ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ’ ಕ್ಷೇತ್ರದತ್ತ ಚಿತ್ತಹರಿಸಿದ ಬಿಜೆಪಿ

Last Updated 25 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಉಳಿಸಲು ಮೈತ್ರಿಕೂಟ ಶತಪ್ರಯತ್ನ ಆರಂಭಿಸಿರುವ ಬೆನ್ನಲ್ಲೇ, ಲಿಂಗಾಯತ ‍‍ ಮತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಗೆದ್ದಿರುವ ಶಾಸಕರ ಸೆಳೆದು ಸರ್ಕಾರ ಉರುಳಿಸುವ ತಂತ್ರಗಾರಿಕೆಯನ್ನು ಬಿಜೆಪಿ ನಾಯಕರುಹೆಣೆಯುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜತೆ ಇರುವ ಕೈ ಶಾಸಕರ ರಾಜೀನಾಮೆ ಕೊಡಿಸುವುದು ಒಂದು ಭಾಗ. ಆದರೆ, ಜಾರಕಿಹೊಳಿ ಸೇರಿದಂತೆ ಕೆಲವರು ಸಿದ್ದರಾಮಯ್ಯನವರ ಜತೆ ಆಪ‍್ತ ಬಾಂಧವ್ಯ ಹೊಂದಿದ್ದು, ಕೊನೆಗಳಿಗೆಯಲ್ಲಿ ಅವರಲ್ಲಿ ಕೆಲವರು ಕೈ ಕೊಡಬಹುದು. ಈಗಾಗಲೇ ಮೂರು ಬಾರಿ ‘ಆಪರೇಷನ್ ಕಮಲ’ದ ಯತ್ನ ವಿಫಲವಾಗಿದೆ.

ಈ ಬಾರಿ ಸರ್ಕಾರದ ಪತನದ ಯತ್ನಕ್ಕೆ ಕೈ ಹಾಕಿದರೆ ಯಶಸ್ವಿಯಾಗಲೇ ಬೇಕು ಎಂಬ ಹಟಕ್ಕೆ ಬಿದ್ದಿರುವ ನಾಯಕರು ಬೇರೆಯದೇ ಆದ ಲೆಕ್ಕಾಚಾರದೊಂದಿಗೆ ಹೆಜ್ಜೆ ಇಟ್ಟಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವನ್ನೂ ಮೀರಿ ಚಿಂಚೋಳಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೋದಿ ಅಲೆ ಹಾಗೂ ಯಡಿಯೂರಪ್ಪನವರ ಪ್ರಭಾವ ಸಮರ್ಪಕವಾಗಿ ಬಳಕೆಯಾದರೆ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಗೆಲುವು ಸುಲಭ. ಅತೃಪ್ತ ಶಾಸಕರು ಮಾತ್ರವಲ್ಲದೇ, ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಪಕ್ಷಕ್ಕೆ ಕರೆತರುವ ವೇದಿಕೆ ಸಿದ್ಧಪಡಿಸುವಯತ್ನ ಆರಂಭವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರ, ಕೋಲಾರ, ಮಂಡ್ಯ ಜಿಲ್ಲೆಗಳ ಕಾಂಗ್ರೆಸ್–ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ಒಮ್ಮೆ ರಾಜೀನಾಮೆ ಪರ್ವ ಆರಂಭವಾದರೆ ಸಾಲು ಸಾಲು ಶಾಸಕರು ಬಿಜೆಪಿಯ ಹಾದಿ ಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಲಿಂಗಾಯತರ ಕಡೆಗಣಿಸಿದ ಕಾಂಗ್ರೆಸ್‌’

‘ಲಿಂಗಾಯತರನ್ನು ಕಾಂಗ್ರೆಸ್ ಕಡೆಗಣಿಸಿರುವುದು ನಗ್ನ ಸತ್ಯ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಲು ಅದೇ ಕಾರಣ’ ಎಂದು ಹಿರೇಕೆರೂರು ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ ಹೇಳಿದರು.

‘1968–69ರಿಂದಲೂ ಲಿಂಗಾಯತರನ್ನು ಕಡೆಗಣಿಸಲಾಗಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರನ್ನೂ ಸರಿಯಾಗಿ ನಡೆಸಿಕೊಂಡಿಲ್ಲ. ಮುಂಬೈ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಪಕ್ಷ ಒಂದೇ ಒಂದು ಸ್ಥಾನ ಗೆಲ್ಲದಿರಲು ಲಿಂಗಾಯತರ ಬಗೆಗಿನ ಧೋರಣೆಯೇ ಕಾರಣ’ ಎಂದು ಅವರು ಹೇಳಿದರು.

ಜಾರಕಿಹೊಳಿ ಭೇಟಿಯಾದ ಜಾಧವ

ಗುಲಬರ್ಗಾ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಡಾ. ಉಮೇಶ ಜಾಧವ ಅವರು ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ವೇಳೆ ಬಿಜೆಪಿ ಮುಖಂಡರಾದ ಸಿ.ಪಿ. ಯೋಗೇಶ್ವರ್‌, ಮಾಲೀಕಯ್ಯ ಗುತ್ತೇದಾರ ಕೂಡ ಹಾಜರಿದ್ದರು. ‘ಆಪರೇಷನ್ ಕಮಲ’ಕ್ಕೆ ಮತ್ತೆ ಬಿಜೆಪಿ ಚಾಲನೆ ನೀಡಿರುವುದಕ್ಕೆ ಇದು ಸೂಚನೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT