ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಆಸೆ ಈಡೇರಿಸುತ್ತಿರುವ ರಾಹುಲ್: ಬಿ.ಎಸ್.ಯಡಿಯೂರಪ್ಪ ಟಾಂಗ್

ಕಾಂಗ್ರೆಸ್ ಅಧ್ಯಕ್ಷರಿಗೆ ಟಾಂಗ್ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ
Last Updated 4 ಏಪ್ರಿಲ್ 2019, 13:42 IST
ಅಕ್ಷರ ಗಾತ್ರ

ಹಾವೇರಿ: ‘ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು’ ಎಂಬ ಮಹಾತ್ಮ ಗಾಂಧಿ ಆಸೆಯನ್ನು ರಾಹುಲ್ ಗಾಂಧಿ ಈಡೇರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದರು.

ಅವರು, 380 ಸ್ಥಾನ ಗೆದ್ದಿದ್ದ ಪಕ್ಷವನ್ನು ಈಗಾಗಲೇ 40ಕ್ಕೆ ತಂದಿದ್ದಾರೆ. ಶೀಘ್ರವೇ ‘ಕಾಂಗ್ರೆಸ್‌ ಮುಕ್ತ’ ಮಾಡುತ್ತಾರೆ ಎಂದು ಗುರುವಾರ ಇಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ಸಭೆಯಲ್ಲಿ ಹೇಳಿದರು.

ಕಾಂಗ್ರೆಸ್‌ ಪ್ರಣಾಳಿಕೆಯು ತಿರುಕನ ಕನಸಿನಂತಿದೆ. ಚುನಾವಣೆಯಲ್ಲಿ ಖರ್ಗೆ, ಮುನಿಯಪ್ಪ ಹಾಗೂ ದೇವೇಗೌಡರು ತಮ್ಮ ಮೊಮ್ಮಕ್ಕಳ ಜೊತೆಗೆ ಮನೆಗೆ ಹೋಗುತ್ತಾರೆ. ಫಲಿತಾಂಶದ ಬಳಿಕ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬರಲಿದೆ ಎಂದರು.

ಆದಾಯ ತೆರಿಗೆ ದಾಳಿ ನಡೆದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಬೊಬ್ಬೆ ಹೊಡೆದರು. ಆದರೆ, ಕಾಮಗಾರಿಗೂ ಮೊದಲೇ ₹ 1,400 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದು, ಬೆಳಕಿಗೆ ಬಂದಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಈ ಬಾರಿಯೂ ಸೋಲು ಖಚಿತವಾದ ಕಾರಣ ಕಾಂಗ್ರೆಸ್, ತಿಂಗಳಿಗೆ ₹6 ಸಾವಿರ ಮಾತ್ರವಲ್ಲ, ಶೀಘ್ರವೇ ‘ಬಂಗಾರದ ರಸ್ತೆ –ಬೆಳ್ಳಿಯ ಗಟಾರ ನಿರ್ಮಾಣದ ಯೋಜನೆ’ಯನ್ನೂ ಘೋಷಿಸಲಿದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್:ತುರ್ತು ಪರಿಸ್ಥಿತಿ ಮರೆತಿದೆಯಾ?
ಹಾವೇರಿ:
‘ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆ ತಂದ ಪಕ್ಷ ಕಾಂಗ್ರೆಸ್. ನೀವೇ ಪ್ರತಿಭಟನೆ ನಡೆಸಿದ 1971ರ ತುರ್ತು ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಶಹಭಾನು ಪ್ರಕರಣದಲ್ಲಿ ಕಾಂಗ್ರೆಸ್‌ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ಈಗ‘ದೇಶದ್ರೋಹಿ‘ ಕಾಯಿದೆ ತಿದ್ದುಪಡಿಗೆ ಮುಂದಾಗಿ ನೈತಿಕ ಅಧಃಪತನಕ್ಕೆ ಬಿದ್ದಿದೆ. ಕಾಂಗ್ರೆಸ್ ಸೇರಿದ ಬಳಿಕ ನೀವೂ (ಸಿದ್ದರಾಮಯ್ಯ) ಹಸಿ ಸುಳ್ಳು ಹೇಳಲು ಶುರು ಮಾಡಿದ್ದೀರಾ...? ಎಂದು ವ್ಯಂಗ್ಯವಾಡಿದರು.

ತುಮಕೂರು, ಮಂಡ್ಯದಲ್ಲಿ ನಿಮ್ಮ ಆಟ ಗೊತ್ತಾಗುತ್ತೆ. ಇದರಿಂದ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT