ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ–ಸಿದ್ದರಾಮಯ್ಯ‘ಆಪರೇಷನ್‌’ ಸಮರ

Last Updated 2 ಜನವರಿ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯತ್ತ ಸೆಳೆಯುವ ಯತ್ನದ ಕುರಿತು ಉಭಯ ಪಕ್ಷಗಳ ನಾಯಕರ ಮಧ್ಯೆ ಮಾತಿನ ಸಮರ ಮುಂದುವರಿದಿದೆ.

ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪ್ರತಿಪಾದಿಸಿದರೆ, ‘ನಾನೇನು ಆಪಾದನೆಯ ಆಟ ಆಡುತ್ತಿಲ್ಲ; ಸಾಕ್ಷಿ ಬೇಕಾ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.

ಸಚಿವ ಸ್ಥಾನದಿಂದ ಕೈಬಿಟ್ಟ ರಮೇಶ ಜಾರಕಿಹೊಳಿ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದು ಸ್ವತಃ ಅವರ ಸೋದರ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೂಡ ಮಾಹಿತಿ ಇಲ್ಲ. ಹೀಗೆ ‘ಕಣ್ಮರೆ’ಯಾಗಿರುವ ರಮೇಶ, ಕಮಲದ ತೆಕ್ಕೆಗೆ ಸೇರಬಹುದು ಎಂಬ ಗುಮಾನಿ ಕಾಂಗ್ರೆಸ್ ನಾಯಕರಲ್ಲಿದೆ.

ಸಚಿವ ಸ್ಥಾನ ಕೈತಪ್ಪಿದ ಮರುದಿನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದ ರಮೇಶ, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ನಾನು ಹೇಳಿದ ಮಾತಿಗೆ ಬದ್ಧ. ನನಗೆ ನಾಲ್ಕು ದಿನ ಸಮಯ ಕೊಡಿ. ಎಲ್ಲವನ್ನೂ ನಿಮ್ಮ ಮುಂದೆ ಬಹಿರಂಗಪಡಿಸುತ್ತೇನೆ’ ಎಂದು ಹೇಳಿದ್ದರು.

‘ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿರುವ ರಮೇಶ ಅವರು, ಸಚಿವ ಸ್ಥಾನ ಸಿಗದ ಕಾಂಗ್ರೆಸ್‌ನ ಐದಾರು ಶಾಸಕರಿಗೆ ಕರೆ ಮಾಡಿ ತಮ್ಮ ಜತೆ ಬಿಜೆಪಿಗೆ ಬರುವಂತೆ ಕರೆ ಕೊಟ್ಟಿದ್ದಾರೆ. ಇದಕ್ಕೆ ತಮ್ಮ ಬಳಿ ಮಾಹಿತಿ ಇದೆ’ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಯಡಿಯೂರಪ್ಪ, ‘ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗೂ (ಆಪರೇಷನ್ ಕಮಲ) ನಮಗೂ ಸಂಬಂಧವಿಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿ. ಯಾವುದೇ ಶಾಸಕರನ್ನು ನಾವು ಸಂಪರ್ಕಿಸಿಲ್ಲ. ನಮ್ಮ ಗುರಿ ಏನಿದ್ದರೂ ಲೋಕಸಭೆ ಚುನಾವಣೆ ಗೆಲ್ಲುವುದಷ್ಟೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಪ್ರತಿಪಾದಿಸಿದರು.

‘ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಜನರ ಕಷ್ಟವನ್ನು ಕೇಳಲು ಸರ್ಕಾರದಲ್ಲಿರುವವರಿಗೆ ಮನಸ್ಸಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ತಮ್ಮ ಟ್ವಿಟರ್ ಖಾತೆಯಲ್ಲಿ ಇದಕ್ಕೆ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ, ‘ಬಿಜೆಪಿಯು ನಮ್ಮ ಶಾಸಕರಿಗೆ ಆಮಿಷ ಒಡ್ಡಿರುವುದು ಹೌದು. ಈ ವಿಷಯದಲ್ಲಿ ನಾನು ಬಿಜೆಪಿ ಮೇಲೆ ಕೇವಲ ಆಪಾದನೆ ಮಾಡುತ್ತಿಲ್ಲ. ಆಧಾರ ಇಟ್ಟುಕೊಂಡೇ ಇದನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ.

* ಶಾಸಕ ಬಿ.ಸಿ.ಪಾಟೀಲ್‌ಗೆ ಬಿಜೆಪಿಯವರು ಆಫರ್ ಕೊಟ್ಟಿರಲಿಲ್ಲವೇ? ಸಮಯ ಬರಲಿ, ಇನ್ನೂ ಕೆಲವರಿಂದ ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

*ಈ ಸರ್ಕಾರಕ್ಕೆ ಎಲ್ಲಿಯವರೆಗೂ ಬಹುಮತ ಇರುತ್ತದೋ ಅಲ್ಲಿಯವರೆಗೂ ನಾವು ವಿರೋಧ ಪಕ್ಷದಲ್ಲಿರುತ್ತೇವೆ. ಸರ್ಕಾರ ಕೆಡಹುವ ಯತ್ನಕ್ಕೆ ನಾವು ಕೈ ಹಾಕುವುದಿಲ್ಲ
-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT