ಶನಿವಾರ, ಡಿಸೆಂಬರ್ 7, 2019
25 °C

ಬಿಜೆಪಿ ಕಾರ್ಯತಂತ್ರಕ್ಕೆ ಶಾಸಕರ ವಿಶೇಷ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ಸ್ಥಿತಿ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಬಿಜೆಪಿ ಬುಧವಾರ ಶಾಸಕರ ವಿಶೇಷ ಸಭೆ ಕರೆದಿದೆ.

ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನವಾಗುವ ಸ್ಥಿತಿ ಉದ್ಭವಿಸಿದರೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. 

ಕಾಂಗ್ರೆಸ್‌ನಲ್ಲಿ ಅತೃಪ್ತಿಯ ಕಿಡಿಕಾರುತ್ತಿರುವ ಶಾಸಕರ ಅಸಮಾಧಾನ ಇನ್ನೂ ಆರಿಲ್ಲ. ಹೀಗಾಗಿ ಸರ್ಕಾರಕ್ಕೆ ಕಂಟಕ ಮುಂದುವರಿದಿದೆ ಎಂದೇ ಬಿಜೆಪಿ ನಾಯಕರು ಭಾವಿಸಿದ್ದಾರೆ. ಹೀಗಾಗಿ ಈ ಸಭೆ ಮಹತ್ವ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

‘ನಮ್ಮ ಕಡೆಯಿಂದ ಯಾವುದೇ ಶಾಸಕರಿಗೆ ಆಮಿಷವೊಡ್ಡಿಲ್ಲ. ಕಾಂಗ್ರೆಸ್‌ನಲ್ಲೇ ಅಸಮಾಧಾನದ ಹೊಗೆಯಾಡುತ್ತಿದೆ. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾಡುತ್ತಿವೆ. ಅಸ್ಥಿರ ಸ್ಥಿತಿಯಿಂದ ರಾಜ್ಯದಲ್ಲಿ ಆಡಳಿತ ಯಂತ್ರವೇ ಕುಸಿದು ಹೋಗಿದೆ. ಈ ವಿಚಾರಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ರಮೇಶಗೆ ಜಲಸಂಪನ್ಮೂಲ ಖಾತೆ?

ಕಾಂಗ್ರೆಸ್ ತೊರೆದು ಬಂದರೆ ಜಲಸಂಪನ್ಮೂಲ ಸಚಿವ ಸ್ಥಾನ ನೀಡುವುದಾಗಿ ರಮೇಶ ಜಾರಕಿಹೊಳಿಗೆ ಬಿಜೆಪಿ ಭರವಸೆ ನೀಡಿದೆ.

ಕಾಂಗ್ರೆಸ್ ನಾಯಕರ ಧೋರಣೆಯಿಂದ ಬೇಸತ್ತಿರುವ ರಮೇಶ, ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದರು. ಆದರೆ, ಬಿಜೆಪಿ ಅದನ್ನು ನಿರಾಕರಿಸಿದೆ.

ಬೆಳಗಾವಿ ರಾಜಕಾರಣದ ಗೊಂದಲ ಹಾಗೂ ತಮ್ಮ ಹಿನ್ನಡೆಗೆ ಸಚಿವ ಡಿ.ಕೆ. ಶಿವಕುಮಾರ್‌ ಕಾರಣ ಎಂದು ಕುದಿಯುತ್ತಿರುವ ರಮೇಶ, ಡಿಕೆಶಿ ಖಾತೆ ಸಿಕ್ಕಿದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು