ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಧ್ಯಕ್ಷ ಹುದ್ದೆಗೆ ಬೋಪಯ್ಯ ಬದಲು ಕಾಗೇರಿ ಏಕೆ?

Last Updated 30 ಜುಲೈ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ಸಭಾಧ್ಯಕ್ಷ ಹುದ್ದೆಗೆ ಶಾಸಕ ಕೆ.ಜಿ.ಬೋಪಯ್ಯ ಹೆಸರನ್ನು ನಿರಾಕರಿಸಿ ಶಿರಸಿ–ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸೂಚಿಸುವ ಮೂಲಕ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಶಾಕ್‌ ನೀಡಿದ್ದಾರೆ.

ಬೋಪಯ್ಯ ಅವರ ಹೆಸರನ್ನು ಆಯ್ಕೆ ಮಾಡಿರುವುದನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್‌ ಅವರು ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ಗಮನಕ್ಕೆ ಸೋಮವಾರ ರಾತ್ರಿ ವೇಳೆ ತಂದಿದ್ದರು. ಇದನ್ನು ಒಪ್ಪದ ನಡ್ಡಾ ಸಂಭಾವ್ಯರ ಪಟ್ಟಿಯಲ್ಲಿ ಬೇರೆ ಯಾರ ಹೆಸರುಗಳು ಇದ್ದವು, ಅವುಗಳನ್ನು ಕಳಿಸಿ ಎಂಬುದಾಗಿ ಸೂಚಿಸಿದ್ದರು.

ತಕ್ಷಣವೇ ಸುರೇಶ್‌ಕುಮಾರ್‌, ಜಗದೀಶ ಶೆಟ್ಟರ್‌ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಕಳುಹಿಸಲಾಯಿತು. ವಿಶ್ವೇಶ್ವರ ಹೆಗಡೆ ಅವರ ಹೆಸರನ್ನು ಅಂತಿಮಗೊಳಿಸಿದ ನಡ್ಡಾ, ಅವರಿಂದಲೇ ನಾಮಪತ್ರ ಸಲ್ಲಿಸಿ ಎಂದು ರಾಜ್ಯದ ನಾಯಕರಿಗೆ ಮಂಗಳ ವಾರ ಬೆಳಿಗ್ಗೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ಈ ಹಿಂದೆ ಸಭಾಧ್ಯಕ್ಷರಾಗಿದ್ದ ಬೋಪಯ್ಯ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದರು. ಅವರಿಂದ ಮತ್ತೆ ಪಕ್ಷ ಮುಜುಗರ ಅನುಭವಿಸುವುದು ಬೇಡ ಎಂಬ ಕಾರಣಕ್ಕೆ ಬೋಪಯ್ಯ ಹೆಸರನ್ನು ಕೈಬಿಡಲಾಗಿದೆ. ವರಿಷ್ಠರ ಅನುಮತಿ ಇಲ್ಲದೇ ಯಾವುದೇ ಆಯ್ಕೆ ಸಾಧ್ಯವಿಲ್ಲ ಎಂಬುದರ ಸೂಚನೆಯೂ ಇದಾಗಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಅವಿರೋಧ ಆಯ್ಕೆ ಖಚಿತ

ವಿಧಾನಸಭಾಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ವಿರೋಧ ಪಕ್ಷದಿಂದ ಯಾರೂ ಕಣಕ್ಕೆ ಇಳಿಯದ ಕಾರಣ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ. ಅವರ ಆಯ್ಕೆಯ ಪ್ರಕಟಣೆ ಬುಧವಾರ ಹೊರಬೀಳಲಿದೆ.

ಎಬಿವಿಪಿಯಿಂದ ಸಭಾಧ್ಯಕ್ಷರವರೆಗೆ

ವಿಶ್ವೇಶ್ವರ ಹೆಗಡೆ ಕಾಗೇರಿ ಸರಳ,ಸಜ್ಜನ ರಾಜಕಾರಣಿ ಎಂದೇ ಪರಿಚಿತರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆಗ ತಮ್ಮ ಮಕ್ಕಳನ್ನು ಊರಿನ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಸಚಿವರಾಗಿದ್ದಾಗಲೂ ಸರ್ಕಾರಿ ಬಂಗಲೆಗೆ ಹೋಗದ ಅವರು, ಶಾಸಕರ ಭವನದಲ್ಲೇ ಉಳಿದುಕೊಂಡಿದ್ದರು. ಶಿರಸಿಗೆ ಹೋದಾಗಲೂ ಪ್ರವಾಸಿ ಮಂದಿರದ ಕಡೆ ಹೋಗುವ ಅಭ್ಯಾಸವನ್ನೇ ಇಟ್ಟುಕೊಂಡವರಲ್ಲ. ಎಷ್ಟೇ ಆಪ್ತರು ಬಂದರೂ ನಿಯಮ ಬಿಟ್ಟು ಕೆಲಸ ಮಾಡಿಸಿಕೊಟ್ಟ ಉದಾಹರಣೆಗಳಿಲ್ಲ. ಅಂತಹ ಮನವಿಗಳನ್ನು ನಯವಾಗಿಯೇ ಬದಿಗಿಡುತ್ತಿದ್ದರು ಎಂದು ಅವರ ಆಪ್ತರು ಹೇಳುವುದುಂಟು.

ವಿದ್ಯಾರ್ಥಿ ಜೀವನದಲ್ಲಿ ಎವಿಬಿಪಿ ಕಾರ್ಯಕರ್ತರಾಗಿದ್ದರು. 1990ರಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದರು. 1994 ರಲ್ಲಿ ಅಂಕೋಲಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. ಆ ಕ್ಷೇತ್ರದಲ್ಲಿ ನಿರಂತರ ಮೂರು ಬಾರಿ, ಆ ಬಳಿಕ 2008, 2013 ಮತ್ತು 2018 ರಲ್ಲಿ ಸತತವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT