ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಗಳ ಜತೆ ಇಡೀ ದಿನ ಕಳೆದ!

ಪತ್ನಿ, ಮಗಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಎಂಜಿನಿಯರ್‌
Last Updated 26 ಮೇ 2018, 11:23 IST
ಅಕ್ಷರ ಗಾತ್ರ

ಮೈಸೂರು: ಪತ್ನಿ ಹಾಗೂ ಮಗಳನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಎಂಜಿನಿಯರ್‌ ಪ್ರಜ್ವಲ್‌ (45) ಉದ್ಯೋಗವಿಲ್ಲದ ಕಾರಣ ಹತಾಶೆಗೆ ಒಳಗಾಗಿದ್ದರು. ಅತಿಯಾದ ಕುಡಿತದ ಚಟವನ್ನೂ ಹೊಂದಿದ್ದರು.

ವಿಜಯನಗರ ನಾಲ್ಕನೇ ಹಂತದ ನಿವಾಸಿ ಪ್ರಜ್ವಲ್‌ ಅವರು ಪತ್ನಿ ಸವಿತಾ (38) ಮತ್ತು ಪುತ್ರಿ ಸಿಂಚನಾ (10) ಅವರನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂಜನಗೂಡಿನ ಪ್ರಜ್ವಲ್‌ ಮತ್ತು ಕೆ.ಆರ್‌.ಪೇಟೆಯ ಸವಿತಾ ಅವರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಪ್ರಜ್ವಲ್‌ ಕೆಲಸ ಮಾಡುತ್ತಿದ್ದ ಕಂಪನಿ ನಷ್ಟದ ಕಾರಣ ಕೆಲಸಮಯಗಳ ಹಿಂದೆ ಬಾಗಿಲು ಮುಚ್ಚಿತ್ತು.

ಕೆಲಸ ಕಳೆದುಕೊಂಡು ಹತಾಶೆಗೆ ಒಳಗಾಗಿದ್ದ ಅವರು, ತಂದೆಯ ಸೂಚನೆಯಂತೆ ಮೈಸೂರಿಗೆ ವಾಸ ಬದಲಿಸಿದ್ದರು. ಸವಿತಾ ಕೂಡಾ ಕೆಲಸ ಬಿಟ್ಟಿದ್ದರು. ತಂದೆಯೇ ಮಗನಿಗೆ ವಿಜಯನಗರದಲ್ಲಿ ಮನೆ ಖರೀದಿಸಿಕೊಟ್ಟಿದ್ದರು.

ಪತಿ ಮತ್ತು ಪತ್ನಿ ಮೈಸೂರಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರೂ ಸೂಕ್ತ ಉದ್ಯೋಗ ದೊರೆತಿರಲಿಲ್ಲ ಎಂದು ಪ್ರಜ್ವಲ್‌ ಅವರ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯ ವಿವರ: ಪ್ರಜ್ವಲ್‌, ಮೊದಲು ಪತ್ನಿಯ ಕೊಲೆಗೈದಿದ್ದಾರೆ. ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಪತ್ನಿಯ ಕತ್ತು ಸೀಳಿ ಕೃತ್ಯ ಎಸಗಿದ್ದಾರೆ. ಈ ವೇಳೆ ಮಗಳು ಕೆಎಚ್‌ಬಿ ಕಾಲೊನಿಯಲ್ಲಿರುವ ಸಂಬಂಧಿಯ ಮನೆಗೆ ತೆರಳಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಆ ಬಳಿಕ ಆರೋಪಿ ಸಂಬಂಧಿಯ ಮನೆಗೆ ತೆರಳಿ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಆಕೆಯನ್ನು ನೇರವಾಗಿ ಇನ್ನೊಂದು ಬೆಡ್‌ರೂಂಗೆ ಕರೆದೊಯ್ದು ಕತ್ತು ಸೀಳಿ ಕೊಲೆಗೈದಿದ್ದಾರೆ.

ಕೃತ್ಯ ಎಸಗಿದ ಬಳಿಕ ಪ್ರಜ್ವಲ್‌ ರಾತ್ರಿಯಿಡೀ ಮದ್ಯಪಾನ ಮಾಡಿದ್ದಾರೆ. ಬುಧವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ ಪತ್ನಿ ಮತ್ತು ಮಗಳ ಶವಗಳ ಜತೆ ದಿನ ಕಳೆದಿದ್ದಾರೆ.

ಗುರುವಾರ ರಾತ್ರಿ ತಾವೂ ಕತ್ತು ಕೊಯ್ದು, ಕೈಗಳ ನರ ಕತ್ತರಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ರಾತ್ರಿ ಸುಮಾರು 1.30ರ ವರೆಗೆ ನೋವಿನಿಂದ ನರಳಿ ತಂದೆಗೆ ಕರೆಮಾಡಿದರಲ್ಲದೆ, ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿರುವ ವಿಷಯ ತಿಳಿಸಿದ್ದಾರೆ.

ತಂದೆ ನೀಡಿದ ಮಾಹಿತಿಯಂತೆ ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಜ್ವಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮನೆಯಲ್ಲಿ ಪರಿಶೋಧಿಸಿದಾಗ ಪ್ರತ್ಯೇಕ ಕೊಠಡಿಗಳಲ್ಲಿ ಸವಿತಾ ಮತ್ತು ಸಿಂಚನಾ ಅವರ ಶವಗಳು ಪತ್ತೆಯಾದವು.

ಮೇ 24ರಂದು ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಬೇಕಿತ್ತು. ಕೃತ್ಯದ ಹಿಂದಿನ ದಿನದಂದು (ಮೇ 22)  ಸಾಮೂಹಿಕ ಆತ್ಮಹತ್ಯೆಯ ಬಗ್ಗೆ ಚಿಂತಿಸಿದ್ದಾಗಿ ಪ್ರಜ್ವಲ್‌ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪತ್ನಿ ಇದನ್ನು ವಿರೋಧಿಸಿದ್ದಳು ಎನ್ನಲಾಗಿದೆ.

ಪ್ರಜ್ವಲ್‌ಗೆ ಸ್ವಂತ ಉದ್ಯೋಗವಿಲ್ಲದ ಕಾರಣ ತಂದೆ ನೀಡುತ್ತಿದ್ದ ಹಣದಿಂದ ಸಂಸಾರ ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಅವಮಾನಕ್ಕೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಆಯುಕ್ತ ಎ.ಸುಬ್ರಮ ಣ್ಯೇಶ್ವರ ರಾವ್, ಡಿಸಿಪಿ ಎನ್‌.ವಿಷ್ಣು ವರ್ಧನ್‌ ಮತ್ತು ಎಸಿಪಿ ಸಿ.ಗೋಪಾಲ್‌ ಅವರು ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT