ಅನ್ಯ ಪಕ್ಷಗಳ ನಾಯಕರು ಬಿಜೆಪಿಗೆ: ಯಡಿಯೂರಪ್ಪ ಸುಳಿವು

ಭಾನುವಾರ, ಮಾರ್ಚ್ 24, 2019
28 °C

ಅನ್ಯ ಪಕ್ಷಗಳ ನಾಯಕರು ಬಿಜೆಪಿಗೆ: ಯಡಿಯೂರಪ್ಪ ಸುಳಿವು

Published:
Updated:
Prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ನೋಡಿ ಬೇರೆ ಪಕ್ಷಗಳ ಹಲವು ನಾಯಕರು ಬಿಜೆಪಿ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಏಳು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೇರೆ ಪಕ್ಷದಲ್ಲಿರುವವರು ಹಾಗೂ ತಟಸ್ಥರಾಗಿರುವವರು ಪಕ್ಷ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ಈ ರೀತಿ ಎಷ್ಟು ಮಂದಿ ಪಕ್ಷ ಸೇರ್ಪಡೆಗೆ ಸಿದ್ಧರಾಗಿದ್ದಾರೆ ಎಂಬುದನ್ನು ಕ್ಷೇತ್ರಗಳ ಹಾಗೂ ಬೂತ್‌ಗಳ ಪ್ರಮುಖರು ತಿಳಿದುಕೊಳ್ಳಬೇಕು. ಅವರನ್ನು ಕರೆದುಕೊಂಡು ಬಂದು ಪಕ್ಷ ಬಲಪಡಿಸಬೇಕು’ ಎಂದು ಅವರು ಸೂಚಿಸಿದರು.

‘ದೇಶದಲ್ಲಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಪ್ರಧಾನಿ ಗುರಿ ಇಟ್ಟುಕೊಂಡಿದ್ದಾರೆ. ಹೀಗಾಗಿ, ನಾವು 22 ಕ್ಷೇತ್ರಗಳನ್ನು ಗೆಲ್ಲಬೇಕು. ಇದು ನಮ್ಮ ಮೇಲೆ ಇರುವ ಭಾರ ಹಾಗೂ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು.

‘ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 2 ಸಾವಿರ ಬೂತ್‌ಗಳಿವೆ. ಪ್ರತಿ ಮತಗಟ್ಟೆಯಲ್ಲಿ ಶೇ 70ರಿಂದ 80ರಷ್ಟು ಮತಗಳನ್ನು ಬಿಜೆಪಿಗೆ ಹಾಕಿಸುವ ಕಡೆಗೆ ಗಮನ ಕೇಂದ್ರೀಕರಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ, ಹಿಂದುಳಿದ ವರ್ಗ ಹಾಗೂ ಯುವ ಮೋರ್ಚಾ ಬಲಪಡಿಸಬೇಕು’ ಎಂದು ಅವರು ಸೂಚಿಸಿದರು.

‘10 ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಂಡಿದೆ. ಏಳು ವಾರಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಚುನಾವಣೆ ಮುಗಿಯುವ ವರೆಗೆ ನಾನು ಮನೆಗೆ ಹೋಗುವುದಿಲ್ಲ. ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ಕಾರ್ಯಕರ್ತರು ಏಳು ವಾರಗಳು ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರು ಪಾಲ್ಗೊಂಡಿದ್ದರು.

ಇಂದು ಬೈಕ್‌ ರ‍್ಯಾಲಿ

ಲೋಕಸಭಾ ಚುನಾವಣೆಯ ಸಿದ್ಧತೆಯ ಅಂಗವಾಗಿ ಬಿಜೆಪಿ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರ ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ.

ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಒಂದು ಸಾವಿರ ಬೈಕ್‌ ಸವಾರರು ಬೆಳಿಗ್ಗೆಯಿಂದ ಸಂಜೆ ವರೆಗೆ ಕ್ಷೇತ್ರದಲ್ಲಿ ಸಂಚಾರ ಮಾಡಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಈ ಕಾರ್ಯಕ್ರಮ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

 

ಬರಹ ಇಷ್ಟವಾಯಿತೆ?

 • 12

  Happy
 • 4

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !