ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಎಬ್ಬಿಸಿದ ಸಚಿವರ ಬಡ್ತಿ

ಕಾರಜೋಳ, ಡಾ.ಅಶ್ವತ್ಥನಾರಾಯಣ ಮತ್ತು ಸವದಿಗೆ ಒಲಿದ ಅದೃಷ್ಟ
Last Updated 26 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗೆ ಬಡ್ತಿ ನೀಡಿರುವ ವರಿಷ್ಠರ ನಡೆ ಬಿಜೆಪಿಯಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಕಾರಜೋಳ ಮತ್ತು ಅಶ್ವತ್ಥನಾರಾಯಣ ಅವರ ಬಡ್ತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯದೇ ಇದ್ದರೂ ಶಾಸಕರೇ ಅಲ್ಲದಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ, ಹಿರಿತನ ಮತ್ತು ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ರಾಜ್ಯ ಬಿಜೆಪಿ ಹಿರಿಯ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಸವದಿಯ ಆಯ್ಕೆಯ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಉದ್ದೇಶ ಬಿಜೆಪಿ ವರಿಷ್ಠರದು. ಮುಖ್ಯವಾಗಿ ಬೆಳಗಾವಿ ಜಿಲ್ಲೆಯಲ್ಲಿ ಹಲವು ಕುಟುಂಬಗಳ ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕುವುದು ಮತ್ತು ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಬೆಳೆಸುವುದು ಆಯ್ಕೆಯ ಉದ್ದೇಶ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ.

ಲಕ್ಷಣ ಸವದಿ ಅವರು ಗಾಣಿಗ ಲಿಂಗಾಯತ ಸಮುದಾಯದವರು. ಯಡಿಯೂರಪ್ಪ ಅವರೂ ಇದೇ ಸಮುದಾಯಕ್ಕೆ ಸೇರಿದವರು.

’ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಯಡಿಯೂರಪ್ಪ ಮತ್ತು ಅವರ ಕುಟುಂಬದ ಬಳಿ ಅಧಿಕಾರ ಕೇಂದ್ರೀಕೃತ ಆಗುವುದು ತಪ್ಪುತ್ತದೆ. ವರ್ಗಾವಣೆ ಮತ್ತು ಗುತ್ತಿಗೆ ವಿಚಾರದಲ್ಲಿ ಯಡಿಯೂರಪ್ಪ ಅವರ ಪುತ್ರರು ಈಗಾಗಲೇ ಮೂಗು ತೂರಿಸುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂಬ ವಿಚಾರ ವರಿಷ್ಠರ ಮನಸ್ಸಿನಲ್ಲಿದೆ’ ಎಂದು ಬಿಜೆಪಿ ಮುಖಂಡ
ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾದಿಗ ಸಮುದಾಯಕ್ಕೆ ಮಣೆ: ಬಿಜೆಪಿ ಜತೆ ಗಟ್ಟಿಯಾಗಿ ನಿಂತಿರುವ ಮಾದಿಗ ಸಮುದಾಯಕ್ಕೆ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲು ತೀರ್ಮಾನಿಸಿದೆ. ಅಲ್ಲದೇ ಹಿರಿತನದ ಪಟ್ಟಿಯಲ್ಲಿ ಮುಖ್ಯಮಂತ್ರಿ ನಂತರದ ಸ್ಥಾನ ನೀಡಲಾಗಿದೆ. ಈ ಸಮುದಾಯದ ಮತವನ್ನು ಹಿಡಿದಿಡುವ ಉದ್ದೇಶವೂ ಬಿಜೆಪಿ ವರಿಷ್ಠರದು.

ಬೆಂಗಳೂರಿನಲ್ಲಿ ಆರ್‌.ಅಶೋಕ್ ಅವರಿಗೆ ಪರ್ಯಾಯವಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಾ.ಅಶ್ವತ್ಥನಾರಾಯಣ ಅವರನ್ನು ಬೆಳೆಸುವುದು ವರಿಷ್ಠರ ಲೆಕ್ಕಾಚಾರ.ಬಿಜೆಪಿಯ ಒಕ್ಕಲಿಗ ನಾಯಕ ಆರ್‌.ಅಶೋಕ್‌ ಇಷ್ಟು ವರ್ಷ ತಮಗೆ ನೀಡಿದ್ದ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಮತ್ತು ಸಮುದಾಯವನ್ನು ಸಂಘಟಿಸಿ ಪಕ್ಷಕ್ಕೆ ಲಾಭವಾಗಿಸುವ ಕೆಲಸವನ್ನು ಅವರು ಮಾಡಿಲ್ಲ ಎಂಬ ಆರೋಪವೂ ಇದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಪತ್ರಿಕಾಗೋಷ್ಠಿಯನ್ನು ಸೋಮವಾರ ಅಶ್ವತ್ಥನಾರಾಯಣ ಅವರೇ ಕರೆದಿದ್ದರು. ಇದು ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಯ ಸಂಕೇತ ಎಂದು ವ್ಯಾಖ್ಯಾನಿಸಲಾಗಿದೆ.

ಹಿರಿತನ ಹೀಗಿದೆ: ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕಾರಜೋಳ, ಅಶ್ವತ್ಥನಾರಾಯಣ ಮತ್ತು ಸವದಿ ಕ್ರಮವಾಗಿ 2, 3 ಮತ್ತು 4ನೇ ಹಿರಿತನದ ಸ್ಥಾನ ಪಡೆದಿದ್ದಾರೆ. ಈ ಮೂಲಕ ವರಿಷ್ಠರು ಎರಡನೇ ತಲೆಮಾರಿನ ನಾಯಕರನ್ನು ಮುಂಚೂಣಿಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದೂ ಬಿಜೆಪಿ ಮೂಲಗಳು ತಿಳಿಸಿವೆ.

ಸಚಿವ ಸಂಪುಟದ ಹಿರಿತನದ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ 6, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ ಮತ್ತು ಆರ್‌.ಅಶೋಕ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದರ ಅರ್ಥ ಈಶ್ವರಪ್ಪ, ಅಶೋಕ್‌ ಮತ್ತು ಶೆಟ್ಟರ್‌ ಅವರಿಗೆ ಹಿಂಬಡ್ತಿ ಆಗಿದೆ. ‘ಕನಿಷ್ಠ ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಿ ಗೌರವ ಕಾಪಾಡಿ’ ಎಂಬ ಇವರ ಮೊರೆಗೆ ವರಿಷ್ಠರು ಸೊಪ್ಪು ಹಾಕಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT