ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೂ ಬಯೊಮೆಟ್ರಿಕ್‌ ಹಾಜರಾತಿ?

Last Updated 23 ನವೆಂಬರ್ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳು ತರಗತಿಗಳಿಗೆ ಗೈರುಹಾಜರಾಗುವುದನ್ನು ತಪ್ಪಿಸಲು ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಪರಿಚಯಿಸಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಚಿಂತನೆ ನಡೆದಿದೆ.

ಈ ವ್ಯವಸ್ಥೆ ಜಾರಿಯಿಂದ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಅಧ್ಯಾಪಕರು ತರಗತಿಗಳನ್ನು ತೆಗೆದುಕೊಳ್ಳದೆ ಕಾಲಹರಣ ಮಾಡುವುದು ಸಹ ತಪ್ಪಲಿದೆ ಎಂಬುದು ಇಲಾಖೆಯ ಲೆಕ್ಕಚಾರ. ಈಗಾಗಲೇ, ಪಿ.ಯು. ಮತ್ತು ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನು ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನ್ವಯಿಸಲು ಉನ್ನತ ಶಿಕ್ಷಣ ಸಚಿವರೇ ಒಲವು ತೋರಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ತಾಂತ್ರಿಕ ವಿವಿಗಳ ಕುಲಪತಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ , ‘ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಚಿಂತನೆ ಇದೆ. ಬಯೊಮೆಟ್ರಿಕ್‌ನಿಂದ ಸಕಾರಾತ್ಮಕ ಬದಲಾವಣೆ ಆಗುತ್ತದೆ ಎನ್ನುವುದಾದರೆ, ಅದನ್ನು ಅಳವಡಿಸಿಕೊಳ್ಳುತ್ತೇವೆ. ಆ ಕುರಿತು ಇನ್ನೂ ಅಂತಿಮ ರೂಪರೇಷೆಗಳು ಸಿದ್ಧಗೊಂಡಿಲ್ಲ’ ಎಂದು ಹೇಳಿದರು.

ಹೀಗಿರಲಿದೆ ಅಂತೆ ವ್ಯವಸ್ಥೆ: ‘ಒಂದು ವೇಳೆ ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಯಾದರೆ, ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸುವ ಮುನ್ನ ಮತ್ತು ಕಾಲೇಜಿನಿಂದ ಹೊರಹೊಗುವ ಮುನ್ನ ಬೆರಳಚ್ಚಿನ ಹಾಜರಿ(ಬಯೊಮೆಟ್ರಿಕ್‌) ಹಾಕಬೇಕು. ಇದರೊಂದಿಗೆ ತರಗತಿಯಲ್ಲಿ ಅಧ್ಯಾಪಕರು ತೆಗೆದುಕೊಳ್ಳುವ ಹಾಜರಾತಿಯು ಮುಂದುವರಿಯಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಹಾಜರಾತಿ ನಿಖರವಾಗಿ ತಿಳಿಯಲಿದೆ. ಆಗ ಪರೀಕ್ಷಾ ಪ್ರವೇಶಪತ್ರ ನೀಡುವಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ತರಗತಿಗಳಿಗೆ ಚಕ್ಕರ್‌ ಹೊಡೆದು, ನಂತರ ಪ್ರಭಾವ ಬಳಸಿ ಅಥವಾ ಇಂತಿಷ್ಟು ಹಣ ನೀಡಿ ಪರೀಕ್ಷೆಗೆ ಹಾಜರಾಗುವ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ’ ಎಂದು ಅವರು ಹೇಳಿದರು.

‘ಅಧ್ಯಾಪಕರು ಬೆರಳೆಣಿಕೆ ಸಂಖ್ಯೆಯಲ್ಲಿ ಇರುತ್ತಾರೆ. ಅವರಿಗೆ ಬಯೊಮೆಟ್ರಿಕ್‌ ಹೊಂದುತ್ತದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಕಾಲೇಜಿನ ಪ್ರತಿ ತರಗತಿಯ ಮುಂದೆ ಬಯೊಮೆಟ್ರಿಕ್‌ ಯಂತ್ರ ಅಳವಡಿಸಬೇಕಾಗುತ್ತದೆ. ಅಲ್ಲಿ ಹಾಜರಾತಿ ನೀಡಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಈ ಯೋಜನೆ ಕಾರ್ಯಸಾಧುವಲ್ಲ’ ಎಂದು ಪ್ರಾಂಶುಪಾಲರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT