ಸೋಮವಾರ, ಮಾರ್ಚ್ 27, 2023
24 °C
ಎರಡು ದಿನ ತಾಳ್ಮೆ ವಹಿಸೋಣ; ಕತ್ತಲಿನಿಂದ ಬೆಳಕಿಗೆ ಬರುವ ಕಾಲ ಬಂದಿದೆ

ನಮ್ಮ ‘ವನವಾಸ’ ಮುಕ್ತಾಯ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಷ್ಟು ದಿನ ವನವಾಸದಲ್ಲಿದ್ದೆವು. ಇನ್ನೆರಡು ದಿನ ಕಾಯೋಣ, ನಮಗೆಲ್ಲರಿಗೂ ಸಿಹಿ ಸುದ್ದಿ ಸಿಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಹರ್ಷ ಚಿತ್ತರಾಗಿ ಕಂಡುಬಂದ ಯಡಿಯೂರಪ್ಪ ಅವರು, ‘ಈಗ ನಾವೆಲ್ಲ ಕತ್ತಲಿನಿಂದ ಬೆಳಕಿಗೆ ಬರುವ ಕಾಲ ಬಂದಿದೆ. ನಾಳೆ ಸ್ಪೀಕರ್‌ ಬರಲೇಬೇಕು, ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಅವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ನೈತಿಕತೆ ಪಾಠ ಮಾಡುವ ದೇವೇಗೌಡರು ತಮ್ಮ ಪುತ್ರನಿಗೆ ರಾಜೀನಾಮೆ ಕೊಟ್ಟು ಹೋಗಲು ಸಲಹೆ ನೀಡಬೇಕಿತ್ತು’ ಎಂದೂ ಹೇಳಿದರು.

‘ನಮಗೆ ಪಕ್ಷೇತರರು ಬೆಂಬಲ ನೀಡಿರುವುದರಿಂದ ಬಿಜೆಪಿ ಸಂಖ್ಯಾಬಲ 107ಕ್ಕೆ ಏರಿಕೆಯಾಗಿದೆ. ಆದ್ದರಿಂದ ಕುಮಾರಸ್ವಾಮಿಯವರು
ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು’ ಎಂದು ಅವರು ಸಭೆಯಲ್ಲಿ ಹೇಳಿದರೆಂದು ಮೂಲಗಳು ತಿಳಿಸಿವೆ.

ಎರಡು–ಮೂರು ದಿನ ಕಾಯುತ್ತೇವೆ: ‘ಇನ್ನು ಎರಡು– ಮೂರು ದಿನಗಳು ಕಾದು ನೋಡುತ್ತೇವೆ. ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಯಾವುದೇ ಶಾಸಕರಿಗೂ ಆಮಿಷ ಒಡ್ಡಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ನಾಳೆ (ಮಂಗಳವಾರ) ಮತ್ತೆ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಿದ್ದೇವೆ ಎಂದರು.

‘ಮನಬಂದಂತೆ ಮಾತನಾಡ ಬೇಡಿ’

ಪಕ್ಷದ ಯಾವುದೇ ನಾಯಕರು ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ಸಭೆಯಲ್ಲಿ ವರಿಷ್ಠರು ತಾಕೀತು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಪಕ್ಷ ನಿಗದಿ ಮಾಡಿರುವವರನ್ನು ಹೊರತುಪಡಿಸಿ ಬೇರೆ ಯಾರೂ ಮನಬಂದಂತೆ ಹೇಳಿಕೆಗಳನ್ನು ನೀಡಬಾರದು. ‘ಆಪರೇಷನ್‌ ಕಮಲ’ದ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವ್ಯಾಪಕ ಪ್ರಚಾರ ಮಾಡುತ್ತಿರುವುದರಿಂದ, ಈಗಿನ ಬೆಳವಣಿಗೆ ‘ಆಪರೇಷನ್‌ ಕಮಲ’ ಅಲ್ಲ. ಎರಡೂ ಪಕ್ಷಗಳ ಆಂತರಿಕ ಸಮಸ್ಯೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದೂ ಸಭೆಯಲ್ಲಿ ವರಿಷ್ಠರು ಹೇಳಿದರು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು