ಬಿಜೆಪಿ ಶಾಸಕರ ಮೋಜಿಗೆ ‘ಬರ’ವಿಲ್ಲ!

7
ಕಮಲ ಪಕ್ಷದ 72 ಶಾಸಕರು ಪ್ರತಿನಿಧಿಸುವ 84 ತಾಲ್ಲೂಕು ಬರಪೀಡಿತ

ಬಿಜೆಪಿ ಶಾಸಕರ ಮೋಜಿಗೆ ‘ಬರ’ವಿಲ್ಲ!

Published:
Updated:

ಬೆಂಗಳೂರು: ‘ಇದು ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರ. ಬರಪೀಡಿತ ಪ್ರದೇಶಗಳ ಬವಣೆಗೆ ಸ್ಪಂದಿಸದ ಈ ಸರ್ಕಾರ ಜನರ ಪಾಲಿಗೆ ಸತ್ತೇ ಹೋಗಿದೆ’.... ಎಂದೆಲ್ಲ ಮೈತ್ರಿ ಸರ್ಕಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದ ವಿರೋಧ ಪಕ್ಷ ಬಿಜೆಪಿಯ ನಾಯಕರು ಜನರ ಸಂಕಷ್ಟಗಳನ್ನು ಮರೆತು ಮೋಜು ಮಸ್ತಿಯಲ್ಲಿ ನಿರತರಾಗಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

'ಆಪರೇಷನ್‌ ಕಮಲ'ಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಆತಂಕದಿಂದ ಕಮಲ ಪಾಳಯದ ನಾಯಕರು ರೆಸಾರ್ಟ್‌ ಯಾತ್ರೆಯ ಮೊರೆ ಹೋಗಿದ್ದಾರೆ. ಪಕ್ಷದ 104 ಶಾಸಕರ ಪೈಕಿ 95 ಶಾಸಕರು ಕ್ಷೇತ್ರ ಬಿಟ್ಟು ಒಂದು ವಾರ ಮೇಲಾಯಿತು. ಇವರಲ್ಲಿ ಬರಪೀಡಿತ ಪ್ರದೇಶಗಳ 72 ಶಾಸಕರು ಸಹ ಸೇರಿದ್ದಾರೆ. ಕೆಲವು ಶಾಸಕರು ಎರಡು ತಾಲ್ಲೂಕುಗಳನ್ನು ಪ್ರತಿನಿಧಿಸುತ್ತಿದ್ದು, ಬಿಜೆಪಿ ಪ್ರತಿನಿಧಿಸುವ 84 ತಾಲ್ಲೂಕುಗಳಲ್ಲಿ ಬರಗಾಲ ಕವಿದಿದೆ.

ಶಾಸಕರ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹಲವು ತಾಲ್ಲೂಕುಗಳಲ್ಲಿ ನೀರಿನ ತತ್ವಾರ ಇದೆ. ಆದರೆ, ಶಾಸಕರು ಬಾಟಲ್‌ ನೀರಿಗೆ ನೂರಿನ್ನೂರು ರೂಪಾಯಿ ನೀಡುತ್ತಿದ್ದಾರೆ. ಇವರ ನಿಜ ಬಣ್ಣ ಬಯಲಾಗಿದೆ’ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಮುಂಗಾರಿನಲ್ಲಿ 100 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿತ್ತು. ಹಿಂಗಾರಿನಲ್ಲಿ ಮಳೆ ಶೇ 49ರಷ್ಟು ಕೈಕೊಟ್ಟಿದ್ದರಿಂದ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 156ಕ್ಕೆ ಏರಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರಕರ್ನಾಟಕ ಭಾಗದ ಜನರ ಸ್ಥಿತಿ ದಯನೀಯವಾಗಿದೆ. ಮಣ್ಣಿನಲ್ಲೂ, ವಾತಾವರಣದಲ್ಲೂ ತೇವಾಂಶ ಮಾಯವಾಗಿದೆ. ಬಿತ್ತಿದ್ದ ಬೆಳೆಗಳು ಬಾಡಿವೆ. ಕೆರೆಗಳ ಒಡಲು ಬತ್ತಿ ಬರಿದಾಗಿವೆ. ಜನರು ಉದ್ಯೋಗ ಅರಸಿ ಗುಳೆ ಹೋಗಲಾರಂಭಿಸಿದ್ದಾರೆ.

ಇಂತಹ ವೇಳೆಯಲ್ಲಿ ಜನಪ್ರತಿನಿಧಿಗಳು ಕ್ಷೇತ್ರದಲ್ಲೇ ಇದ್ದು ಸಮರೋಪಾದಿಯಲ್ಲಿ ಬರ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಬೇಕಿತ್ತು. ರಾಜ್ಯ ಸರ್ಕಾರದ ಸಚಿವ ಸಂಪುಟ ಉಪಸಮಿತಿಗಳು ಬರ ಅಧ್ಯಯನದಲ್ಲಿ ನಿರತವಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಕ್ಷೇತ್ರದಲ್ಲಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿತ್ತು. ಆದರೆ, ಈ ತಂಡಗಳು ಬರುವ ವೇಳೆ ಬಿಜೆಪಿ ಶಾಸಕರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿದ್ದರು. ಬಳಿಕ ಗುರು ಗ್ರಾಮಕ್ಕೆ ಹೋದರು. ಅವರು ಇನ್ನೆರಡು ದಿನ ಅಲ್ಲೇ ಉಳಿಯುವ ಸಾಧ್ಯತೆ ಇದೆ.

‘ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ಒಂದು ಸಲ ಜಿಲ್ಲೆಗೆ ಭೇಟಿ ನೀಡಿ ಜನರ ಬವಣೆ ಆಲಿಸಿಲ್ಲ. ಕೆಡಿಪಿ ಸಭೆಗಳನ್ನು ನಡೆಸಿಲ್ಲ. ಇದೊಂದು ದಿಕ್ಕು ದೆಸೆ ಇಲ್ಲದ ಸರ್ಕಾರ’ ಎಂದು ಬಿಜೆ‍ಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸರ್ಕಾರವನ್ನು ಹಲವು ಸಲ ತರಾಟೆಗೆ ತೆಗೆದುಕೊಂಡಿದ್ದರು. ಬರ ಸಮಸ್ಯೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸುದೀರ್ಘವಾಗಿ ಮಾತನಾಡಿದ್ದರು. ಆ ಪಕ್ಷದ 15ಕ್ಕೂ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮೈತ್ರಿ ಸರ್ಕಾರಕ್ಕೆ ಆರು ತಿಂಗಳಾದ ವೇಳೆ ಬಿಜೆಪಿಯು ‘ನಿಜ ಹೇಳಿ ಕುಮಾರಣ್ಣ’ ಎಂದು ಪಂಚ ಪ್ರಶ್ನೆಗಳನ್ನು ಕೇಳಿತ್ತು.

 **

ಐಭೋಗದ ಅರಮನೆಯಲ್ಲಿ ವಾಸ

ನವದೆಹಲಿ: ಹರಿಯಾಣದ ಗುರುಗ್ರಾಮದ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್‌- ವಿಶ್ರಾಂತಿಧಾಮ ಐ.ಟಿ.ಸಿ. ಗ್ರ್ಯಾಂಡ್ ಭಾರತ್ ವಿಲಾಸ-ವೈಭವಕ್ಕೆ ಹೆಸರಾದುದು. ಅರಾವಳಿ ತಪ್ಪಲಿನ ಹಳ್ಳಿಗಾಡಿನ 300 ಎಕರೆಗಳ ವಿಶಾಲ ಬಯಲಿನಲ್ಲಿ ತಲೆಯೆತ್ತಿ ನಿಂತಿರುವ ಈ ಹೊಟೆಲು ಭವ್ಯ ಅರಮನೆಯನ್ನು ಹೋಲುತ್ತದೆ. ಸದ್ದುಗದ್ದಲದಿಂದ ಬಹುದೂರ.

ಸುತ್ತಮುತ್ತ ಕಣ್ಣು ಹರಿಯುವ ತನಕ ಯಾವುದೇ ಬೇರೆ ಕಟ್ಟಡಗಳಿಲ್ಲ. ವಿಶ್ವವಿಖ್ಯಾತ ಗಾಲ್ಫ್ ಆಟಗಾರ ಅಮೆರಿಕದ ಜಾಕ್ ನಿಕೊಲಸ್ ವಿನ್ಯಾಸಗೊಳಿಸಿದ ಗಾಲ್ಫ್ ಕೋರ್ಸ್, ಭಾರತೀಯ ಪರಂಪರೆಯ ಅತ್ಯುತ್ತಮ ವಾಸ್ತುಶಿಲ್ಪದ ಹೊರಾವರಣ ಮತ್ತು ಒಳಾವರಣ ವಿನ್ಯಾಸ, ಬಗೆ ಬಗೆಯ ಭಕ್ಷ್ಯಭೋಜ್ಯಗಳು- ಪಾನೀಯಗಳು, ರಾಜಮಹಾರಾಜರಿಗೆ ತಕ್ಕುದಾದ ಸುಖಮಯ ಮಜ್ಜನದ ಅನುಕೂಲಗಳು, ಅರೆ ಖಾಸಗಿ ಈಜುಕೊಳಗಳು, ಮನರಂಜನೆಯ ಸೌಲತ್ತುಗಳು, ಐಷಾರಾಮ ಐಭೋಗವೇ ಹಾಸಿ ಮಲಗಿರುವ ಧಾಮ.

ಮುಖ್ಯರಸ್ತೆಯಿಂದ ಈ ಧಾಮವನ್ನು ತಲುಪಲು ಖಾಸಗಿ ಒಂದೂವರೆ ಕಿ.ಮೀ.ಖಾಸಗಿ ರಸ್ತೆ. ಬಿಡಾರ ಹೂಡಿದವರ ವಿನಾ ಬೇರೆ ಯಾರಿಗೂ ಈ ರಸ್ತೆಗೆ ಪ್ರವೇಶ ಇಲ್ಲ.

**
ಅಂಕಿ ಅಂಶಗಳು

* 95 - ಹೋಟೆಲ್‌ನಲ್ಲಿರುವ ಬಿಜೆಪಿ ಶಾಸಕರು

* 2 - ಸಂಸದರು

* 60 - ಬಿಜೆಪಿ ಬುಕ್‌ ಮಾಡಿರುವ ರೂಮ್‌ಗಳು

* ₹25 ಸಾವಿರ - ಪ್ರತಿ ಕೊಠಡಿಗೆ ನಿತ್ಯದ ಬಾಡಿಗೆ (ತೆರಿಗೆ ಬಿಟ್ಟು)

* ₹5 ಸಾವಿರ - ಪ್ರತಿ ಶಾಸಕನಿಗೆ ನಿತ್ಯದ ಊಟ ತಿಂಡಿಗೆ ಸರಾಸರಿ ಖರ್ಚು

* ₹1.30 ಕೋಟಿ - ಪಕ್ಷವು ಈ ವರೆಗೆ ಮಾಡಿರುವ ವೆಚ್ಚ

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !