ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನ ಬೆಟ್ಟ: ಬರಿದಾದ ಜೀವಜಲ

Last Updated 20 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ಯಳಂದೂರು: ಉರಿ ಬಿಸಿಲು ಪ್ರತಿದಿನ ಹೆಚ್ಚುತ್ತಲೇ ಇದೆ. ವನ್ಯಜೀವಿಗಳ ದಾಹ ನೀಗಿಸುತ್ತಿದ್ದ ಕಾಡಿನ ಕೆರೆ ಕಟ್ಟೆಗಳು ಬರಿದಾಗುತ್ತಿವೆ. ಕೆಲವೆಡೆ ನೀರು ತಳ ಕಂಡಿದೆ. ಕಾಡುಪ್ರಾಣಿಗಳು ನೀರಿಗಾಗಿ ಹುಡುಕಾಟ ಆರಂಭಿಸಿವೆ. ಜೀವ ಜಲಕ್ಕಾಗಿ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ.

ತಾಲ್ಲೂಕಿನ ಬಿಳಿಗಿರಿರಂಗನಬನದಲ್ಲಿ ಭಾರ್ಗವಿ ನದಿ ಸೇರಿದಂತೆ 25ಕ್ಕೂ ಹೆಚ್ಚು ಕಾಲುವೆಗಳು ಹರಿಯುತ್ತವೆ. ಆದರೆ ಈಗ ಅಭಯಾರಣ್ಯದ ಒಳಗಿನ ಅನೇಕ ನೀರಿನ ಬುಗ್ಗೆಗಳು ಇಂಗಿ ಹೋಗಿವೆ. ಚಿಕ್ಕ ಮತ್ತು ಮಧ್ಯಮ ಗಾತ್ರದ ಕೆರೆಗಳಲ್ಲಿ ನೀರಿನ ಒರತೆ ಕುಸಿದಿದೆ. ನವಿಲುಕೆರೆ, ಚೈನ್‌ಗೇಟ್ ಬಳಿಯ ಕೆರೆ, ಹೊಂಡಗಳು ಬರಿದಾಗಿದ್ದು, ಕೆಸರು ಕಾಣಿಸಿಕೊಂಡಿದೆ. ಕೃಷ್ಣಯ್ಯನ ಕಟ್ಟೆಯಲ್ಲಿ ಮಾತ್ರ ನೀರಿನ ಸಂಗ್ರಹವಿದೆ.

ಬೆಟ್ಟದ ನಡುವಿನ ಕೆರೆಕಟ್ಟೆಗಳಲ್ಲಿ ಮಾರ್ಚ್‌ ತಿಂಗಳಲ್ಲೇ ನೀರಿನ ಲಭ್ಯತೆ ಕುಸಿದಿದೆ. ಇದರಿಂದ ಆನೆಗಳ ಜಲ ವಿಹಾರ, ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಆನೆಗಳ ದೇಹದ ಶಾಖ ನೀಗಲು ಜೀವಜಲ ಅತ್ಯಗತ್ಯ. ಕೆಸರು ತುಂಬಿದ ನೀರು ಸೇವನೆಯಿಂದ ಭೇದಿ ಸಹ ಕಾಣಿಸಿಕೊಳ್ಳುತ್ತದೆ. ನಿರ್ಜಲೀಕರಣದಂತಹ ಸಮಸ್ಯೆಗಳು ಕಂಟಕವಾಗಲಿವೆ ಎನ್ನುತ್ತಾರೆ ‘ಏಟ್ರೀ’ ತಜ್ಞ ಸಿ.ಮಾದೇಗೌಡ.

ಶಿಖರಗಳ ಎತ್ತರ ಪ್ರದೇಶಗಳಲ್ಲಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ವರೆಗೆ ಏರಿಕೆಯಾಗುತ್ತದೆ. ಈಗ 32 ಡಿಗ್ರಿಗೆ ಹೆಚ್ಚಳವಾಗಿದೆ. ವರ್ಷದ 3 ತಿಂಗಳು ಬಿಟ್ಟರೆ ಉಳಿದ ದಿನಗಳಲ್ಲಿ ಇಲ್ಲಿ ಮಳೆ ಸುರಿಯುತ್ತಿತ್ತು. ಸದಾ ತೇವಾಂಶ ಇರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ಮಾರುತಗಳ ಪ್ರಭಾವ ಅಷ್ಟಾಗಿ ಕಂಡುಬಂದಿಲ್ಲ. ಹಾಗಾಗಿ ಮಳೆ ಕೊರತೆ ಎದುರಾಗಿದೆ.

ನೀರಿಗಾಗಿ ಸಂಜೆ ವೇಳೆಗೆ ಬಹಳಷ್ಟು ಜೀವಿಗಳು ಜನವಸತಿ ಬಳಿ ಕಾಣಿಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ನಾಗೇಂದ್ರ.

ಮಳೆ ಕಾಡುಗಳಲ್ಲಿ ವಾರ್ಷಿಕ ಸರಾಸರಿ 250 ಸೆಂ.ಮೀ ಮಳೆ ಸುರಿದಿರುವ ದಾಖಲೆ ಇದೆ. ಮಳೆ ಹೆಚ್ಚು ಸುರಿದಾಗ ಅರಣ್ಯ ಸಂಪನ್ಮೂಲ ವೃದ್ಧಿಸಿ, ವನ್ಯಜೀವಿಗಳ ಆವಾಸಕ್ಕೂ ಹಿತಕರ ವಾತಾವರಣ ನಿರ್ಮಾಣವಾಗುತ್ತದೆ. ಕಾಳ್ಗಿಚ್ಚಿನ ಹಾವಳಿಯೂ ಇರುವುದಿಲ್ಲ.

‘ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಸರಾಸರಿ 125 ಸೆಂ.ಮೀ.ಗೆ ಕುಸಿದಿದೆ. ಪ್ರಸಕ್ತ ವರ್ಷ 90.5 ಸೆಂ.ಮೀ ಮಾತ್ರ ದಾಖಲಾಗಿದೆ. ಸರಿಯಾಗಿ ಮಳೆಯಾಗದೆ ಕೆರೆ ಕಟ್ಟೆಗಳು ಭರ್ತಿಯಾಗಿಲ್ಲ. ಹಳ್ಳ ಕೊಳ್ಳಗಳು ತುಂಬಿ ಹರಿದಿಲ್ಲ. ಹಾಗಾಗಿ ಏಪ್ರಿಲ್‌ ವೇಳೆಗೆ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಕಾಡಲಿದೆ’ ಎನ್ನುತಾರೆ 25 ವರ್ಷಗಳ ಮಳೆ ದಾಖಲಾತಿ ಸಂಗ್ರಹಿಸಿರುವ ವಿಜಿಕೆಕೆ ಸಸ್ಯತಜ್ಞ ರಾಮಾಚಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT