುವ ಕುಟುಂಬಗಳಿಗೆ ಕನಿಷ್ಠ 5 ಎಕರೆ ವ್ಯವಸಾಯ ಜಮೀನು ಒದಗಿಸಬೇಕು

* ಸ್ವಉದ್ಯೋಗಕ್ಕೆ ನೆರವು ನೀಡಬೇಕು

* ಉದ್ಯೋಗ ಖಾತರಿ ಯೋಜನೆಯಡಿ ಕೆಲಸ

* ಮನೆ ನಿರ್ಮಿಸಿಕೊಡಬೇಕು

* ಶಿಕ್ಷಣ ನೀಡಬೇಕು

ಬಿಟ್ಟಿ ಚಾಕರಿಯಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕು
- ಕಿರಣ ಕಮಲ ಪ್ರಸಾದ, ಜೀವಿಕ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT