ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಿಜೆಪಿಯಲ್ಲಿ ಕಾಣದ ಉತ್ಸಾಹ; ಮೈತ್ರಿ ನಾಯಕರಿಂದ ಒಗ್ಗಟ್ಟಿನ ಮಂತ್ರ ಜಪ

Last Updated 22 ಅಕ್ಟೋಬರ್ 2018, 17:48 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಿತ್ರ ಪಕ್ಷಗಳ ಘಟಾನುಘಟಿಗಳು ತಮ್ಮ ಹುರಿಯಾಳುಗಳ ಗೆಲುವಿಗೆ ಕಣಕ್ಕಿಳಿದಿದ್ದರೆ, ಬಿಜೆಪಿಯಲ್ಲಿ ಉತ್ಸಾಹವೇ ಕಾಣಿಸುತ್ತಿಲ್ಲ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಿವಮೊಗ್ಗದಲ್ಲಿ ಪುತ್ರನನ್ನು ಗೆಲ್ಲಿಸಿಕೊಳ್ಳಲು ಸೀಮಿತವಾಗಿದ್ದರೆ, ಬಳ್ಳಾರಿಯಲ್ಲಿ ಶಾಂತಾ ಅವರನ್ನು ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಪಟ್ಟಾಗಿ ಕುಳಿತುಕೊಂಡಿದ್ದಾರೆ. ಮಂಡ್ಯ, ರಾಮನಗರ ಉಸ್ತುವಾರಿಗಳಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಆರ್. ಅಶೋಕ್ ಅವರು ಆ ಕಡೆಗೆ ತಲೆ ಹಾಕಿಲ್ಲ. ಇದು ಪಕ್ಷದ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.

ವಿಧಾನಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿ, ಅಧಿಕಾರ ಹಿಡಿಯಲು ಸಾಧ್ಯವಾಗದೇ ಇದ್ದರೂ ಕಾಂಗ್ರೆಸ್‌–ಜೆಡಿಎಸ್‌ ಪಕ್ಷಗಳನ್ನು ಮಣಿಸುವ ಕೆಚ್ಚು ಪ್ರದರ್ಶಿಸಬೇಕಿತ್ತು. 2019 ರ ಲೋಕಸಭಾ ಚುನಾವಣೆಗೆ ಈ ಉಪಚುನಾವಣೆ ಸೆಮಿಫೈನಲ್‌ ಎಂದು ಪರಿಗಣಿಲಾಗಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಆದ್ಯತೆ ನೀಡುವ ವಿಷಯದಲ್ಲಿ ನಾಯಕರು ಒಗ್ಗಟ್ಟಿನಿಂದ ಕಣಕ್ಕೆ ಧುಮುಕಬೇಕಿತ್ತು ಎಂಬ ಅಭಿಪ್ರಾಯಗಳು ಪಕ್ಷದ ವಲಯದಲ್ಲಿವೆ.

ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗ ಬಿಟ್ಟು ಹೊರಬರುತ್ತಿಲ್ಲ. ಜಗದೀಶ ಶೆಟ್ಟರ್‌ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಈ ತಿಂಗಳ 26 ರ ಬಳಿಕವೇ ಹಿಂತಿರುಗಲಿದ್ದಾರೆ. ಹೀಗಾಗಿ ಬಹುತೇಕ ಮುಂಚೂಣಿ ನಾಯಕರು ಐದು ಕ್ಷೇತ್ರಗಳಲ್ಲಿನ ಪ್ರಚಾರಕ್ಕೆ ಲಭ್ಯವಿಲ್ಲದಂತಾಗಿದೆ.

‘ಒಂದು ದಶಕ ಪರಸ್ಪರ ವಿರೋಧಿಗಳಾಗಿದ್ದ ಎಚ್‌.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರೇ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವಾಗ, ನಮ್ಮ ನಾಯಕರು ಇನ್ನಷ್ಟು ಜಿದ್ದಾಜಿದ್ದಿನಿಂದ ಕಣಕ್ಕೆ ಇಳಿಯಬೇಕಿತ್ತು. ರಾಜ್ಯದಲ್ಲಿ ಈ ಹಿಂದೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಹಿನ್ನಡೆ ಅನುಭವಿಸಬೇಕಾಯಿತು’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಲ್ಲಿ ಪರಸ್ಪರ ಅವಿಶ್ವಾಸದ ಕೊರತೆ ಇರುವುದರಿಂದಲೇ ಅವರು ಒಗ್ಗಟ್ಟಿನ ನಾಟಕ ಮಾಡುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಇಂತಹ ಐಕ್ಯತೆ ಕಂಡು ಬರುತ್ತಿಲ್ಲ. ನಮ್ಮ ಪಕ್ಷದ ನಾಯಕರು ಕೊನೆಯ 10 ದಿನಗಳಲ್ಲಿ ಅಬ್ಬರದ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಎಲ್ಲಾ ಕ್ಷೇತ್ರಗಳಿಗೂ ಪ್ರಚಾರಕ್ಕೆ ತೆರಳಲಿದ್ದಾರೆ. ಮಂಗಳವಾರ ಮಂಡ್ಯಕ್ಕೆ ಹೋಗುತ್ತಿದ್ದಾರೆ. ಎಲ್ಲ ಕ್ಷೇತ್ರಗಳಿಗೂ ಸಮಾನ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುವರು ಎಂದುಮೂಲಗಳು ಹೇಳಿವೆ.

**

ಮೂರು ಕ್ಷೇತ್ರಗಳಲ್ಲಿ ಗೆಲುವಿನ ಗುರಿ
‘ಬಳ್ಳಾರಿ, ಶಿವಮೊಗ್ಗವಲ್ಲದೆ ಜಮಖಂಡಿ ಕ್ಷೇತ್ರದಲ್ಲಿ ಜೆಡಿಎಸ್‌– ಕಾಂಗ್ರೆಸ್‌ಗೆ ಕಷ್ಟ ಆಗಿರುವುದರಿಂದಲೇ ಜಂಟಿ ಪ್ರಚಾರಕ್ಕೆ ಹೊರಟಿದ್ದಾರೆ. ನಮ್ಮ ಚುನಾವಣಾ ಕಾರ್ಯತಂತ್ರವೇ ವಿಭಿನ್ನವಾಗಿದೆ. ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಮತ್ತು ಇತರ ನಾಯಕರು ಎಲ್ಲ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುತ್ತಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT