ಬಿಜೆಪಿಯಲ್ಲಿ ಹೆಚ್ಚಿದ ಆತ್ಮವಿಶ್ವಾಸ

ಮಂಗಳವಾರ, ಜೂಲೈ 23, 2019
26 °C
ಐವರು ಶಾಸಕರಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ–ಶಾಸಕರ ನಿರ್ಧಾರ ಅಚಲ

ಬಿಜೆಪಿಯಲ್ಲಿ ಹೆಚ್ಚಿದ ಆತ್ಮವಿಶ್ವಾಸ

Published:
Updated:

ಬೆಂಗಳೂರು: ಐವರು ಅತೃಪ್ತ ಶಾಸಕರು ಶನಿವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ರಾಜೀನಾಮೆ ಅಂಗೀಕರಿಸಲು ಸಭಾಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರಿಂದ ರಾಜ್ಯ ಬಿಜೆಪಿ ಪಾಳೆಯದಲ್ಲಿ ವಿಶ್ವಾಸ ಹೆಚ್ಚಾಗಿದೆ.

ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಪತನ ಖಚಿತ ಎಂಬ ವಿಶ್ವಾಸಕ್ಕೆ ಕಮಲ ಪಕ್ಷದ ನಾಯಕರು ಬಂದಿದ್ದಾರೆ. ಬಿಜೆಪಿಯ ನಾಲ್ಕು ಶಾಸಕರಿಗೆ ಗಾಳ ಹಾಕಿದ ಮತ್ತು ಬೆಂಗಳೂರಿನ ನಾಲ್ಕು ಶಾಸಕರು ಮತ್ತೆ ‘ದೋಸ್ತಿ’ ಪಾಳೆಯ ಸೇರಲು ಸಿದ್ಧರಿದ್ದಾರೆ ಎಂಬ ವದಂತಿಯನ್ನು ಶುಕ್ರವಾರ ಹಬ್ಬಿಸಲಾಗಿತ್ತು. ಅದು ಹುಸಿ ಎಂಬುದು ಖಚಿತ ಎಂದು ಬಿಜೆಪಿ ನಾಯಕರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದಾರೆ.

‘ಈ ವದಂತಿಯನ್ನು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರು ಹಬ್ಬಿಸಿದ್ದು. ಮುಂಬೈನಲ್ಲಿರುವ ಶಾಸಕರು ಮತ್ತು ಬಿಜೆಪಿ ನಾಯಕರಲ್ಲಿ ಗೊಂದಲ ಮೂಡಿಸಲು ಉರುಳಿಸಿದ ದಾಳ’ ಎಂದು ಯಡಿಯೂರಪ್ಪ ಶುಕ್ರವಾರ ಹೇಳಿದ್ದರು.

‘ಐವರು ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ‘ದೋಸ್ತಿ’ಗಳ ‘ಅಸ್ತ್ರ’ ಟುಸ್ಸಾಗಿದೆ. ರಾಜೀನಾಮೆ ನೀಡಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿರುವ ಯಾವುದೇ ಶಾಸಕರು ಮರಳಿ ಮೈತ್ರಿ ಪಡೆ ಸೇರುವ ಸಾಧ್ಯತೆ ಇಲ್ಲ ಎಂಬುದು ಖಚಿತವಾಗಿದೆ. ಈ ವಿದ್ಯಮಾನ ಪಕ್ಷದ ನಾಯಕರಲ್ಲಿ ಹರ್ಷಕ್ಕೆ ಕಾರಣವಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನಗರದ ಹೊರ ವಲಯದಲ್ಲಿರುವ ರಮಡ ರೆಸಾರ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ, ವಿಧಾನಸಭೆ ಅಧಿವೇಶನದ ಕಾರ್ಯಕಲಾಪ ನಡೆಸುವಂತಿಲ್ಲ’ ಎಂದು ಹೇಳಿದರು.

‘ನಾವು ಸೋಮವಾರದವರೆಗೆ ಕಾದು ನೋಡುತ್ತೇವೆ. ಮಂಗಳವಾರ ಸುಪ್ರೀಂಕೋರ್ಟ್‌ ತೀರ್ಪು ಬರುತ್ತದೆ. ಆ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದೂ ಅವರು ತಿಳಿಸಿದರು.

ಅತೃಪ್ತರು ಹೆಜ್ಜೆ ಹಿಂದಿಡುವುದಿಲ್ಲ: ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿರುವ ಶಾಸಕರಲ್ಲಿ 10 ಮಂದಿ ಮೊದಲೇ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಐವರು ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕೂಡಲೇ ರಾಜೀನಾಮೆ ಅಂಗೀಕರಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಇದರಿಂದ ಅತೃಪ್ತ ಶಾಸಕರು ಹೆಜ್ಜೆ ಹಿಂದಿಡುವುದಿಲ್ಲ ಎಂಬುದು ಸ್ಪಷ್ಟ ಎಂದು ಯಡಿಯೂರಪ್ಪ ಹೇಳಿದರು.

ಜೆಡಿಎಸ್‌ ನಾಯಕರು ಸಂಪರ್ಕಿಸಿದ್ದರು ಎನ್ನಲಾದ ಪಕ್ಷದ ನಾಲ್ಕರಿಂದ ಐದು ಶಾಸಕರನ್ನು ಕರೆಸಿಕೊಂಡು ಯಡಿಯೂರಪ್ಪ ಬೆಳಿಗ್ಗೆ ಮಾತುಕತೆ ನಡೆಸಿದರು. ‘ಯಾವುದೇ ಅಸಮಾಧಾನ ಇದ್ದರೂ ಹೇಳಿಕೊಳ್ಳಿ. ಆದರೆ, ಕುಮಾರಸ್ವಾಮಿಯವರು ಮೂಗಿಗೆ ತುಪ್ಪ ಸವರುವ ಮಾತುಗಳನ್ನು ನಂಬಿ ದಾರಿ ತಪ್ಪಬೇಡಿ’ ಎಂದೂ ಸಲಹೆ ನೀಡಿದರು.

ರಮಡ ರೆಸಾರ್ಟ್‌ನಲ್ಲಿ ಶುಕ್ರವಾರ 80 ಶಾಸಕರು ವಾಸ್ತವ್ಯ ಹೂಡಿದ್ದರು. ಆದರೆ, ಶನಿವಾರ ಸುಮಾರು 40 ಜನ ಮಾತ್ರ ಇದ್ದಾರೆ. ಕೆಲವರು ನಗರದಲ್ಲಿಯೇ ಬೀಡು ಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಸೋಮಣ್ಣ ಲೇವಡಿ: ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಯಾರು ಯಾರ ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಳ್ಳು ತ್ತಾರೋ ನೋಡಬೇಕು ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಲೇವಡಿ ಮಾಡಿದರು.

‘ಸುಪ್ರೀಂಕೋರ್ಟ್‌ ತೀರ್ಪು ಅತೃಪ್ತರ ಪರ ಬರುವ ಸಾಧ್ಯತೆ ಇದ್ದು, ಇನ್ನು ಕುಮಾರಸ್ವಾಮಿ ಆಟ ನಡೆಯುವುದಿಲ್ಲ. ರಾಜೀನಾಮೆ ನೀಡಿದವರ ಪರ ತೀರ್ಪು ಬಂದರೆ ಮೈತ್ರಿ ಪಕ್ಷದ ನಾಯಕರು ಬಡಿದಾಡುವುದು ಖಚಿತ’ ಎಂದು ಹೇಳಿದರು. 

ತಿಪ್ಪರಲಾಗ ಹಾಕಿದರೂ ಸರ್ಕಾರ ಉಳಿಯಲ್ಲ
‘ದೋಸ್ತಿ’ ನಾಯಕರು ಅತೃಪ್ತರ ಮನವೊಲಿಸುವ ಮಾತಿರಲಿ, ತಿಪ್ಪರಲಾಗ ಹಾಕಿದರೂ ಸರ್ಕಾರ ಉಳಿಸಿಕೊಳ್ಳುವುದು ಕಷ್ಟ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಎನ್‌.ರವಿಕುಮಾರ್‌ ತಿಳಿಸಿದರು.

‘ಸದನದಲ್ಲಿ ವಿಶ್ವಾಸ ಮತ ಕೋರುವುದಾಗಿ ಹೇಳಿ ಸಮಯ ಪಡೆದುಕೊಂಡಿರುವ ಮೈತ್ರಿ ನಾಯಕರು ಕೊನೆ ಹಂತದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದರಿಂದ ಹೆಚ್ಚು ಪ್ರಯೋಜನ ಆಗಲಾರದು. ರಾಜೀನಾಮೆ ನೀಡಿರುವವರು ಕಠಿಣ ನಿರ್ಧಾರ ಮಾಡಿದ್ದಾರೆ. ಯಾವುದೇ ಮನವೊಲಿಕೆಗೂ ಬಗ್ಗುವಂತೆ ಕಾಣುತ್ತಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !