ಜಿಂದಾಲ್‌ಗೆ ಜಮೀನು: ಹೋರಾಟಕ್ಕೆ ಬಿಜೆಪಿ ಸಜ್ಜು

ಮಂಗಳವಾರ, ಜೂನ್ 18, 2019
31 °C
ಬರ ಪೀಡಿತ ಪ್ರದೇಶದಲ್ಲಿ ಬಿಎಸ್‌ವೈ ಪ್ರವಾಸ

ಜಿಂದಾಲ್‌ಗೆ ಜಮೀನು: ಹೋರಾಟಕ್ಕೆ ಬಿಜೆಪಿ ಸಜ್ಜು

Published:
Updated:
Prajavani

ಬೆಂಗಳೂರು: ಜಿಂದಾಲ್‌ ಕಂಪನಿಗೆ 3,663 ಎಕರೆ ಭೂಮಿ ಮಾರಾಟ ಮಾಡುವುದನ್ನು ಕೈಬಿಡುವಂತೆ ಮತ್ತು ಬರ ಪೀಡಿತ ಪ್ರದೇಶದಲ್ಲಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಲು ರಾಜ್ಯ ಸರ್ಕಾರ ವಿರುದ್ಧ ಹೋರಾಟ ಆರಂಭಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಪಕ್ಷದ ನೂತನ ಸಂಸದರಿಗೆ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಜಿಂದಾಲ್‌ಗೆ ಭೂಮಿ ಮಾರಾಟದ ಹಿಂದೆ ಭಾರಿ ಅವ್ಯವಹಾರವಿದೆ ಎಂದು ಆರೋಪಿಸಿದರು.

ಈ ಎಲ್ಲ ವಿಷಯಗಳ ಸಂಬಂಧ ಹೋರಾಟ ಹಮ್ಮಿಕೊಳ್ಳಲು ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.

ಕಬ್ಬಿಣದ ಅದಿರಿನ ನಿಕ್ಷೇಪವಿರುವ ಭೂಮಿಯನ್ನು ಕಡಿಮೆ ಬೆಲೆಗೆ ಜಿಂದಾಲ್‌ ಕಂಪನಿಗೆ ಮಾರಾಟ ಮಾಡಿ, ಶುದ್ಧ ಕ್ರಯಪತ್ರ ನೀಡಲು ಸರ್ಕಾರ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲೂ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಯವರ ಈ ನಿರ್ಧಾರವನ್ನು ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ ಕಟುವಾಗಿ ವಿರೋಧಿಸಿದ್ದಾರೆ. ಭೂಮಿಯನ್ನು ಗಣಿಗಾರಿಕೆಗಾಗಿ ಲೀಸ್‌ ಮೇಲೆ ನೀಡಲು ಆಕ್ಷೇಪವಿಲ್ಲ. ಆದರೆ, ಮಾರಾಟಕ್ಕೆ ಬಿಲ್‌ಕುಲ್‌ ಅವಕಾಶ ನೀಡುವುದಿಲ್ಲ. ಇದಕ್ಕೆ ಒಪ್ಪಿಗೆ ನೀಡಬಾರದೆಂದು ಕೇಂದ್ರಕ್ಕೂ ಮನವಿ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

‘ಫೈವ್‌ಸ್ಟಾರ್‌’ ಮುಖ್ಯಮಂತ್ರಿ:  ಅಧಿಕಾರಕ್ಕೆ ಬಂದ ದಿನದಿಂದ ‘ಫೈವ್‌ಸ್ಟಾರ್‌’ ಹೋಟೆಲ್‌ನಲ್ಲೇ ಕಾಲ ಕಳೆದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ‘ಶಾಲಾ ವಾಸ್ತವ್ಯ’ದ ನಾಟಕ ಆರಂಭಿಸಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲ, ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಅಭಾವ ಎಲ್ಲೆಡೆ ಕಾಡುತ್ತಿದೆ. ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

‘ಮೊದಲಿಗೆ ಬರ ಪರಿಹಾರದ ಕಾರ್ಯಕ್ರಮಗಳನ್ನು ಆರಂಭಿಸಿ, ಜನರ ಸಂಕಷ್ಟಗಳಿಗೆ ಸ್ಪಂದಿಸಿ. ಆ ಮೇಲೆ ಶಾಲಾ ವಾಸ್ತವ್ಯದ ಬೂಟಾಟಿಕೆ ಮಾಡಿಕೊಳ್ಳಿ. ಕುಮಾರಸ್ವಾಮಿ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಗ್ರಾಮಗಳಿಗೆ ತಲಾ ₹ 1 ಕೋಟಿ ಕೊಡುವುದಾಗಿ ಬುರುಡೆ ಬಿಟ್ಟಿದ್ದರು. ಹಣವನ್ನು ಈವರೆಗೂ ಕೊಟ್ಟಿಲ್ಲ’ ಎಂದು ದೂರಿದರು.

‘ಇವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪಕ್ಷದ 105 ಶಾಸಕರು ಮತ್ತು 25 ಸಂಸದರು ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

ರಾಜ್ಯದ ಜತೆ ಸಂಘರ್ಷವಿಲ್ಲ: ರಾಜ್ಯ ಸರ್ಕಾರದ ಜತೆ ಸಂಘರ್ಷ ಮಾಡದೇ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಇಲಾಖೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

‘ಪ್ರದೇಶ, ರಾಜ್ಯ ಮತ್ತು ದೇಶದ ಹಿತಾಸಕ್ತಿಯೇ ನಮ್ಮ ಆದ್ಯತೆ. ರಾಜ್ಯದ ಜನರ ದೂರು–ದುಮ್ಮಾನ ಆಲಿಸಲು ದೆಹಲಿಯಲ್ಲಿ ಪ್ರತ್ಯೇಕ ಕಾರ್ಯಾಲಯ ಆರಂಭಿಸಲಾಗುವುದು. ರಾಜ್ಯ ಬಿಜೆಪಿ ಕಚೇರಿಯಲ್ಲೂ ಕೇಂದ್ರ ಸಚಿವರು 15 ದಿನಗಳಿಗೊಮ್ಮೆ ಅರ್ಧ ದಿನ ಇದ್ದು, ಕಾರ್ಯಕರ್ತರ ಅಹವಾಲು ಆಲಿಸುವುತ್ತೇವೆ’ ಎಂದು ಭರವಸೆ ನೀಡಿದರು.

ಹೊಸದಾಗಿ ಆಯ್ಕೆಯಾದ 25 ಸಂಸದರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸಂಸದರಿಗೂ ಸಂವಿಧಾನದ ಪ್ರತಿಗಳನ್ನು ನೀಡಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !