ಸಭಾಪತಿ ಆಯ್ಕೆಗೆ ಚುನಾವಣೆ ನಡೆಸುವಂತೆ ಪಟ್ಟು

7
ಬಿಜೆಪಿ ಸಭಾತ್ಯಾಗ

ಸಭಾಪತಿ ಆಯ್ಕೆಗೆ ಚುನಾವಣೆ ನಡೆಸುವಂತೆ ಪಟ್ಟು

Published:
Updated:

ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲು ಸರ್ಕಾರ ಕ್ರಮಕೈಗೊಳ್ಳದಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರವಾಗಿ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬಿರುಸಿನ ವಾಕ್ಸಮರ ನಡೆಯಿತು.

ಅಧಿವೇಶನ ಮುಕ್ತಾಯ ಆಗುವುದರೊಳಗೇ ಚುನಾವಣೆ ನಡೆಸುವಂತೆ ಪಟ್ಟು ಹಿಡಿದು ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.  ಶೂನ್ಯ ವೇಳೆ ಬಳಿಕ ಈ ಬಗ್ಗೆ ಪ್ರಸ್ತಾಪಿಸಲು ಬಿಜೆಪಿಯ ಆಯನೂರು ಮಂಜುನಾಥ್‌ಗೆ ಸಭಾಪತಿಯವರು ಅವಕಾಶ ನೀಡಿದರು. ಮುಂಚಿತವಾಗಿ ನೋಟಿಸ್‌ ನೀಡದೆ ಚರ್ಚೆಗೆ ಅವಕಾಶ ಕಲ್ಪಿಸಿದ್ದಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

 ಚುನಾವಳಾ ವೇಳಾಪಟ್ಟಿ ಪ್ರಕಟಿಸಲು ಸಂಸದೀಯ ಸಚಿವರು ನಿರಾಕರಿಸಿದ್ದರಿಂದ, ಹೆಚ್ಚಿನ ಚರ್ಚೆಗೆ ಸಭಾಪತಿ ಅವಕಾಶ ಕಲ್ಪಿಸಿದ್ದರಿಂದ ಸಿಟ್ಟಾದ ವಿರೋಧಪಕ್ಷದ ಸದಸ್ಯರು ಸದನದಿಂದ ಹೊರನಡೆದರು.

ವಿಧಾನ ಪರಿಷತ್‌ನಲ್ಲಿ ವಾಕ್ಸಮರ

* ಆಯನೂರು ಮಂಜುನಾಥ್‌ (ಬಿಜೆಪಿ):  ನಾನು ಮಾತನಾಡುವ ಮುನ್ನವೇ ಆಡಳಿತ ಪಕ್ಷದವರು ಆತಂಕಗೊಂಡಂತೆ ತೋರುತ್ತಿದೆ

*ಎಚ್‌.ಡಿ.ರೇವಣ್ಣ (ಲೋಕೋಪಯೋಗಿ ಸಚಿವ): ಯಾವ ನಿಯಮದ ಆಧಾರದಲ್ಲಿ ವಿಷಯ ಮಂಡಿಸುತ್ತಿದ್ದೀರಿ ಎಂಬುದನ್ನು ಮೊದಲು ಹೇಳಿ. ಒಮ್ಮೆ ಚರ್ಚಿಸಿದ ವಿಷಯವನ್ನೇ ಮತ್ತೆ ಮತ್ತೆ ಚರ್ಚೆಸಬೇಡಿ.

*ಆಯನೂರು ಮಂಜುನಾಥ್‌:  ಇದೇ 12ರ ಒಳಗೆ ಸಭಾಪತಿ ಚುನಾವಾಣೆ ನಡೆಸುವುದಾಗಿ ಸಂಸದೀಯ ವ್ಯವಹಾರ ಸಚಿವರು ಸದನಕ್ಕೆ ತಿಳಿಸಿದ್ದರು. ಚುನಾವಣೆಗೆ ಕನಿಷ್ಠ ಮೂರು ದಿನ ಮುನ್ನ ಅಧಿಸೂಚನೆ ಹೊರಡಿಸಬೇಕು. ಆ ಪ್ರಕಾರ ಇಷ್ಟರೊಳಗೆ ಅಧಿಸೂಚನೆ ಪ್ರಕಟಿಸಬೇಕಿತ್ತು. ಸಚಿವರು ಮಾತು ತಪ್ಪಿದರೆ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ.

*ಕೃಷ್ಣ ಬೈರೇಗೌಡ (ಸಂಸದೀಯ ವ್ಯವಹಾರಗಳ ಸಚಿವ):  ನಾನು ಸದನದಲ್ಲಿ ಭರವಸೆ ನೀಡಿದ್ದು ಈ ಅಧಿವೇಶನ ಮುಕ್ತಾಯವಾಗುವುದರೊಳಗೆ ಹೊಸ ಸಭಾಪತಿ ಆಯ್ಕೆ ನಡೆಸುತ್ತೇವೆ ಎಂದು. ಈಗ ನಡೆಯುತ್ತಿರುವ 135ನೇ ಅಧಿವೇಶನವನ್ನು ಗುರುವಾರ ಮುಂದೂಡಲಾಗುತ್ತದೆಯೇ ಹೊರತು, ಅದು ಮುಕ್ತಾಯವಾಗುವುದಿಲ್ಲ. 136ನೇ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಸಭಾಪತಿ ಆಯ್ಕೆ ಮಾಡದಿದ್ದರೆ ಮಾತ್ರ ನಾನು ಮಾತು ತಪ್ಪಿದಂತಾಗುತ್ತದೆ. ಇದೇ ಮಾತನ್ನು ದಿವಂಗತ ಡಾ.ವಿ.ಎಸ್‌.ಆಚಾರ್ಯ ಅವರೂ ಇದೇ ಸದನದಲ್ಲಿ ಹೇಳಿದ್ದರು.

*ಕೋಟ ಶ್ರೀನಿವಾಸ ಪೂಜಾರಿ (ವಿರೋಧ ಪಕ್ಷದ ನಾಯಕ):  ಸಭಾಪತಿ ಆಯ್ಕೆ ಕುರಿತು ಆಚಾರ್ಯ ಅವರು ಮಾತನಾಡುವಾಗ ನಾನೂ ಸದನದಲ್ಲಿದ್ದೆ. ಆದರೆ, ಆಗ ಮಾತು ಕೊಟ್ಟ ಪ್ರಕಾರ ಅಧಿವೇಶನ ಮುಗಿಯುವುದರೊಳಗೆ ಹೊಸ ಸಭಾಪತಿಯ ಆಯ್ಕೆ ನಡೆದಿತ್ತು. ಆದರೆ, ಈಗ ನಿಮ್ಮ ಬಳಿ ಶಕ್ತಿ ಇದೆ. ಇಂದೇ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುತ್ತೀರೋ ಇಲ್ಲವೋ ಎಂದು ಹೇಳಿ.

*ಕೆ.ಬಿ.ಶಾಣಪ್ಪ (ಬಿಜೆಪಿ): ಕಲಾಪ ಸಲಹಾ ಸಮಿತಿಯಲ್ಲಿ ಸದನವನ್ನು ಗುರುವಾರಕ್ಕೆ ಈ ಬಗ್ಗೆ ಚರ್ಚೆ ಆಗಿತ್ತಲ್ಲವೇ. ಹಾಗಾದರೆ ಆ ಸಭೆಯ ತೀರ್ಮಾನಕ್ಕೆ ಬೆಲೆ ಇಲ್ಲವೇ

* ಕೃಷ್ಣ ಬೈರೇಗೌಡ: ಆ ಸಭೆಯಲ್ಲಿ ಕಲಾಪವನ್ನು ಎಷ್ಟು ದಿನ ನಡೆಸಬೇಕು ಎಂಬ ಬಗ್ಗೆ ಮಾತ್ರ ಚರ್ಚೆ ಆಗಿತ್ತು. ಸಭಾಪತಿ ಆಯ್ಕೆ ಬಗ್ಗೆ ಅಲ್ಲಿ ಚರ್ಚೆ ನಡೆದಿಲ್ಲ. ನಮ್ಮ ಶಕ್ತಿಯ ಬಗ್ಗೆ ನೀವು ಮಾತನಾಡುವುದು ಬೇಡ. ನಿಯಮ ಉಲ್ಲಂಘನೆ ಆದರೆ ಮಾತ್ರ ಹೇಳಿ. ಬಿಜೆಪಿ ಸರ್ಕಾರ ಇದ್ದಾಗಲೂ 1 ತಿಂಗಳು ನಾಲ್ಕು ಹಂಗಾಮಿ ಸಭಾಪತಿ ಸದನ ನಡೆಸಿದ್ದರು ಎಂಬುದನ್ನು ನೆನಪಿಟ್ಟುಕೊಳ್ಳಿ

*ಸಭಾಪತಿ ಬಸವರಾಜ ಹೊರಟ್ಟಿ: ವಿರೋಧ ಪಕ್ಷದವರು ನೋಟಿಸ್‌ ನೀಡದ ಹೊರತಾಗಿಯೂ ಚರ್ಚೆ ಅವಕಾಶ ನೀಡಿದ್ದೇನೆ. ಸೌಜನ್ಯವನ್ನು ದುರ್ಬಳಕೆ ಮಾಡಬೇಡಿ. ಈ ಬಗ್ಗೆ ಚರ್ಚೆ ಸಾಕು

* ಕೋಟ ಶ್ರೀನಿವಾಸ ಪೂಜಾರಿ: ಚರ್ಚೆಗೆ ಅವಕಾಶ ನಿರಾಕರಿಸುವ ಮೂಲಕ ನಮ್ಮ ಮಾತನಾಡುವ ಹಕ್ಕನ್ನು ನೀವು ಕಸಿದುಕೊಳ್ಳಲು ಸಾಧ್ಯವಿಲ್ಲ

* ಸಭಾಪತಿ:  ನೀವು ವಿತಂಡವಾದ ಮಾಡಬೇಡಿ. ಸರ್ಕಾರ ಮಾತಿಗೆ ತಪ್ಪಿದೆ ಎಂದು ನಿಮಗೆ ಅನಿಸಿದರೆ ಸದನದ ನಿಯಮಾವಳಿಗಳ ಪ್ರಕಾರ ಚರ್ಚೆಗೆ ಅವಕಾಶ ಕೋರಬಹುದು. ಮುಂದಿನ ಸಭಾಪತಿ ಆಯ್ಕೆ ಆಗುವವರೆಗೆ ಸದನ ಮುನ್ನಡೆಸುವಂತೆ ರಾಜ್ಯಪಾಲರು ನನಗೆ ಸೂಚಿಸಿದ್ದಾರೆ. ಅದರ ಪ್ರಕಾರ ಕಾರ್ಯನಿರ್ವಹಿಸುತ್ತೇನೆ. 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !