ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ‘ವಿಶ್ವಾಸ’ಕ್ಕೆ ಸ್ಪೀಕರ್‌ ತೀರ್ಪಿನ ಬಲ

ಸದನದಲ್ಲಿ ಧನವಿನಿಯೋಗ ಮಸೂದೆ: ಮೈತ್ರಿ ಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ಸಾಧ್ಯತೆ
Last Updated 28 ಜುಲೈ 2019, 18:36 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದು, ಸಭಾಧ್ಯಕ್ಷರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ನೀಡಿದ ತೀರ್ಪು ಬಿಜೆಪಿಯ ‘ವಿಶ್ವಾಸ’ವನ್ನು ಹೆಚ್ಚಿಸಿದೆ.

ಧನವಿನಿಯೋಗ ಮಸೂದೆಯೂ ಸದನದಲ್ಲಿ ಮಂಡನೆಯಾಗಲಿದ್ದು,ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ಬಜೆಟ್‌ಸಿದ್ಧಪಡಿಸಿದ್ದರಿಂದ ಮೈತ್ರಿಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

ಸಭಾಧ್ಯಕ್ಷರು ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸದೆ ಹೋಗಿದ್ದರೆ ಸದನದಲ್ಲಿ 111 ಸಂಖ್ಯೆಯನ್ನು ತೋರಿಸುವ ಅನಿವಾರ್ಯತೆ ಎದುರಾಗಿಬಿಡುತ್ತಿತ್ತು. ಅವರು ಭಾನುವಾರ ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದರಿಂದ ಸದನದಲ್ಲಿ ಕೇವಲ 104 ಶಾಸಕರ ಸಂಖ್ಯೆಯನ್ನು ತೋರಿಸಿ ಬಹುಮತ ಗಳಿಸಿಕೊಳ್ಳುವುದು ಸಾಧ್ಯವಿದೆ.

ಬಿಜೆಪಿ ಬಳಿಯಲ್ಲಿ 105 ಮತ್ತು ಒಬ್ಬ ಪಕ್ಷೇತರ ಶಾಸಕರ ಸಂಖ್ಯೆ ಇರುವುದರಿಂದ ಬಹುಮತ ಸಾಬೀತುಪಡಿಸುವುದು ಸದ್ಯ ಸಲೀಸು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.

‘ಅನರ್ಹಗೊಂಡ ಶಾಸಕರು ಕಾನೂನು ಹೋರಾಟ ನಡೆಸುವುದು ನಿಶ್ಚಿತ. ಅದರಲ್ಲಿ ಸಫಲರೂ ಆಗುವ ವಿಶ್ವಾಸ ಇದೆ. ಸಭಾಧ್ಯಕ್ಷರು ಪಕ್ಷಪಾತಿಯಂತೆ ವರ್ತಿಸಿದ್ದು, ನ್ಯಾಯಾಲಯ ಅವರ ತೀರ್ಪನ್ನು ಕೆಲವೇ ಗಂಟೆಗಳಲ್ಲಿ ತಳ್ಳಿಹಾಕುವುದಂತೂ ನಿಶ್ಚಿತ’ ಎಂದು ಪಕ್ಷದ ಹಿರಿಯ ನಾಯಕ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಆದರೆ, ಸಭಾಧ್ಯಕ್ಷರ ತೀರ್ಪಿನ ಮೂಲಕ ಸದ್ಯಕ್ಕೆ ಬಿಜೆಪಿ ಬೀಸುದ ದೊಣ್ಣೆಯಿಂದ ತಪ್ಪಿಸಿಕೊಂಡುಬಿಟ್ಟಿದೆ. ನ್ಯಾಯಾಲಯದಿಂದ ಆರು ತಿಂಗಳೊಳಗೆ ತೀರ್ಪು ಹೊರಬೀಳುತ್ತದೆ, ಬಿದ್ದರೂ ಅತೃಪ್ತ ಶಾಸಕರ ಪರವಾಗಿಯೇ ತೀರ್ಪಿರುತ್ತದೆ ಎಂದು ಹೇಳಲಾಗದು. ಹೀಗಾಗಿ ಸದ್ಯ ಬಿಜೆಪಿಗೆ ಅತೃಪ್ತ ಶಾಸಕರ ಹಂಗೇ ಇಲ್ಲದೆ ಸಂಪುಟವನ್ನು ರಚಿಸಿಕೊಳ್ಳಬಹುದು. ತೀರ್ಪು ಬರುವ ತನಕವಾದರೂ ಪಕ್ಷದ ಹಲವು ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಬಳಿಕ ಅದನ್ನು ವಾಪಸ್‌ ಪಡೆಯಬಹುದು. ಆಗ ಎಲ್ಲರನ್ನೂ ತೃಪ್ತಿಪಡಿಸಿದಂತೆಯೂ ಆದೀತು ಎಂಬ ಚಿಂತನೆಯಲ್ಲಿ ಹಲವು ಬಿಜೆಪಿ ನಾಯಕರಿದ್ದಾರೆ.

ಹೇಳಿಕೊಳ್ಳಲಾಗದ ಸಂಭ್ರಮ: ಸಭಾಧ್ಯಕ್ಷರ ಕ್ರಮದಿಂದ ಬಿಜೆಪಿ ಪಾಳೆಯದಲ್ಲಿ ಒಳಗೊಳಗೇ ಸಂಭ್ರಮ ನೆಲೆಸಿದೆ. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವಂತಿಲ್ಲ. ‘ಸೋಮವಾರದ ಚಿಂತೆಮುಗಿಯಿತು, ಆರು ತಿಂಗಳು ನಿಶ್ಚಿಂತೆಯಿಂದ ಅಧಿಕಾರ ಚಲಾಯಿಸಿ ಬಳಿಕ ನೋಡಿಕೊಂಡರಾಯಿತು’ ಎಂದು ಹಿರಿಯ ವಕೀಲರೊಬ್ಬರುಅಭಿಪ್ರಾಯಪಟ್ಟರು.

ಈ ಮಧ್ಯೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ರೆಸಿಡೆನ್ಸಿ ರಸ್ತೆಯ ಛಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT