ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಸರ್ಕಾರ, ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಆಕ್ರೋಶ

Last Updated 13 ಮಾರ್ಚ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯಲ್ಲಿ ಬಣ ರಾಜಕಾರಣ ಗರಿಗಟ್ಟುತ್ತಿದ್ದು, ಗುರುವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಶಾಸಕರು ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದೆಯೇ ಹೊರ ಹಾಕಿದರು.

ಬಜೆಟ್‌ ಅಧಿವೇಶನ ಆರಂಭದಲ್ಲಿ ಕರೆಯಬೇಕಿದ್ದ ಈ ಸಭೆಯನ್ನು ಗುರುವಾರ ಕರೆಯಲಾಗಿತ್ತು. ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಸ್ಥಾನ ಸಿಗದೇ ಹತಾಶರಾಗಿದ್ದ ಶಾಸಕರು ಮತ್ತು ತಮ್ಮ ಮಾತಿಗೆ ಕಿಮ್ಮತ್ತು ಸಿಗದೇ ಸಿಟ್ಟಿಗೆದ್ದಿರುವ ಶಾಸಕರು ಆಕ್ರೋಶ ಹೊರಹಾಕಿದರು ಎಂದು ಮೂಲಗಳು ಹೇಳಿವೆ.

ಕೆಲವು ಸಚಿವರ ಕಾರ್ಯವೈಖರಿ, ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರ ಹಸ್ತಕ್ಷೇಪ ಸಭೆಯಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಕುರಿತು ಹರಿದಾಡುತ್ತಿರುವ ಅನಾಮಧೇಯ ಪತ್ರಗಳ ಬಗ್ಗೆ ಪ್ರಸ್ತಾಪಿಸಿ, ‘ಈ ಪತ್ರಗಳನ್ನೆಲ್ಲ ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಯಾರು ಬಿಡುತ್ತಿದ್ದಾರೆ ಎಂಬುದು ಗೊತ್ತಿದೆ. ಚೆನ್ನಾಗಿ ಸಾಗುತ್ತಿರುವ ಹಡಗನ್ನು ತೂತು ಮಾಡುತ್ತಿರುವ ಕೃತ್ಯಕ್ಕೆ ಸಮವಾಗಿದೆ. ಇದರಿಂದ ಅಂತಿಮವಾಗಿ ಹಡಗೇ ಮುಳುಗಿ ಹೋಗುತ್ತದೆ ಎಂಬುದು ನೆನಪಿರಲಿ’ ಎಂದು ಹೇಳಿದರು ಎನ್ನಲಾಗಿದೆ.

‘ಈ ಪತ್ರಗಳ ಬಗ್ಗೆ ತನಿಖೆ ಆಗಬೇಕು. ಬೇರೆ ಪಕ್ಷದವರು ಸೃಷ್ಟಿ ಮಾಡುತ್ತಿದ್ದಾರೆ ಎಂಬುದರಲ್ಲಿ ಹುರುಳಿಲ್ಲ. ಮುಖ್ಯಮಂತ್ರಿಯವರು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಪಕ್ಷದಲ್ಲಿ ಮತ್ತು ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸುವುದು ಬೇಡ’ ಎಂದು ರೇಣುಕಾಚಾರ್ಯ ಪ್ರತಿಪಾದಿಸಿದರು.

ಆಗ ತಕರಾರು ಎತ್ತಿದ ಕೆಲವು ಶಾಸಕರು, ‘ಪತ್ರ ಯಾರು ಬರೆದಿದ್ದಾರೆ ಎಂಬುದಕ್ಕಿಂತ ಪತ್ರದಲ್ಲಿ ಪ್ರಸ್ತಾಪಿಸಿರುವ ಸಂಗತಿಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಆಗುವುದೇ ಕಷ್ಟ. ನಮ್ಮ ಕೆಲಸಗಳು ಆಗುತ್ತಿಲ್ಲ. ಯಾರ ಬಳಿ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ. ಕೆಲವು ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ’ ಎಂದೂ ಅವರು ದೂರಿದರು.

‘ನೀವು ಕೆಲಸ ಮಾಡಿ ಕೊಡುತ್ತೀರೋ ಬಿಡುತ್ತಿರೋ ಅದು ಬೇರೆ ಪ್ರಶ್ನೆ. ಎಲ್ಲ ಶಾಸಕರಿಗೂ ಭೇಟಿಗೆ ಅವಕಾಶ ನೀಡಿ. ನಮ್ಮನ್ನು ಭೇಟಿಯಾದಾಗ ಕನಿಷ್ಠ ನಕ್ಕು ಮಾತನಾಡಿಸಿ. ಅಷ್ಟಾದರೂ ಮಾಡಿ’ ಎಂದು ಕೆಲ ಶಾಸಕರು ಕಾಲೆಳೆದರು.

‘ಕೆಲವು ಸಚಿವರು ಇಲಾಖೆ ಕೆಲಸಗಳನ್ನೇ ಮಾಡುತ್ತಿಲ್ಲ. ಯಾವುದೇ ಜಿಲ್ಲೆಗಳಿಗೂ ಭೇಟಿ ನೀಡುತ್ತಿಲ್ಲ. ಇಂತಹ ಸಚಿವರನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ’ಎಂದು ಶಾಸಕರೊಬ್ಬರು ಹೇಳಿದರು.

ಒಂದು ಹಂತದಲ್ಲಿ ಕೊಂಚ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ ಅವರು, ಶಾಸಕರಿಗೆ ಮಾಡಿಕೊಟ್ಟಿರುವ ಕೆಲಸಗಳ ಪಟ್ಟಿ ಇದೆ. ಅದನ್ನು ನೀಡಲು ಸಿದ್ಧವಿರುವುದಾಗಿ ಹೇಳಿದರು. ಬಳಿಕ ಸಮಾಧಾನಗೊಂಡ ಅವರು, ‘ಇನ್ನು ಮುಂದೆ ನಿಯಮಿತವಾಗಿ ಶಾಸಕರನ್ನು ಭೇಟಿ ಮಾಡಿ ಅವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು’ ಎಂದು ಮೂಲಗಳು ಹೇಳಿವೆ.

ಸಭೆಯ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಶಾಸಕರೊಬ್ಬರು, ‘ಇಲ್ಲಿಯವರೆಗೆ ನಾಯಕರು ಮಾತನಾಡುತ್ತಿದ್ದರು. ನಾವು ಕುಳಿತು ಕೇಳಬೇಕಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಶಾಸಕರು ಮಾತನಾಡಿದರು. ಅವರು ಕೇಳಬೇಕಾಯಿತು. ಇದರಲ್ಲಿ ಆಕ್ರೋಶವಾಗಲಿ, ಬಂಡಾಯವಾಗಲಿ ಅಲ್ಲ. ಶಾಸಕರು ತಮ್ಮ ಮನಸ್ಸಿನಲ್ಲಿ ಇದ್ದ ಸಂಕಟ ಹೇಳಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT