ಶನಿವಾರ, ಡಿಸೆಂಬರ್ 7, 2019
22 °C
ಕಾಂಗ್ರೆಸ್‌ ಹೈಕಮಾಂಡ್‌ ಮೊರೆ ಹೋದ ಸಿ.ಎಂ

ತಲ್ಲಣ ಸೃಷ್ಟಿಸಿದ ಆಡಿಯೊ: ಸರ್ಕಾರ ಕೆಡವಲು ಸಂಚು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಆಪರೇಷನ್‌ ಕಮಲಕ್ಕೆ ಪುನಃ ವೇದಿಕೆ ಸಿದ್ಧವಾಗಿದೆ’ ಎಂಬ ಸುದ್ದಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಆತಂಕ ಸೃಷ್ಟಿಸಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ದೂರವಾಣಿ ಸಂಭಾಷಣೆ ಒಳಗೊಂಡ ಆಡಿಯೊ ಬಹಿರಂಗವಾಗಿದೆ. ಇಬ್ಬರ ನಡುವಿನ ಸಂಭಾಷಣೆ ಹಿಂದಿಯಲ್ಲಿದೆ.

ಸಂಪುಟ ವಿಸ್ತರಣೆಗೆ ದೋಸ್ತಿಗಳು ಕಸರತ್ತು ಆರಂಭಿಸಿರುವ ನಡುವೆಯೇ ವಿರೋಧಿ ಪಾಳೆಯದಿಂದ ಡಜನ್‌ ಶಾಸಕರನ್ನು ಎಳೆಯುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಆಡಿಯೊ ಸಂಭಾಷಣೆ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ಮೇಲೆ ಮುಗಿಬಿದ್ದಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ಬಹುಮತ ಇಲ್ಲದೆಯೇ ಸರ್ಕಾರ ರಚನೆಗೆ ಮುಂದಾಗಿ ಮುಖಭಂಗ ಅನುಭವಿಸಿದ ಬಿಜೆಪಿ, ಈಗ ಹಣ ಬಲದಿಂದ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರಲು ಷಡ್ಯಂತ್ರ ರೂಪಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ನಾಯಕ ಶ್ರೀರಾಮುಲು ಅವರ ಆಪ್ತ ಸಹಾಯಕ ಮಂಜುನಾಥ್‌ ಎಂಬುವರು ದುಬೈ ಮೂಲದ ಉದ್ಯಮಿಯೊಬ್ಬರ ಜತೆ ದೂರವಾಣಿಯಲ್ಲಿ ಮಾತನಾಡುವಾಗ ಸರ್ಕಾರ ಪತನಗೊಳಿಸುವ ಸಂಚಿನ ವಿವರಗಳು ಆಡಿಯೊದಲ್ಲಿವೆ. ಆದರೆ, ಇದನ್ನು ಶ್ರೀರಾಮುಲು ನಿರಾಕರಿಸಿದ್ದಾರೆ. ‘ನನ್ನ ಆಪ್ತ ಸಹಾಯಕನಿಗೆ ಹಿಂದಿಯೇ ಬರುವುದಿಲ್ಲ, ಇನ್ನು ಮಾತನಾಡುವುದೆಲ್ಲಿ’ ಎಂದು ಕೇಳಿದ್ದಾರೆ. 

ಗುಪ್ತದಳದ ಅಧಿಕಾರಿಗಳು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈ ಆಡಿಯೊ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಪಕ್ಷ ಬಿಟ್ಟು ಬಂದರೆ ಸಂಪುಟ ದರ್ಜೆಯ ಸಚಿವ ಸ್ಥಾನದ ಜತೆಗೆ ತಲಾ ₹ 25 ಕೋಟಿ ಹಣ ನೀಡುತ್ತೇವೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬನ್ನಿ, ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು. ಸಂಪೂರ್ಣ ವೆಚ್ಚ ಭರಿಸುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ’ ಎಂದು ಉದ್ಯಮಿಗೆ ಮಂಜುನಾಥ್‌ ತಿಳಿಸಿದ್ದಾರೆ.

ಸರ್ಕಾರ ಪತನಗೊಳಿಸುವ ಸಂಚಿನಲ್ಲಿ ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ರೆಡ್ಡಿ, ಶ್ರೀರಾಮುಲು ಕೈಜೋಡಿಸಿದ್ದಾರೆ ಎಂಬ ಮಾತು ಆಡಿಯೋದಲ್ಲಿದೆ.

ಈ ಆಡಿಯೊ ಸಿಗುತ್ತಿದ್ದಂತೆ ಕಳವಳಕ್ಕೀಡಾದ ಕುಮಾರಸ್ವಾಮಿ, ಕಾಂಗ್ರೆಸ್‌ ಹೈಕಮಾಂಡ್‌ಗೆ ಮಾಹಿತಿ ಮುಟ್ಟಿಸಿದ್ದು, ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

‘ನಾವು ಕಾಂಗ್ರೆಸ್‌ನಲ್ಲೇ ಇರುತ್ತೇವೆ’: ‘ನಾವು ಕಾಂಗ್ರೆಸ್‌ ಬಿಟ್ಟು ಬೇರೆ ಎಲ್ಲಿಗೂ ಹೋಗುವುದಿಲ್ಲ. ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ. ಈಗ ಹರಡಿರುವ ಸುದ್ದಿ ಊಹಾಪೋಹ’ ಎಂದು ಶಾಸಕರಾದ ಭೀಮಾನಾಯ್ಕ ಮತ್ತು ಜೆ.ಎನ್‌. ಗಣೇಶ್‌ ಬಳ್ಳಾರಿಯಲ್ಲಿ ಸ್ಪಷ್ಟಪಡಿಸಿದರು.

ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ‘ಧ್ವನಿ ಮುದ್ರಿಕೆಯಲ್ಲಿರುವುದು ಯಾರ ಧ್ವನಿ? ಎಲ್ಲಿ ಮಾತನಾಡಿರುವುದು, ನಮ್ಮ ಹೆಸರುಗಳನ್ನು ಏಕೆ ಉಲ್ಲೇಖಿಸಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು’ ಎಂದರು.

ಸರ್ಕಾರ ಸುಭದ್ರ

‘ಬಿಜೆಪಿಯವರ ಆಪರೇಷನ್ ಕಮಲ ಹೊಸದಲ್ಲ. ಮೊದಲಿಂದಲೂ ಬಿಜೆಪಿಯವರು ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಮೂರು ದಿನ ಮುಖ್ಯಮಂತ್ರಿ ಆದರು. ಆನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರ ಸುಭದ್ರವಾಗಿದೆ. ಬೀಳಿಸಲು ಸಾಧ್ಯವಿಲ್ಲ’ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು

‘ದುಬೈ ಉದ್ಯಮಿ ಒಬ್ಬರೇ ಅಲ್ಲ, ಎಲ್ಲ ಉದ್ಯಮಿಗಳ ಜೊತೆಯೂ ಶ್ರೀರಾಮುಲು, ಬಿಜೆಪಿಯವರು ಮಾತನಾಡುತ್ತಾರೆ. ಸರ್ಕಾರ ಅದಾಗಿಯೇ ಪತನವಾದರೆ ನಾವು ಹೊಣೆಯಲ್ಲ ಎಂದೂ ಹೇಳುತ್ತಾರೆ. ಬಿಜೆಪಿಯವರು ಈಗಲೂ ಆಪರೇಷನ್ ಕಮಲಕ್ಕೆ ಪ್ರಯತ್ನ ಮುಂದುವರಿಸಿದ್ದಾರೆ’ ಎಂದರು.

‘ಸತೀಶ ಜಾರಕಿಹೊಳಿ ಹೇಳಿಕೆ ನನಗೆ ಗೊತ್ತಿಲ್ಲ. ನಾನು ಸಾಮಾನ್ಯ ಕಾರ್ಯಕರ್ತ. ಪಕ್ಷ ಹೇಳಿದ ಕೆಲಸ ಮಾಡ್ತೇನೆ’ ಎಂದು ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.

ಅಸಮಾಧಾನ ಇಲ್ಲ: ಕಾಂಗ್ರೆಸ್‌ ಶಾಸಕರಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಾಸಕರಲ್ಲಿ ಒಗ್ಗಟ್ಟಿದೆ. ಸತೀಶ್‌ ಜಾರಕಿಹೊಳಿ ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ಗೆ ಹೋಗುತ್ತಾರೆ ಎಂಬುದು ಸುಳ್ಳು. ಕಾಂಗ್ರೆಸ್‌ನವರು ರೆಸಾರ್ಟ್‌ಗೆ ಹೋಗಲೇಬಾರದಾ? ಬಿಜೆಪಿಯವರು ಅಲ್ಲಿದ್ದಾರೆ ಎಂದ ಮಾತ್ರಕ್ಕೆ ಕಾಂಗ್ರೆಸ್‌ನವರು ಹೋಗಲೇಬಾರದಾ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಆಡಿಯೊ ಸಂಭಾಷಣೆ

ಶ್ರೀರಾಮುಲು ಆಪ್ತ: ಹಲೋ...

ಉದ್ಯಮಿ: ಹೇಳು ಸಾಮಿ...

ಶ್ರೀರಾಮುಲು ಆಪ್ತ: ಅದೇ, ಯಡಿಯೂರಪ್ಪ ಸಾಬ್‌ ಮತ್ತು ಶ್ರೀರಾಮುಲು ಸಾಬ್‌ ಮತ್ತೆ ಆಪರೇಷನ್‌ ಕಮಲ ಶುರುಮಾಡಿದ್ದಾರೆ...

ಉದ್ಯಮಿ: ಯಾರ್‍ಯಾರಿದ್ದಾರೆ? ಎಲ್ಲ ಹಳಬರೋ ಅಥವಾ ಹೊಸಬರೂ ಇದ್ದಾರೋ?

ಶ್ರೀರಾಮುಲು ಆಪ್ತ: ಅವರೇ 10– 12 ಶಾಸಕರು... ಆನಂದ್‌ಸಿಂಗ್‌, ನಾಗೇಂದ್ರ, ಭೀಮಾನಾಯ್ಕ್‌, ಗಣೇಶ್‌, ಬಿ.ಸಿ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ಮಸ್ಕಿ ಶಾಸಕ ಪಾಟೀಲ್ ಎಲ್ಲರೂ ಇದ್ದಾರೆ.

ಮೊದಲ ವಾರ ಇಲ್ಲವೆ ಎರಡನೇ ವಾರದಲ್ಲಿ ಮಾಡಲಿಕ್ಕೆ ತಯಾರಿ ಆಗಿದೆ. ಏನಾಗುವುದೋ ನೋಡೋಣ...

ಉದ್ಯಮಿ: ಪೂರಾ ತಯಾರಿ ಆಗಿದ್ಯಾ?

ಶ್ರೀರಾಮುಲು ಆಪ್ತ: ತಯಾರಿ ಆಗಿದೆ...ಏನಂದ್ರೆ, ಯಾರೂ ಫೋನ್‌ನಲ್ಲಿ ಮಾತನಾಡಲು ತಯಾರಿಲ್ಲ. ನೇರವಾಗಿ ಭೇಟಿ ಮಾಡಿ ಮಾತನಾಡುವುದಾಗಿ ಹೇಳುತ್ತಿದ್ದಾರೆ.

ಉದ್ಯಮಿ: ಮಂಜು... ಯಾರ್‍ಯಾರು ಹೋಗ್ತಾರೆ ಭೇಟಿಗೆ?

ಶ್ರೀರಾಮುಲು ಆಪ್ತ: ಮಂಜು, ನವೀನ್‌ ಮತ್ತು ಶರವಣ ಖುದ್ದು ಭೇಟಿಗೆ ಹೋಗ್ತಾರೆ.

ಉದ್ಯಮಿ: ಎಲ್ಲರನ್ನೂ ಖುದ್ದು ಭೇಟಿ ಮಾಡಿ ಮಾತಾಡ್ತಾರಾ?

ಶ್ರೀರಾಮುಲು ಆಪ್ತ: ಹೌದು, ಮಂಜು, ನವೀನಣ್ಣ ಅವರನ್ನು ಭೇಟಿ ಮಾಡಿ ತಮ್ಮ ಮೊಬೈಲ್‌ನಲ್ಲಿ ನಂಬರ್‌ ಡಯಲ್ ಮಾಡಿ ಕೊಡ್ತಾರೆ.

ಉದ್ಯಮಿ: ಯಾರ ಮೊಬೈಲ್‌?

ಶ್ರೀರಾಮುಲು ಆಪ್ತ: ಹೂಂ, ಮಂಜು, ನವೀನಣ್ಣ ತಮ್ಮ ಫೋನ್‌ನಲ್ಲಿ ನಂಬರ್‌ ಡಯಲ್‌ ಮಾಡಿ ಕೊಡ್ತಾರೆ.

ಉದ್ಯಮಿ: ಒಬ್ಬರಿಗೆ ಎಷ್ಟು ಹಣ ಕೊಡಬೇಕಾಗುತ್ತೆ?

ಶ್ರೀರಾಮುಲು ಆಪ್ತ: ಒಬ್ಬೊಬ್ಬ ಶಾಸಕರಿಗೆ ಒಂದು ಸಂಪುಟ ದರ್ಜೆ ಸಚಿವ ಸ್ಥಾನದ ಜೊತೆಗೆ 20– 25 ಕೋಟಿ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಉದ್ಯಮಿ: ಯಾವಾಗ ಎಲ್ಲರೂ ರಾಜೀನಾಮೆ ಕೊಡ್ತಾರೆ?

ಶ್ರೀರಾಮುಲು ಆಪ್ತ: ರಾಜೀನಾಮೆ ಕೊಡ್ತಾರೊ, ಏನ್‌ ಮಾಡ್ತಾರೊ ಗೊತ್ತಿಲ್ಲ...ಮಾತುಕತೆ ಜೋರಾಗಿ ನಡೀತಿದೆ. ಯಡಿಯೂರಪ್ಪ, ಶ್ರೀರಾಮುಲು ಫೋನ್‌ನಲ್ಲಿ ಏನೂ ಮಾತನಾಡುವುದಿಲ್ಲ. ನೇರವಾಗಿ ಅವರನ್ನು ಕಂಡು ಚರ್ಚೆ ಮಾಡ್ತಾರೆ...

‘ಆಡಿಯೊ ಬೋಗಸ್‌’

‘ಆಡಿಯೊ ಬೋಗಸ್‌ ಆಗಿದ್ದು, ಮಾಡಲು ಕೆಲಸ ಇಲ್ಲದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಮತ್ತೊಂದು ಕಟ್ಟುಕಥೆ ಸೃಷ್ಟಿಸಿದ್ದಾರೆ. ನಮ್ಮ ಪಕ್ಷದ ನಾಯಕರು ವಿವಿಧ ತಂಡಗಳಲ್ಲಿ ಬರ ಅಧ್ಯಯನ ನಡೆಸುತ್ತಿದ್ದಾರೆ. ಶ್ರೀರಾಮುಲು ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಪ್ರತಿಕ್ರಿಯಿಸಿದರು.

* ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

‘ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯತ್ನ’

ಮಂಗಳೂರು: ‘104 ಶಾಸಕರ ಬಲದಲ್ಲಿ ಸರ್ಕಾರ ರಚಿಸಿ, ವಿಫಲವಾದ ಬಿಜೆಪಿ ಈಗ ಮತ್ತೆ ಹಣ ಹೂಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈಗ ಶಾಸಕರಿಗೆ ₹ 25 ಕೋಟಿ ಆಮಿಷ ಒಡ್ಡುತ್ತಿರುವ ಮಾಹಿತಿ ಇದೆ. ಆಪರೇಷನ್‌ ಕಮಲಕ್ಕೆ ಅಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಯಾರ ಹಣ ಅದು? ಭ್ರಷ್ಟಾಚಾರದ ಹಣವಲ್ಲವೇ’ ಎಂದು ಪ್ರಶ್ನಿಸಿದರು.

ರೆಸಾರ್ಟ್‌ಗೆ ಸತೀಶ ಜಾರಕಿಹೊಳಿ ಭೇಟಿ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ ಸಾತೇವಾಡಿ ರೆಸಾರ್ಟ್‌ಗೆ, ಶಾಸಕ ಸತೀಶ ಜಾರಕಿಹೊಳಿ ಭಾನುವಾರ ಸಂಜೆ ಭೇಟಿ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

‘ಮುಂದೆ ಯಾವತ್ತಾದರೂ ಶಾಸಕರನ್ನು ಕರೆದುಕೊಂಡು ಹೋಗಲು ಬೇಕಾಗುತ್ತದೆಂದು ರೆಸಾರ್ಟ್‌ ನೋಡಲು ಹೋಗಿದ್ದೆ. ಅವರನ್ನು ವಿಹಾರಕ್ಕೆಂದು ಕರೆದೊಯ್ಯುತ್ತೇನೆ ಹೊರತು, ಪಕ್ಷಾಂತರ ಮಾಡಲು ಅಲ್ಲ’ ಎಂದು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಪಣಜಿಯಲ್ಲಿ ನಡೆದ ಸ್ನೇಹಿತರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಬೆಳಗಾವಿಗೆ ಮರಳುತ್ತಿದ್ದೆ. ಆಗ ಮಾರ್ಗ ಮಧ್ಯೆದಲ್ಲಿದ್ದ ಈ ರೆಸಾರ್ಟ್‌ ನೋಡಲು ಹೋಗಿದ್ದೆ ಅಷ್ಟೆ’ ಎಂದು ಹೇಳಿದರು.

ಯಾರೂ ಪಕ್ಷ ಬಿಡಲ್ಲ: ಲಕ್ಷ್ಮಿ ‘ಸತೀಶ ಅವರು ಸಹಜವಾಗಿ ರೆಸಾರ್ಟ್‌ಗೆ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ಯಾರೂ ನಮ್ಮ ಪಕ್ಷವನ್ನು ಬಿಟ್ಟು ಹೋಗಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ವರಿಷ್ಠರು ಬಗೆಹರಿಸುತ್ತಾರೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು