ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್ ಆಕಾಂಕ್ಷಿಗಳೇ ಮಗ್ಗುಲ ಮುಳ್ಳು

ಅನರ್ಹ ಶಾಸಕರಿಗೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿಕೆಗೆ ಕಾರ್ಯಕರ್ತರ ವಿರೋಧ
Last Updated 23 ಸೆಪ್ಟೆಂಬರ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಜತೆ ಕೈಜೋಡಿಸಿ ‘ಮೈತ್ರಿ’ ಸರ್ಕಾರ ಪತನಗೊಳಿಸಿದ 15 ಅನರ್ಹ ಶಾಸಕರಿಗೆ ಮುಂಬರುವ ಉಪಚುನಾವಣೆಯಲ್ಲಿ ಸೆಣಸಿ ಗೆಲುವು ಸಾಧಿಸುವುದು ಸುಲಭವಲ್ಲ. ಏಕೆಂದರೆ, ಬಿಜೆಪಿಯ ಸ್ಥಳೀಯ ಟಿಕೆಟ್‌ ಆಕಾಂಕ್ಷಿಗಳೇ ಅನರ್ಹ ಶಾಸಕರಿಗೆ ಮಗ್ಗುಲ ಮುಳ್ಳಾಗಿದ್ದಾರೆ!

ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಸೋತವರು ಮತ್ತು ಟಿಕೆಟ್‌ ಆಕಾಂಕ್ಷಿಗಳು ಅನರ್ಹರಿಗೆ ಟಿಕೆಟ್‌ ನೀಡುವ ಬಗ್ಗೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರ ವಿರೋಧ ಕಟ್ಟಿಕೊಂಡು ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿದರೆ ಕಾರ್ಯಕರ್ತರು ಪೂರ್ಣ ಮನಸ್ಸಿನಿಂದ ಕೆಲಸ ಮಾಡುವುದಿಲ್ಲ ಎಂಬ ಆತಂಕ ಬಿಜೆಪಿ ನಾಯಕರದು.

ಶತಾಗತಾಯ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾಗಿದೆ. ಒಂದು ವೇಳೆ ಅಷ್ಟು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೆ, ಸರ್ಕಾರ ಅಪಾಯಕ್ಕೆ ಸಿಲುಕುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮೂಲ ನಿವಾಸಿಗಳನ್ನು ಸಮಾಧಾನಪಡಿಸುವ ಕಸರತ್ತಿಗೆ ವರಿಷ್ಠರು ಕೈಹಾಕಲೇಬೇಕಾಗಿದೆ.

ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್‌ ಮತ್ತು ಸಂಸದ ಬಚ್ಚೇಗೌಡ ಮಧ್ಯೆ ಹಲವು ದಶಕಗಳ ರಾಜಕೀಯ ಜಿದ್ದಾಜಿದ್ದಿ ಇದೆ. ಈ ಹಿನ್ನೆಲೆಯಲ್ಲಿ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸು
ತ್ತಾರೆ ಎಂಬ ವದಂತಿ ಗರಿಗೆದರಿದೆ. ಕಳೆದ ಚುನಾವಣೆಯಲ್ಲಿ ನಾಗರಾಜ್‌ ವಿರುದ್ಧ ಶರತ್‌ ಸ್ಪರ್ಧಿಸಿದ್ದರು.

ಕೆ.ಆರ್‌.ಪುರದಲ್ಲಿ ಬೈರತಿ ಬಸವರಾಜ್ ಮತ್ತು ನಂದೀಶ್‌ ರೆಡ್ಡಿ ಸಾಂಪ್ರದಾಯಿಕ ಎದುರಾಳಿಗಳು. ಬೈರತಿಗೆ ಟಿಕೆಟ್‌ ನೀಡುವ ಬಗ್ಗೆ ನಂದೀಶ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಮಧಾನಗೊಂಡು ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಹೋಗುತ್ತಾರೋ ಅಥವಾ ಪಕ್ಷ ನಿಷ್ಠೆ ಉಳಿಸಿಕೊಂಡು ಬಿಜೆಪಿಯಲ್ಲೇ ಉಳಿಯುತ್ತಾರೊ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಹಾಲಕ್ಷ್ಮಿಲೇಔಟ್‌ ಕ್ಷೇತ್ರದಲ್ಲಿ ಗೋಪಾಲಯ್ಯ ಅವರ ಸಾಂಪ್ರದಾಯಿಕ ಎದುರಾಳಿಗಳಾದ ನೆ.ಲ.ನರೇಂದ್ರ
ಬಾಬು ಮತ್ತು ಮಾಜಿ ಉಪಮೇಯರ್‌ ಹರೀಶ್‌ ಬಿಜೆಪಿಯಲ್ಲಿದ್ದಾರೆ. ಇಬ್ಬರೂ ಗೋಪಾಲಯ್ಯ ಅವರಿಗೆ ಟಿಕೆಟ್‌ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ
ದ್ದರು ಎಂಬ ತಕರಾರು ಎತ್ತಿದ್ದಾರೆ.

ಹಲವೆಡೆ ವಿರೋಧ

ಹಾವೇರಿಯಲ್ಲಿ ಬಿ.ಸಿ.ಪಾಟೀಲ ವಿರುದ್ಧ ಸ್ಪರ್ಧಿಸಿ ಸೋತಿದ್ದ ಯು.ಬಿ.ಬಣಕಾರ್‌ ಅವರು ಪಾಟೀಲರು ಬಿಜೆಪಿಗೆ ಬರುವುದನ್ನು ವಿರೋಧಿಸಿದ್ದಾರೆ. ಉತ್ತರಕನ್ನಡದ ಯಲ್ಲಾಪುರ ಕ್ಷೇತ್ರದಲ್ಲಿ ಕಳೆದ ಬಾರಿ ಶಿವರಾಮ್‌ ಹೆಬ್ಬಾರ್‌ ವಿರುದ್ಧ ಬಿಜೆಪಿಯಿಂದ ಎ.ಬಿ.ಪಾಟೀಲ ಸ್ಪರ್ಧಿಸಿದ್ದರು. ಸ್ಥಳೀಯ ಕಾರ್ಯಕರ್ತರಲ್ಲಿ ಹೆಬ್ಬಾರ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ವಿರೋಧವಿದೆ.

ಯಶವಂತಪುರದಲ್ಲಿ ಎಸ್‌.ಟಿ.ಸೋಮಶೇಖರ್‌ ಅವರ ಬಗ್ಗೆ ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗ್ಗೇಶ್‌ ಅಪಸ್ವರ ಎತ್ತಿದ್ದಾರೆ. ಶಿವಾಜಿನಗರದಲ್ಲಿ ಬಿಜೆಪಿ ರೋಷನ್‌ ಬೇಗ್‌ ಅವರಿಗೆ ಟಿಕೆಟ್‌ ನೀಡಿದರೆ, ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಸಿಡಿದೇಳುವುದು ಖಚಿತ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT