ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಹುರಿಗಟ್ಟಿದ ಅಸಂತೋಷ

ಸರ್ಕಾರ ಬಂದು ಎರಡು ತಿಂಗಳಲ್ಲೇ ಹೊಯ್ದಾಟ ಬಯಲಿಗೆ
Last Updated 28 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆಯುವಷ್ಟರಲ್ಲೇ, ಪಕ್ಷ ಮತ್ತು ಸರ್ಕಾರ ನಡೆಸುವವರ ಮಧ್ಯದ ಸಂಘರ್ಷ ಬೀದಿಗೆ ಬಂದಿದೆ.

ಅನರ್ಹ ಶಾಸಕರು, ಅಧಿಕಾರ ಸಿಗದೇ ಅತೃಪ್ತರಾಗಿರುವ ಶಾಸಕರ ಕೋಪ–ತಾಪದ ಮಧ್ಯೆಯೇ ಪಕ್ಷದ ಅಸಹಕಾರವನ್ನೂ ಎದುರಿಸುವ ಇಕ್ಕಟ್ಟಿನಲ್ಲಿ ಯಡಿಯೂರಪ್ಪ ಸಿಕ್ಕಿ ಹಾಕಿಕೊಂಡಿದ್ದಾರೆ.

ಸಮನ್ವಯದಿಂದ ಕೆಲಸ ಮಾಡಿ ಕೊಂಡು ಹೋಗಬೇಕಾದ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮಧ್ಯೆ ಭಿನ್ನಮತ ತೀವ್ರಗೊಳ್ಳುತ್ತಿದೆ. ತಮ್ಮ ಅಧಿಕಾರವನ್ನು ಇಬ್ಬರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗಬೇಕಾಗಿದ್ದ ಗೊಂದಲಗಳು ನಿರ್ಣಯ ರೂಪದಲ್ಲಿ ಹೊರಹೊಮ್ಮತೊಡಗಿವೆ ಎಂಬ ಟೀಕೆ ಪಕ್ಷದ ಆಂತರಿಕ ವಲಯದಲ್ಲೇ ವ್ಯಕ್ತವಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಪಕ್ಷದ ಅಧ್ಯಕ್ಷ ಸ್ಥಾನ ವನ್ನು ತಮ್ಮ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿರುವ ಅರವಿಂದ ಲಿಂಬಾವಳಿ ಅಥವಾ ಶೋಭಾ ಕರಂದ್ಲಾಜೆ ಅವರಿಗೆ ಬಿಟ್ಟುಕೊಡುವ ಇರಾದೆಯಲ್ಲಿದ್ದರು. ಸರ್ಕಾರಕ್ಕೆ ಪೂರಕವಾಗಿ ಪಕ್ಷದ ಹಿಡಿತವನ್ನು ತನ್ನ ಕೈಯೊಳಗೆ ಇಟ್ಟುಕೊಳ್ಳುವುದು ಅವರ ಅಪೇಕ್ಷೆಯಾಗಿತ್ತು.

ಈ ಸುಳಿವರಿತ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು, ತಮ್ಮ ಬಳಗದಲ್ಲಿ ಗುರುತಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಅಧ್ಯಕ್ಷರಾಗಿ ನೇಮಿಸುವ ಮೂಲಕ ಯಡಿಯೂರಪ್ಪ ಬಣವನ್ನೇ ದಿಗ್ಭ್ರಮೆಗೊಳಿಸುವಂತೆ ಮಾಡಿದರು.

‘ಕಟೀಲ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಘದ ಹಿನ್ನೆಲೆ ಯವರು, ಹಿರೀಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ‘ಕೇಸರಿಗುಣ’ವನ್ನು, ಸಂಘದ ‘ಸಂಸ್ಕಾರ’ವನ್ನು ಪಕ್ಷಕ್ಕೆ ನೀಡಲು ಮುಂದಾದರು. ಪಕ್ಷದಲ್ಲಿ ಮೂಲ ನಿವಾಸಿಗಳಿಗಿಂತ ವಲಸಿಗರ ಪ್ರಭಾವ ಹೆಚ್ಚಾಗಿದ್ದು, ಅದನ್ನು ಕುಗ್ಗಿಸುವ ಯತ್ನಕ್ಕೂ ಕೈ ಹಾಕಿದರು. ವಲಸಿಗರು ಹಾಗೂ ಕೆಲವು ಮೂಲ ನಿವಾಸಿಗರಲ್ಲಿರುವ ‘ರಾಜಿ’ ಗುಣವನ್ನು ಕೈಬಿಟ್ಟು, ಸಂಘದ ‘ಸಿದ್ಧಾಂತ’ದ ಆಧಾರದ ಮೇಲೆ ಪಕ್ಷಕ್ಕೆ ಹೊಸರೂಪ ಕೊಡುವ ಯತ್ನ ಮಾಡಿದರು. ಇದರ ಹಿಂದೆ ಸಂತೋಷ್ ಅವರ ಮಾರ್ಗದರ್ಶನ ಹಾಗೂ ಸೂಚನೆ ಇರುವುದು ಸ್ಪಷ್ಟ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಡಿಯೂರಪ್ಪ ಅವರು ಸಂಘದಹಿನ್ನೆಲೆಯವರೇ ಆದರೂ, ಸೈದ್ಧಾಂತಿಕ ಅಂತರವನ್ನು ಕಾಯ್ದು ಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಸಂಘಟನೆಗಿಂತ ಅಧಿಕಾರದ ಕೇಂದ್ರದತ್ತ ಹೆಚ್ಚು ಉತ್ಸುಕತೆ ಇರುವ ವರು. ಅವರಿಗೂ ವಯಸ್ಸಾಗಿದ್ದು ಮೂರನೇ ತಲೆಮಾರಿನ ನಾಯಕತ್ವವನ್ನು ಬೆಳೆಸುವ ಜತೆಗೆ, ಕರ್ನಾಟಕದ ಘಟಕಕ್ಕೆ ‘ಸಂಘದ ಸಂಸ್ಕಾರ’ ಕೊಡಿಸು ವುದಕ್ಕೆ ರಾಷ್ಟ್ರೀಯ ನಾಯಕತ್ವ ಮುಂದಾಗಿದೆ. ಈ ಹಿನ್ನೆಲೆಯೊಳಗೆ ಇಂತಹ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

‘ಇದೇ ಕಾರಣಕ್ಕಾಗಿ ಸಂಪುಟ ವಿಸ್ತರಣೆ ವಿಳಂಬವಾಯಿತು. ಯಡಿಯೂರಪ್ಪನವರು ನಿರೀಕ್ಷಿಸದ ರೀತಿ ಯಲ್ಲಿ ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. ಆರೇಳು ಬಾರಿ ಶಾಸಕರಾದರೂ ಪಕ್ಷದ ಸಂಘಟನೆಗೆ ಆದ್ಯತೆ ನೀಡದವರನ್ನು ಸಂಪುಟದಿಂದ ಹೊರಗೆ ಇಡಲಾಯಿತು. ಯಡಿಯೂರಪ್ಪನವರ ಪ್ರಭಾವದಾಚೆಗೂ ಪಕ್ಷದ ನೆಲೆಯನ್ನು ವಿಸ್ತರಿಸಿ ಬೆಳೆಸುವುದು ಇದರ ಹಿಂದಿನ ಆಶಯ’ ಎಂದು ಅವರು ವಿವರಿಸಿದರು.

ಬಿಎಸ್‌ವೈ–ನಳಿನ್‌ ಸೇರು ಸವ್ವಾಸೇರು

ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಕಾರಣಕ್ಕೆ ಸಿ.ವಿ. ರಾಮನ್‌ ನಗರದ ಶಾಸಕ ಎಸ್. ರಘು ನೇತೃತ್ವದಲ್ಲಿ ಸಮಿತಿಯನ್ನು ಯಡಿಯೂರಪ್ಪ ರಚಿಸಿದ್ದರು. ಆದರೆ, ಅದಕ್ಕೆ ತಡೆಯೊಡ್ಡಿದ ನಳಿನ್‌, ಪಕ್ಷದ ವೇದಿಕೆಯಲ್ಲಿ ಮೇಯರ್ ಆಯ್ಕೆ ಮಾಡುತ್ತೇವೆ. ಇಂತಹವು ನಡೆಯುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು. ಇದು ಸಂಘರ್ಷದ ಆರಂಭ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ‘ಪಕ್ಷ ನಿಷ್ಠ’ರನ್ನು ಕಡೆಗಣಿಸಲಾಗುತ್ತಿದೆ ಎಂದು ಸಿಟ್ಟಿಗೆದ್ದ ಕೆಲವು ನಾಯಕರು ಪ್ರತ್ಯೇಕ ಸಭೆಗಳನ್ನು ಮಾಡಲು ಆರಂಭಿಸಿದ್ದರು. ಈಗ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಪಕ್ಷದೊಳಗೆ ಸಂಘರ್ಷ ಬಿರುಸುಗೊಂಡಿತ್ತು.

ಇದರಿಂದ ಆಕ್ರೋಶಗೊಂಡಿದ್ದ ಯಡಿಯೂರಪ್ಪ, ಪಕ್ಷ ನಿಷ್ಠರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ. ಭಾನುಪ್ರಕಾಶ್ ಹಾಗೂ ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪಕ್ಷದ ಉಪಾಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಿದ್ದರು. ನಳಿನ್ ಅಧ್ಯಕ್ಷರಾಗಿ ತಿಂಗಳು ಕಳೆಯುತ್ತಿದ್ದಂತೆ, ಇಬ್ಬರಿಗೆ ಮತ್ತೆ ಹುದ್ದೆಯನ್ನು ನೀಡುವ ಮೂಲಕ, ಇನ್ನುಮುಂದೆ ಪಕ್ಷ ನಿಷ್ಠರಿಗೆ ಮಣೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಇದಕ್ಕೆ ಬಗ್ಗದ ಯಡಿಯೂರಪ್ಪ ತಮ್ಮದೇ ದಾಳವನ್ನು ಉರುಳಿಸಿದ್ದಾರೆ. ಯಾವತ್ತೂ ತನ್ನ ಆಪ್ತ ಬಣದಲ್ಲಿ ಗುರುತಿಸಿಕೊಂಡು ಬಂದಿರುವ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಯೋಜನಾ ಮಂಡಳಿ ಉಪಾಧ್ಯಕ್ಷ ಹುದ್ದೆಗೆ ಹಾಗೂ ಶಂಕರಗೌಡ ಪಾಟೀಲರಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ಕೊಟ್ಟರು. ಶಾಸಕರಿಗೆ ನೀಡಬಹುದಾಗಿದ್ದ ಸ್ಥಾನವನ್ನು ತಮ್ಮ ಆಪ್ತರಿಗೆ ನೀಡುವ ಮುಖೇನ ಯಡಿಯೂರಪ್ಪ ಕೂಡ ಸಡ್ಡು ಹೊಡೆದಿದ್ದಾರೆ ಎಂಬ ವಿಶ್ಲೇಷಣೆ ಪಕ್ಷದಲ್ಲಿ ನಡೆದಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ, ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕೂಡ ಹರಿಹಾಯ್ದಿದ್ದಾರೆ. ಇದು ಪಕ್ಷದಲ್ಲಿ ಯಡಿಯೂರಪ್ಪ ಬಣ ಹಾಗೂ ಸಂತೋಷ್ ಬಣ ಪ್ರತ್ಯೇಕವಾಗಿ ಧ್ರುವೀಕರಣಗೊಳ್ಳುತ್ತಿರುವ ಸೂಚನೆಯಾಗಿದೆ ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT