ಮಂಗಳವಾರ, ಅಕ್ಟೋಬರ್ 15, 2019
26 °C
ಯತ್ನಾಳ್‌ ಕಾರಿನಲ್ಲಿ ಪ್ರಯಾಣ

ಜೆಡಿಎಸ್‌ ಶಾಸಕರಿಂದ ಬಿಎಸ್‌ವೈ ಭೇಟಿ | ಮತ್ತೆ ಆಪರೇಷನ್‌ ಕಮಲ ಶಂಕೆ ?

Published:
Updated:

ಮೈಸೂರು: ವಿಜಯಪುರ ಜಿಲ್ಲೆಯ ಜೆಡಿಎಸ್‌ ಶಾಸಕರಾದ ಎಂ.ಸಿ.ಮನಗೂಳಿ, ದೇವಾನಂದ ಚವ್ಹಾಣ ಅವರು ಮೈಸೂರಿನ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಹಿಂದೆ ಹಲವು ಸಂದರ್ಭಗಳಲ್ಲಿಪಕ್ಷ ನಿಷ್ಠೆ ತೋರಿರುವ ಈ ಇಬ್ಬರೂ ಶಾಸಕರು, ಇದೀಗ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಂ.ಸಿ. ಮನಗೂಳಿ ತೋಟಗಾರಿಕೆ ಸಚಿವರಾಗಿದ್ದರೆ, ದೇವಾನಂದ ಚವ್ಹಾಣ ಅವರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿದ್ದರು.

ಕೇಂದ್ರ ನಾಯಕರ ವಿರುದ್ಧವೇ ಗುಡುಗಿದ, ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಈ ಇಬ್ಬರೂ ಶಾಸಕರು ಬೆಂಗಳೂರಿನಿಂದ ಒಂದೇ ಕಾರಿನಲ್ಲಿ ಮೈಸೂರಿಗೆ ಬಂದು,
ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ‘ಆಪರೇಷನ್ ಕಮಲ’ದಶಂಕೆ ಹುಟ್ಟುಹಾಕಿದೆ. ಆದರೆ,
ಜೆಡಿಎಸ್ ಶಾಸಕರಿಬ್ಬರೂ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಭೇಟಿ ಮಾಡಿದ್ದಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯುವ ದಸರಾ’ ಕಾರ್ಯಕ್ರಮದಲ್ಲಿ, ಪಿರಿಯಾಪಟ್ಟಣದ ಜೆಡಿಎಸ್‌ ಶಾಸಕ ಕೆ.ಮಹದೇವ್‌ ಅವರ ಮೇಲೆ ಯಡಿಯೂರಪ್ಪ ತೋರಿರುವ ಪ್ರೀತಿ ಸಹ ಆಪರೇಷನ್‌ ಕಮಲದ ವಾಸನೆಗೆ ಕಾರಣವಾಗಿದೆ.

ವೇದಿಕೆ ಏರುವಾಗ ಹಾಗೂ ಇಳಿಯುವಾಗ ಮಹದೇವ್‌ ಅವರ ಬೆನ್ನುತಟ್ಟಿ ಕೈ ಹಿಡಿದು ತೋರಿರುವ ಪ್ರೀತಿ
ಹಾಗೂ ಆತ್ಮೀಯವಾಗಿ ಮಾತನಾಡಿರುವುದು ಅನುಮಾನಕ್ಕೆ ದಾರಿ ಮಾಡಿದೆ.

‘ಮನಗೂಳಿ, ಚೌವ್ಹಾಣ್‌ ನಿಷ್ಠರು’

ಬೆಂಗಳೂರು ವರದಿ: ‘ಶಾಸಕರಾದ ಎಂ‌.ಸಿ ಮನಗೂಳಿ ಮತ್ತು ದೇವಾನಂದ ಚೌವ್ಹಾಣ ಅವರು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಬಹುಶಃ ಕ್ಷೇತ್ರದ ಅಭಿವೃದ್ದಿ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಬಹುದು. ಅವರಿಬ್ಬರೂ ಪಕ್ಷಕ್ಕೆ ನಿಷ್ಠೆಯಿಂದ ಇರುವವರು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಎಚ್. ಕೆ. ಕುಮಾರಸ್ವಾಮಿ ಹೇಳಿದರು.

* ಆಲಮೇಲದಲ್ಲಿ ತೋಟಗಾರಿಕೆ ಕಾಲೇಜಿನ ಸ್ಥಾಪನೆಯ ಅನುಮೋದನೆಗೆ, ಕ್ಷೇತ್ರದ ಅನುದಾನ ತಡೆಹಿಡಿದಿದ್ದಕ್ಕೆ ಭೇಟಿಯಾದೆ. ಬಿಜೆಪಿಗೆ ಅವರು ಆಹ್ವಾನಿಸಲಿಲ್ಲ

-ಎಂ.ಸಿ.ಮನಗೂಳಿ, ಸಿಂದಗಿ ಶಾಸಕ

* ಮೈಸೂರಿನಲ್ಲಿ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಯತ್ನಾಳರ ಜತೆ ಬಂದು ಐದು ನಿಮಿಷ ಭೇಟಿಯಾದೆವು. ತಡೆಹಿಡಿದ ಅನುದಾನ ಬಿಡುಗಡೆ ಭರವಸೆ ನೀಡಿದರು

-ದೇವಾನಂದ ಚವ್ಹಾಣ, ನಾಗಠಾಣ ಶಾಸಕ

Post Comments (+)