ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾಟದಲ್ಲಿ ಬಿಜೆಪಿ ನಾಯಕರು: ಖರ್ಗೆ

ಅತಿವೃಷ್ಟಿ, ಅನಾವೃಷ್ಟಿಗೂ ಸ್ಪಂದಿಸದ ಸರ್ಕಾರ
Last Updated 27 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕರು ಅಧಿಕಾರ ಹಂಚಿಕೊಳ್ಳಲು ಕಿತ್ತಾಟ ಮುಂದುವರಿಸಿದ್ದು, ಮಳೆ, ನೆರೆ, ಬರದಿಂದ ತತ್ತರಿಸಿರುವ ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡದೆ ಸತಾಯಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ನಾನು ಮೇಲೆ, ನೀನು ಕೆಳಗೆ ಎಂದು ಕಿತ್ತಾಡುತ್ತಿದ್ದಾರೆ. ಎರಡು ತಿಂಗಳಿಂದ ಜನರಿಗೆ ತೊಂದರೆಯಾಗಿದ್ದರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ಜನರ ಸಂಕಟ ಕೇಳಲು ಸರ್ಕಾರದಲ್ಲಿ ಯಾರೂ ಇಲ್ಲವಾಗಿದ್ದಾರೆ. ರೈತರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಹೈಕಮಾಂಡ್ ಕೇಳಿ ಕೆಲಸ ಮಾಡುತ್ತಾರೆ ಎಂದು ನಮ್ಮನ್ನು ಟೀಕಿಸುತ್ತಿದ್ದರು. ಆದರೆ ಈಗ ಯಡಿಯೂರಪ್ಪ ಅವರು ದೆಹಲಿ ನಾಯಕರ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ಸ್ವಂತ ನಿರ್ಧಾರ ಇಲ್ಲವಾಗಿದ್ದು, ಎಲ್ಲವೂ ಹೈಕಮಾಂಡ್‌ ನಿರ್ದೇಶನದಂತೆ ನಡೆಯುತ್ತಿದೆ ಎಂದು ಕುಟುಕಿದರು.

ಕುಸಿದ ಆಡಳಿತ– ಭಿನ್ನಮತ ಉಲ್ಬಣ: ‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಬಿಜೆಪಿಯಲ್ಲಿ ಭಿನ್ನಮತ ಉಲ್ಬಣಿಸಿದೆ. ಜನರ ನೋವಿಗೆ ಸ್ಪಂದನೆ ಸಿಗದಾಗಿದ್ದು, ಸರ್ಕಾರ ವಿಫಲವಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ಜನರ ನೆರವಿಗೆ ಬರಲು ಸರ್ಕಾರದ ಮಟ್ಟದಲ್ಲಿ ಯಾರೂ ಇಲ್ಲವಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡರು.

‘ಸರ್ಕಾರದ ಎಂಜಿನ್ ಇನ್ನೂ ಚಾಲನೆಗೊಂಡಿಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲವಾಗಿದ್ದು, ಅಧಿಕಾರಕ್ಕಾಗಿ ಸರ್ಕಾರ ಬೇಕು ಎಂಬ ಭಾವನೆ ಮೂಡಿದೆ. ಬಿಜೆಪಿ ಸರ್ಕಾರದ ನಾಟಕ, ಮೋಸ, ವಂಚನೆ, ಭ್ರಷ್ಟಾಚಾರ ಬಯಲಿಗೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಕಚಕ್ರಾಧಿಪತಿಯಂತೆ ಆಡಳಿತ ನಡೆಸುತ್ತಿದ್ದು, ಮಂತ್ರಿ ಮಂಡಳ ರಚನೆಯಾಗಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿ, ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪ್ರತಿಭಟನೆ: ಕೇಂದ್ರದ ನೆರವಿಗೆ ಆಗ್ರಹಿಸಿ ಆ.29ರಂದು ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು. ತಕ್ಷಣ ಪರಿಹಾರ ಬಿಡುಗಡೆ ಮಾಡದಿದ್ದರೆ ದೆಹಲಿಯಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ದೂರು ಇದ್ದವರೂ ಸಚಿವರು: ಯೋಗ– ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಈಗ ಮುಖ್ಯಮಂತ್ರಿ ಸೇರಿದಂತೆ ಕ್ರಿಮಿನಲ್ ಪ್ರಕರಣ ಇರುವ 10 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಮಂತ್ರಿಯಾಗಲು ಇದೇ ಯೋಗ್ಯತೆ ಇರಬಹುದು ಎಂದು ಮುಖಂಡ ವಿ.ಎಸ್.ಉಗ್ರಪ್ಪ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT