ಶುಕ್ರವಾರ, ಸೆಪ್ಟೆಂಬರ್ 20, 2019
22 °C

‘ಹಣ ಹಂಚುತ್ತಿರುವ ಡಿಕೆಶಿ’: ಬಿಜೆಪಿ ದೂರು

Published:
Updated:

ಬೆಂಗಳೂರು: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ವಿವಿಧ ಸಮುದಾಯಗಳ ನಾಯಕರು, ಪ್ರಭಾವಿ ವ್ಯಕ್ತಿಗಳು ಮತ್ತು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಮುಖ್ಯಚುನಾವಣಾಧಿಕಾರಿಗೆ ದೂರು ನೀಡಿದೆ. 

ಹುಬ್ಬಳ್ಳಿಯ ವಿಮಾನನಿಲ್ದಾಣದ ಸಮೀಪದಲ್ಲಿರುವ ಕಾಟನ್‌ ಕೌಂಟಿ ಹೊಟೇಲ್‌ನಲ್ಲಿ ಬೀಡು ಬಿಟ್ಟಿರುವ ಶಿವಕುಮಾರ್‌ ಹಣ ಹಂಚುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರಿಂದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಹೇಳಿದೆ.

ಹಣ ವಿತರಿಸುವ ಸಚಿವರ ಈ ಕೃತ್ಯಕ್ಕೆ ಅಧಿಕಾರಿಗಳು ಮತ್ತು ಪೊಲೀಸರು ಬೆಂಬಲವಾಗಿ ನಿಂತಿದ್ದಾರೆ. ಚುನಾವಣಾ ಆಯೋಗ ಡಿ.ಕೆ.ಶಿವಕುಮಾರ್‌ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದೂ ಮನವಿ ಮಾಡಿದೆ.

ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮಕ್ಕೆ ಆಗ್ರಹ: ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆಧುನಿಕ ರಾವಣ ಎಂದು ಅಸಭ್ಯವಾಗಿ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದು ಬಿಜೆಪಿ ಮತ್ತೊಂದು ದೂರು ನೀಡಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ನಡೆಸುತ್ತಿರುವ ಇಬ್ರಾಹಿಂ ಪ್ರಧಾನಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜೆಪಿ ತಿಳಿಸಿದೆ.

ಜಾತಿ ಮತ್ತು ಉಪಜಾತಿ ಹೆಸರಿನಲ್ಲಿ ಜನರನ್ನು ಒಡೆಯವ ಕೆಲಸದಲ್ಲೂ ಇಬ್ರಾಹಿಂ ತೊಡಗಿದ್ದಾರೆ. ಇವರಿಗೆ ಪ್ರಚಾರ ನಡೆಸಲು ಅವಕಾಶ ನೀಡಿದರೆ, ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಾರೆ. ಆದ್ದರಿಂದ ಅವರ ಪ್ರಚಾರ ಭಾಷಣಕ್ಕೆ ಕಡಿವಾಣ ಹಾಕಬೇಕು ಮತ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

Post Comments (+)