ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರ ಕಣ ಸಮರಾಂಗಣ; ಜಾತಿ ಮತಗಳ ಬೇಟೆಗೆ ಕಾಂಗ್ರೆಸ್‌– ಬಿಜೆಪಿ ಪೈಪೋಟಿ

Last Updated 26 ಅಕ್ಟೋಬರ್ 2018, 20:16 IST
ಅಕ್ಷರ ಗಾತ್ರ

‌ಬೆಂಗಳೂರು: ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಪ್ರಚಾರ ಕಣ ಮತ್ತಷ್ಟು ಕಾವೇರ ತೊಡಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಡುವಿನ ರಾಜಕೀಯ ಹಣಾಹಣಿ ಆರೋಪ– ಪ್ರತ್ಯಾರೋಪಗಳ ಸಮರಾಂಗಣವಾಗಿ ಪರಿವರ್ತಿತವಾಗುತ್ತಿದೆ.

ಕಮಲ ಪಕ್ಷದ ಭದ್ರಕೋಟೆಗಳಲ್ಲಿ ಬಿರುಕು ಮೂಡಿಸಲು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಕಸರತ್ತು ತೀವ್ರಗೊಳಿಸಿದರೆ, ಕೈಯಲ್ಲಿರುವ ಕ್ಷೇತ್ರಗಳನ್ನು ಉಳಿಸಿಕೊಂಡು, ದೋಸ್ತಿಗಳಿಗೆ ಸಡ್ಡು ಹೊಡೆಯಲು ಬಿಜೆಪಿ ಹೋರಾಡುತ್ತಿದೆ. ಈ ಕಾರಣದಿಂದಲೇ ಮೂರೂ ಪಕ್ಷಗಳ ರಾಜ್ಯ ನಾಯಕರು ಕ್ಷೇತ್ರಗಳಲ್ಲಿ ಬೆವರು ಸುರಿಸುತ್ತಿದ್ದಾರೆ. ಜಾತಿ ಆಧಾರಿತ ಮತ ಬೇಟೆಯಲ್ಲಿ ತೊಡಗಿದ್ದಾರೆ.

‘ಶ್ರೀರಾಮಲು ಅವರಿಗೆ ಸೆಕ್ಷನ್‌ 371 ಜೆ ಬಗ್ಗೆ ಗೊತ್ತಿಲ್ಲ. ಗೊತ್ತಿರುವುದು 420 ಮಾತ್ರ’ ಎಂದು ಸಿದ್ದರಾಮಯ್ಯ ಮಾಡಿದ ವಾಗ್ದಾಳಿಯನ್ನೇ ಪ್ರತ್ಯಸ್ತ್ರವಾಗಿಸಿ ಬಳ್ಳಾರಿ ಮತ್ತೆ ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಹೊರಟಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗೈರು, ಪ್ರಶಸ್ತಿ ಸ್ವೀಕರಿಸದೆ ಎಚ್‌.ಡಿ. ದೇವೇಗೌಡ ಲಂಡನ್‌ ತೆರಳಿದ ವಿಷಯವನ್ನೇ ಎತ್ತಿಕಟ್ಟಿ, ಸಮ್ಮಿಶ್ರ ಸರ್ಕಾರ ವಾಲ್ಮೀಕಿ ಸಮುದಾಯಕ್ಕೇ ಅವಮಾನ ಎಂದು ಪ್ರಚಾರ ಮಾಡುವ ಮೂಲಕ ಜಾತಿ ಮತಗಳ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ.

ರಾಮನಗರದಲ್ಲಿ ‘ದೇವೇಗೌಡರ ಕುಟುಂಬದವರ ರಾಜಕಾರಣಕ್ಕೆ ಜನ ಬೇಸತ್ತಿದ್ದು, ಈ ಬಾರಿ ಬಿಜೆಪಿ ಬೆಂಬಲಿಸಲಿದ್ದಾರೆ’ ಎಂದು ಮುಖಂಡ ಸಿ.ಪಿ. ಯೋಗೇಶ್ವರ್, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ ಪ್ರಚಾರ ನಡೆಸಿದರು. ಅನಿತಾ ಕುಮಾರಸ್ವಾಮಿ ಗೆಲುವಿಗೆ ಸಂಸದ ಡಿ.ಕೆ. ಸುರೇಶ್‌ ಟೊಂಕ ಕಟ್ಟಿ ‌ನಿಂತಿದ್ದಾರೆ.

ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಬಿರುಸಿನ ಪ್ರಚಾರ ನಡೆಸಿದ ಸಿದ್ದರಾಮಯ್ಯ, ‘ಯಡಿಯೂರಪ್ಪ ಅವರಿಗೆ ದುರಾಸೆ ಹೆಚ್ಚಾಗಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆಯಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಗೆ ಕಾರಣರಾಗಿದ್ದಾರೆ’ ಎಂದು ಕಿಡಿಹೊತ್ತಿಸಿದರು.

ಜಮಖಂಡಿಯಲ್ಲಿ ಕಾಂಗ್ರೆಸ್‌, ಬಿಜೆಪಿ ನಾಯಕರು ಬೀಡುಬಿಟ್ಟರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ತಮ್ಮ ‍ಪಕ್ಷದ ಅಭ್ಯರ್ಥಿ ಪರ ಪ‍್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT