ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆಗೆ ವಿರೋಧ, ನೀರು ಪೂರೈಕೆಗೆ ಒತ್ತಾಯ

ನಗರದಲ್ಲಿ ಪ್ರತಿಭಟನೆಗಳ ಸರಣಿ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರ ಒತ್ತಾಯ
Last Updated 25 ಮೇ 2018, 3:02 IST
ಅಕ್ಷರ ಗಾತ್ರ

ಕಲಬುರ್ಗಿ: ಇಂಧನ ದರ ಏರಿಕೆ ವಿರೋಧಿಸಿ, ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಯಿತು. ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿಪಿಎಂ: ಇಂಧನ ದರ ಏರಿಕೆ ವಿರೋಧಿಸಿ ಸಿಪಿಎಂ ನಾಯಕ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾರನ್ನು ಎಳೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾರುತಿ ಮಾನ್ಪಡೆ ಮಾತನಾಡಿ, ‘ಕೇಂದ್ರ ಸರ್ಕಾರವು ತನ್ನ ಆದಾಯ ಹೆಚ್ಚಿಸಿಕೊಳ್ಳಲು ಅಬಕಾರಿ ಸುಂಕಗಳನ್ನು ಏರಿಕೆ ಮಾಡುತ್ತಿದೆ. ಇಂಧನ ದರ ಏರಿಕೆ ಅಲ್ಲದೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನಸಾಮಾನ್ಯರು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

‘ಅಚ್ಛೇ ದಿನ ಬರುವುದಾಗಿ ಹೇಳಿಕೊಂಡೆ ನಾಲ್ಕು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂಧನ ದರ ಏರಿಕೆಯಿಂದ ಕ್ರಮೇಣ ಬೇರೆ ಬೇರೆ ವಸ್ತುಗಳ ದರವೂ ಏರಿಕೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಬದುಕುವುದಾದರೂ ಹೇಗೆ? ದರ ಏರಿಕೆ ಕ್ರಮವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದರು.

ಸಿಪಿಎಂ ಮುಖಂಡ ಬಸವರಾಜ ಮಮಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ಅಹಿಂದ ಚಿಂತಕರ ವೇದಿಕೆ: ಸಂಜಯನಗರದ (ದುಬೈ ಕಾಲೊನಿ) ವಾರ್ಡ್‌ ಸಂಖ್ಯೆ 6ರಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿದ್ದರೂ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಲಾಗಿಲ್ಲ ಎಂದು ಆರೋಪಿಸಿ ಅಹಿಂದ ಚಿಂತಕರ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ನಿವಾಸಿಗಳು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಕಾಲೊನಿ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಶೌಚಾಲಯ ಸೌಲಭ್ಯ ಕಲ್ಪಿಸಬೇಕು. ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಕಾರ್ಯದರ್ಶಿ ರಮೇಶ ಹಡಪದ, ಸದಸ್ಯೆಯರಾದ ಸಂಗೀತಾಮ ಮಂಗಳಾ, ನಾಗಮ್ಮ, ರಾಬಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜೈ ಕರ್ನಾಟಕ ರಕ್ಷಣಾ ವೇದಿಕೆ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಿಕ್ಷಣ ಸಂಸ್ಥೆಯವರು ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ
ಸದಸ್ಯರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

‘ಮಕ್ಕಳ ಪೋಷಕರಿಂದ ಹಣ ಪಡೆಯುವ ಶಿಕ್ಷಣ ಸಂಸ್ಥೆಯವರು ಯಾವುದೇ ರೀತಿಯ ರಶೀದಿ ನೀಡುವುದಿಲ್ಲ. ಯಾವ ಕಾರಣಕ್ಕೆ ಹಣ ಬಳಸಲಾಗುತ್ತಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಇದರಿಂದ ಪೋಷಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ಶಿಕ್ಷಣ ಇಲಾಖೆಯವರು ತಡೆಗಟ್ಟಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಮಂಜುನಾಥ ಬಿ.ಹಾಗರಗಿ, ಮುಖಂಡರಾದ ಜಗನ್ನಾಥ ಪಟ್ಟಣಶೆಟ್ಟಿ, ಶಿವಕುಮಾರ ಹಾಗರಗಾ, ಹಣಮಂತರಾವ ಹುಣಚಿಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಸ್‌ಯುಸಿಐಸಿ:  ತಮಿಳುನಾಡಿನ ತೂತುಕ್ಕುಡಿಯಲ್ಲಿ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕ ಮುಚ್ಚುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದನ್ನು ವಿರೋಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌)ದವರು ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ವಿ.ದಿವಾಕರ್ ಮಾತನಾಡಿ, ‘ಹೋರಾಟ ನಡೆಸಿದ ಏಕಮೇವ ಕಾರಣಕ್ಕೆ ಪೊಲೀಸರು ರೈತರ ಮೇಲೆ ಗೋಲಿಬಾರ್ ನಡೆಸಿದ್ದು ಅಮಾನವೀಯ. ಹೋರಾಟ ದಮನ ಮಾಡುವ ನೆಪದಲ್ಲಿ ರೈತರ ಮೇಲೆ ಹಿಂಸಾಚಾರ ಮಾಡಿರುವುದು ಘೋರ ಕೃತ್ಯ’ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ವಿ.ಜಿ.ದೇಸಾಯಿ, ನಾಗಮ್ಮಾಳ್, ಎಸ್‌.ಎಂ.ಶರ್ಮಾ, ಎಂ.ಜಿ.ರಾಘವೇಂದ್ರ, ಎಸ್.ಬಿ.ಮಹೇಶ್, ಗಣಪತರಾವ್ ಮಾಣೆ, ಗುಂಡಮ್ಮ ಮಡಿವಾಳ, ಗೌರಮ್ಮ, ಸಿ.ಕೆ.ಗುಂಡಣ್ಣ ಇತರರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT