ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದತ್ತ ಬಿಜೆಪಿ ನಾಯಕರ ಚಿತ್ತ

ಪ್ರಚಾರ ಬೈಠಕ್‌ನ ಕಾರ್ಯಸೂಚಿ ಕಾರ್ಯರೂಪಕ್ಕೆ ತರಲು ಸಿದ್ಧತೆ
Last Updated 29 ನವೆಂಬರ್ 2018, 20:10 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ನಡೆದ ಆರ್‌ಎಸ್‌ಎಸ್‌ನ ದಕ್ಷಿಣ ಕರ್ನಾಟಕ ಪ್ರಚಾರ ಬೈಠಕ್‌ನ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಬಿಜೆಪಿ ಮುಂದಾಗಿದೆ. ಕೇರಳದಲ್ಲಿ ಶತಾಯಗತಾಯ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಬಿಜೆಪಿ, ಕಾಸರಗೋಡಿನ ಹಿಂದೂ ಸಮಾಜೋತ್ಸವದ ಮೂಲಕ ದೇವರ ನಾಡನ್ನು ಪ್ರವೇಶಿಸಲು ಸಿದ್ಧತೆ ನಡೆಸಿದೆ.

ಕಾರ್ಯಸೂಚಿಯ ಮೊದಲ ಭಾಗವಾಗಿ ಡಿಸೆಂಬರ್ 16 ರಂದು ಕಾಸರಗೋಡಿನಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗು
ತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗವಹಿಸಲಿದ್ದಾರೆ. ಶಬರಿಮಲೆ ವಿಚಾರವೇ ಹಿಂದೂ ಸಮಾಜೋತ್ಸವದ ಪ್ರಮುಖ ವಿಷಯವಾಗಿದೆ. ಈ ಮೂಲಕ ಶಬರಿಮಲೆ ಮುಂದಿಟ್ಟುಕೊಂಡೇ ಕೇರಳದ ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸುವ ಇರಾದೆಯನ್ನು ಬಿಜೆಪಿ ಹೊಂದಿದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ, ಬೇರಾವ ರಾಜ್ಯದಲ್ಲೂ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ಕೇರಳದ ಒಟ್ಟು 21 ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭೆಯ 140 ಸ್ಥಾನಗಳ ಪೈಕಿ ಒಂದರಲ್ಲಷ್ಟೇ ಬಿಜೆಪಿ ಖಾತೆ ತೆರೆದಿದೆ. ಇದೀಗ ಶಬರಿಮಲೆ ವಿಚಾರ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದ್ದು, ಕೇರಳವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ದಕ್ಷಿಣದ ಎರಡನೇ ರಾಜ್ಯದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುವ ಕಾರ್ಯತಂತ್ರ ರೂಪಿಸಿದೆ.

ಈಗಾಗಲೇ ಶಬರಿಮಲೆ ವಿಚಾರವಾಗಿ ಸಾಕಷ್ಟು ತಲೆಕೆಡಿಸಿಕೊಂಡಿರುವ ಬಿಜೆಪಿ ನಾಯಕರು, ಇದಕ್ಕಾಗಿ ಸ್ಪಷ್ಟ ವರದಿಗಾಗಿ ಎದುರು ನೋಡುತ್ತಿದ್ದಾರೆ. ಸಂಸದ ನಳಿನ್‌ಕುಮಾರ್ ಕಟೀಲ್‌ ನೇತೃತ್ವದಲ್ಲಿ ಸಂಕ್ಷಿಪ್ತ ವರದಿಯನ್ನು ತರಿಸಿಕೊಂಡಿದೆ. ಶಬರಿಮಲೆ ವಿಷಯದಲ್ಲಿ ಕೇರಳ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಭಕ್ತರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದೆ. ಇದನ್ನು ಎರಡನೇ ಜಲಿಯನ್‌ ವಾಲಾಬಾಗ್ ಮಾಡಲಾಗುತ್ತಿದೆ ಎಂಬ ಅಂಶಗಳು ಈ ವರದಿಯಲ್ಲಿವೆ ಎಂದು ಹೇಳಲಾಗುತ್ತಿದೆ.

ಇದೀಗ ಇದೇ ವಿಷಯವನ್ನು ಮತ್ತಷ್ಟು ವಿಸ್ತಾರವಾಗಿ ಅಧ್ಯಯನ ಮಾಡಲು ಮತ್ತೊಂದು ಸಮಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಚಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್‌ ಪಾಂಡೆ, ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ವಿನೋದ್‌ ಸೋನಕರ, ರಾಜ್ಯದ ಸಂಸದರಾದ ಪ್ರಹ್ಲಾದ ಜೋಷಿ, ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಒಳಗೊಂಡ ತಂಡ, 15 ದಿನಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಶಬರಿಮಲೆಯಲ್ಲಿ ಭಕ್ತರ ಮೇಲೆ ನಡೆಯುವ ದೌರ್ಜನ್ಯದ ಪ್ರತ್ಯಕ್ಷ ಮಾಹಿತಿ, ಅಲ್ಲಿ ನಡೆಯುತ್ತಿರುವ ಪ್ರತಿಭಟನೆ, ಪ್ರತಿಭಟನಾಕಾರರ ಜತೆಗೆ ಅಲ್ಲಿನ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಪೊಲೀಸರ ಕ್ರಮಗಳ ಬಗ್ಗೆ ಈ ಸಮಿತಿಯು ವರದಿಯನ್ನು ನೀಡಲಿದೆ. ಇದನ್ನು ಆಧರಿಸಿ, ಕೇರಳದಲ್ಲಿ ಪಕ್ಷ ಸಂಘಟನೆಯ ರೂಪುರೇಷೆಯನ್ನು ತಯಾರಿಸಲು ಅಮಿತ್‌ ಶಾ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಸರಗೋಡಿನಲ್ಲಿ ಹಿಂದೂ ಸಮಾಜೋತ್ಸವ
ಕಾಸರಗೋಡಿನ ವಿದ್ಯಾನಗರದ ನಗರಸಭಾ ಮೈದಾನದಲ್ಲಿ ಡಿ.16 ರಂದು ಸಂಜೆ 3.30ಕ್ಕೆ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಯೋಗಿ ಆದಿತ್ಯನಾಥ ಪ್ರಮುಖ ಭಾಷಣ ಮಾಡಲಿದ್ದಾರೆ. ಚಿನ್ಮಯ ಮಿಷನ್‌ ಕೇರಳ ವಲಯ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಆರ್‌ಎಸ್‌ಎಸ್‌ ಮಂಗಳೂರು ವಿಭಾಗ ಕಾರ್ಯವಾಹ ನಾ ಸೀತಾರಾಮ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಉಪ್ಪಳದ ಯೋಗಾನಂದಸ್ವಾಮೀಜಿ, ಕಾಞಂಗಾಡಿನ ಬೋಧಚೈತನ್ಯ ಸ್ವಾಮೀಜಿ, ಕಣ್ಣೂರಿನಅಮೃತಕೃಪಾನಂದಪುರ ಸ್ವಾಮೀಜಿ ಸೇರಿದಂತೆ ಆ ಭಾಗದಹಲವು ಮಠಾಧಿಪತಿಗಳು, ಹಿಂದೂ ಸಂಘಟನೆಗಳ ಮುಖಂಡರುಭಾಗವಹಿಸಲಿದ್ದಾರೆ.

10 ವಿಧಾನಸಭೆ, 2 ಲೋಕಸಭೆ ಕ್ಷೇತ್ರ
ಕೇರಳದಲ್ಲಿ ಕನಿಷ್ಠ 10 ವಿಧಾನಸಭೆ ಹಾಗೂ ಎರಡು ಲೋಕಸಭೆ ಕ್ಷೇತ್ರಗಳನ್ನಾದರೂ ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಕಾಸರಗೋಡು, ಕಣ್ಣೂರು ಲೋಕಸಭಾ ಕ್ಷೇತ್ರಗಳ ಮೇಲೆಯೇ ಹೆಚ್ಚಿನ ದೃಷ್ಟಿ ಹರಿಸಿರುವ ಬಿಜೆಪಿ ನಾಯಕರು, ಈ ಎರಡೂ ಕ್ಷೇತ್ರಗಳ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲೂ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಕಾರ್ಯಯೋಜನೆ ರೂಪಿಸುತ್ತಿದ್ದಾರೆ.

ಕರಾವಳಿಗೆ ಹೊಂದಿಕೊಂಡೇ ಈ ಕ್ಷೇತ್ರಗಳಿದ್ದು, ಜತೆಗೆ ಕಾಸರಗೋಡಿನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್‌ ಅವರನ್ನು ಕೇರಳದ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಇದೀಗ ರಾಜ್ಯದ ಮತ್ತೊಬ್ಬ ಸಂಸದ ಪ್ರಹ್ಲಾದ್ ಜೋಷಿ ಅವರನ್ನೂ ಸಮಿತಿಗೆ ಸೇರ್ಪಡೆ ಮಾಡಲಾಗಿದ್ದು, ಕನ್ನಡಿಗರನ್ನು ಸೆಳೆಯುವ ಪ್ರಯತ್ನದ ಭಾಗವಾಗಿದೆ ಎಂದೇ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT