‘ವಿಶ್ವಾಸ ಮತ’ ಯಾಚನೆಯ ಎಚ್‌ಡಿಕೆ ದಾಳ: ಬಿಜೆಪಿ ತಳಮಳ

ಮಂಗಳವಾರ, ಜೂಲೈ 23, 2019
24 °C
ರಾಜೀನಾಮೆ ಕೊಟ್ಟ 16 ಶಾಸಕರು ಸದನಕ್ಕೆ ಗೈರು l ಕಮಲದ ‘ಗುಂಗಿ’ನಲ್ಲಿದ್ದ ಶಾಸಕರು ಹಾಜರು

‘ವಿಶ್ವಾಸ ಮತ’ ಯಾಚನೆಯ ಎಚ್‌ಡಿಕೆ ದಾಳ: ಬಿಜೆಪಿ ತಳಮಳ

Published:
Updated:

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿ ಆಟಕ್ಕೆ ಪ್ರತಿಯಾಗಿ ‘ವಿಶ್ವಾಸ ಮತ’ ಯಾಚನೆಯ ಪ್ರತಿ ದಾಳ ಉರುಳಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳುವ ಶತಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈ ಯತ್ನಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದು, ವಾರದ ವಿದ್ಯಮಾನಗಳಿಂದ ಮಂಕು ಕವಿದಂತಿದ್ದ ಮೈತ್ರಿಕೂಟದ ನಾಯಕರಲ್ಲಿ ಉತ್ಸಾಹ ಗರಿಗೆದರಿದೆ. ‘ಸರ್ಕಾರ ಬಿದ್ದೇ ಹೋಯಿತು’ ಎಂಬ ಉಮೇದಿನಲ್ಲಿದ್ದ  ಬಿಜೆಪಿ ಪಾಳಯ ‘ದೋಸ್ತಿ’ಗಳ ನಡೆಯಿಂದ ಕಂಗಾಲಾಗಿದೆ. 

‘ಇದೇ 16ರವರೆಗೆ ಯಥಾಸ್ಥಿತಿ ಕಾಪಾಡಿ’ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರಿಂದಾಗಿ ಕೈ ತಪ್ಪಿ ಹೋಗಿರುವ ಶಾಸಕರನ್ನು ಮರಳಿ ತೆಕ್ಕೆಗೆ ಸೇರಿಸುವ ವಿಪುಲ ಅವಕಾಶ ಮಿತ್ರಕೂಟಕ್ಕೆ ಸಿಕ್ಕಂತಾಗಿದೆ. ಆ ಯತ್ನದಲ್ಲಿ ಸಫಲತೆ ಸಿಗಬಹುದೆಂಬ ನಿರೀಕ್ಷೆ ನಾಯಕರದ್ದಾಗಿದೆ.  

ವಿಧಾನಸಭೆ ಕಲಾಪ ಆರಂಭದ ದಿನ ಅದಕ್ಕೆ ಹಿಂದಿನ ದಿನಗಳಲ್ಲಿ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸುವುದು ಸಂಪ್ರದಾಯ. ಶುಕ್ರವಾರ ಕಲಾಪ ಆರಂಭವಾದಾಗ ಸಂತಾಪ ಸೂಚಕ ನಿರ್ಣಯವನ್ನು ಸಭಾಧ್ಯಕ್ಷರು ಮಂಡಿಸಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಹಲವು ಶಾಸಕರ ನಿರ್ಣಯದಿಂದ ಗೊಂದಲ ಸೃಷ್ಟಿಯಾಗಿದೆ. ಅಧಿಕಾರದಲ್ಲಿ ಶಾಶ್ವತವಾಗಿ ಕೂರಬೇಕೆಂಬ ಆಕಾಂಕ್ಷೆ ನನಗಿಲ್ಲ. ಹೀಗಾಗಿ, ಸದನದಲ್ಲಿ ಸ್ವಯಂ ಪ್ರೇರಣೆಯಿಂದ ವಿಶ್ವಾಸಮತ ಯಾಚಿಸುವ ನಿರ್ಣಯ ಮಂಡಿಸಲು ನಿರ್ಧರಿಸಿದ್ದೇನೆ. ಸಭಾಧ್ಯಕ್ಷರು ಅವಕಾಶ ಕೊಟ್ಟ ದಿನ ವಿಶ್ವಾಸಮತ ಯಾಚಿಸುತ್ತೇನೆ’ ಎಂದು ಹೇಳುವ ಮೂಲಕ ‘ತಂತ್ರಗಾರಿಕೆಯ ದಾಳ’ವೊಂದನ್ನು ಹರಿಬಿಟ್ಟರು. 

ಲೆಕ್ಕಾಚಾರ ಏನು?: ರಾಜೀನಾಮೆ ಕೊಟ್ಟಿರುವ ಕಾಂಗ್ರೆಸ್‌–ಜೆಡಿಎಸ್‌ನ ಐದಾರು ಶಾಸಕರನ್ನು ವಾಪಸ್‌ ಕರೆತಂದು ಕುಸಿತದತ್ತ ಸಾಗಿರುವ 101 ಸದಸ್ಯರ ಬಲವನ್ನು ಬಿಜೆಪಿ ಹೊಂದಿರುವ 107ಕ್ಕೆ ಸರಿದೂಗಿಸುವುದು. ಬಿಜೆಪಿ ತೆಕ್ಕೆಯಲ್ಲಿರುವ ಇಬ್ಬರು ಪಕ್ಷೇತರರು ಆಗ ಮೈತ್ರಿ ಕಡೆ ಬರುವ ಸಾಧ್ಯತೆ ಇರುವುದರಿಂದ ಎದುರಾಳಿ ಪಕ್ಷದ ಬಲ 105ಕ್ಕೆ ಕುಸಿಯುವಂತೆ ಮಾಡುವುದು ಮೊದಲ ಲೆಕ್ಕಾಚಾರ.

ಇದರಲ್ಲಿ ಯಶ ಕಾಣದೇ ಇದ್ದರೆ, ವಿಶ್ವಾಸ ಮತ ಯಾಚನೆಯ ದಿನ ಬಿಜೆಪಿಯ ಆರೇಳು ಶಾಸಕರು ಗೈರು ಹಾಜರಾಗುವಂತೆ ನೋಡಿಕೊಳ್ಳುವುದು ಅಥವಾ ಪ್ರತಿ ಆಪರೇಷನ್ ಮಾಡುವುದು. ಆಗಲೂ ಕಮಲ ಪಾಳಯದ ಬಲ ಕುಗ್ಗಿ ಸರ್ಕಾರ ಉಳಿಸಿಕೊಳ್ಳುವುದು ಎರಡನೇ ತರ್ಕ.

ರಾಜೀನಾಮೆ ಕೊಟ್ಟಿರುವ ಶಾಸಕರು ಬಿಜೆಪಿಯವರು ಅಂದುಕೊಂಡಂತೆ ಇಲ್ಲ. ಅವರಲ್ಲಿ ಕೂಡ ಅಭಿಪ್ರಾಯ ಭೇದವಿದೆ. ಅವರೆಲ್ಲರೂ ನಮ್ಮ ಕಡೆ ಬರಲಿದ್ದಾರೆ. ಯಡಿಯೂರಪ್ಪ ಸರ್ಕಾರ ರಚಿಸಿದರೂ ಐದಾರು ತಿಂಗಳಷ್ಟೇ ಅದರ ಆಯಸ್ಸು. ಬಳಿಕ, ಚುನಾವಣೆ ಖಚಿತ ಎಂಬ ಲೆಕ್ಕಾಚಾರದಲ್ಲಿರುವ ಕೆಲ ಬಿಜೆಪಿ ಶಾಸಕರು ವಿಶ್ವಾಸ ಮತ ಯಾಚನೆಯ ದಿನ ನೆರವಾಗಲಿದ್ದಾರೆ ಎಂಬ ಭರವಸೆ ಕುಮಾರಸ್ವಾಮಿ ಅವರದ್ದಾಗಿದೆ ಎಂದು ಮೂಲಗಳು ಹೇಳಿವೆ.

‘ಸುಪ್ರೀಂ’ನತ್ತ ‘ಕಮಲ’ ಪಡೆ ಚಿತ್ತ

16 ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್‌ ಸೂಚಿಸುತ್ತದೆ, ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಭರವಸೆಯಲ್ಲಿದ್ದ ಬಿಜೆಪಿ ನಾಯಕರು, ಶುಕ್ರವಾರದ ವಿದ್ಯಮಾನದಿಂದ ಕಂಗಾಲಾದರು.

ಮಂಗಳವಾರದವರೆಗೆ ಕಾದುನೋಡುವ ಅನಿವಾರ್ಯಕ್ಕೆ ಬಿದ್ದಿರುವ ಕಮಲ ಪಕ್ಷದ ನಾಯಕರು, ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಕಟ್ಟಿ ಹಾಕುವ ನಿರ್ಣಯಕ್ಕೆ ಬಂದರು. ಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್‌ ಮತ್ತೆ ನಿರ್ದೇಶನ ನೀಡಬಹುದು ಎಂಬುದು ಪಕ್ಷದ ನಾಯಕರ ನಿರೀಕ್ಷೆ. 

‘ಮೊದಲು ವಿಶ್ವಾಸ ಮತ ಸಾಬೀತುಪಡಿಸಿ, ಬಳಿಕ ಕಲಾಪ ನಡೆಸಿ’ ಎಂದು ಸೋಮವಾರ ಮರು ಆರಂಭವಾಗಲಿರುವ ಕಲಾಪದಲ್ಲಿ ಪಟ್ಟು ಹಿಡಿದು ಅಹೋರಾತ್ರಿ ಹೋರಾಟ ನಡೆಸುವುದು ಸದ್ಯದ ಚಿಂತನೆ. ಅಲ್ಲಿಯವರೆಗೆ ತಮ್ಮ ಪಕ್ಷದ ಶಾಸಕರು ಹಾಗೂ ಮುಂಬೈನಲ್ಲಿರುವ ಶಾಸಕರನ್ನು ಪ್ರತಿ ಆಪರೇಷನ್‌ಗೆ ಒಳಗಾಗದಂತೆ ತಡೆಯುವುದು, ನೆರವಿಗೆ ಬರುವಂತೆ ವರಿಷ್ಠರಿಗೆ ಮನವಿ ಮಾಡುವುದು ಬಿಜೆಪಿ ನಾಯಕರ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

* ವಿಶ್ವಾಸ ಮತ ಸಾಬೀತು ಹೇಗೆ ಮಾಡುತ್ತೇವೆ ಎಂಬುದನ್ನು ಕಾದು ನೋಡಿ. ‘ಆಪರೇಷನ್‌, ಸರ್ಜರಿ’ಯಂತಹ ಹೀನ ರಾಜಕಾರಣ ಮಾಡುವುದಿಲ್ಲ

ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ

* ಶಾಸಕರ ರಾಜೀನಾಮೆ ಅಂಗೀಕಾರ ಕುರಿತಂತೆ ಸುಪ್ರೀಂಕೋರ್ಟ್‌ ಆದೇಶದಿಂದ ಮುಂಬೈಯಲ್ಲಿರುವ ಅತೃಪ್ತ ಶಾಸಕರು ಸಂತಸಗೊಂಡಿದ್ದಾರೆ

ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 22

  Happy
 • 3

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !