ಬೇಟೆಗಿಳಿದ ‘ದೋಸ್ತಿ’ ನಾಯಕರು: ಕಂಗಾಲಾದ ‘ಕಮಲ’ ಪಡೆ ರೆಸಾರ್ಟ್‌ಗೆ

ಶುಕ್ರವಾರ, ಜೂಲೈ 19, 2019
24 °C
ಕುಮಾರಸ್ವಾಮಿಯಿಂದ ದಾರಿ ತಪ್ಪಿಸುವ ಕೊನೆ ಆಟ ಎಂದ ಬಿಎಸ್‌ವೈ

ಬೇಟೆಗಿಳಿದ ‘ದೋಸ್ತಿ’ ನಾಯಕರು: ಕಂಗಾಲಾದ ‘ಕಮಲ’ ಪಡೆ ರೆಸಾರ್ಟ್‌ಗೆ

Published:
Updated:
Prajavani

ಬೆಂಗಳೂರು: ‘ದೋಸ್ತಿ’ ಪಕ್ಷದ ನಾಯಕರು ‘ಬೇಟೆ’ಗಿಳಿಯುವ ಖಚಿತ ಮಾಹಿತಿ ಸಿಗುತ್ತಿದ್ದಂತೆ ತಮ್ಮ ಬಲ ಉಳಿಸಿಕೊಳ್ಳಲು ಮುಂದಾದ ‘ಕಮಲ’ ಪಡೆಯ ನಾಯಕರು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ತಮ್ಮ ಶಾಸಕರನ್ನು ಕೂಡಿ ಹಾಕಿದ್ದಾರೆ.

ಜೆಡಿಎಸ್‌–ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರೊಬ್ಬರು ತಮ್ಮನ್ನು ಸೆಳೆಯಲು ಸಂಪರ್ಕಿಸಿರುವುದನ್ನು ಮೂವರು ಶಾಸಕರು ಪಕ್ಷದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಳಿ ಹೇಳಿಕೊಂಡ ಬೆನ್ನಲ್ಲೇ, ಚುರುಕಾದ ಅವರು ತಕ್ಷಣವೇ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸುವ ತೀರ್ಮಾನ ತೆಗೆದುಕೊಂಡರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚಿಸುವವರೆಗೆ ಶಾಸಕರನ್ನು ರಾಜಾನುಕುಂಟೆಯಲ್ಲಿರುವ ‘ರಮಾಡ’ ರೆಸಾರ್ಟ್‌ನಲ್ಲೇ ಇರಿಸಲಾಗುವುದು. ಅತ್ಯಂತ ಹಿರಿಯ ಮತ್ತು ಮೂರರಿಂದ ನಾಲ್ಕು ಬಾರಿ ಗೆಲುವು ಸಾಧಿಸಿರುವ ಶಾಸಕರನ್ನು ಹೊರತುಪಡಿಸಿ, 80 ಶಾಸಕರಿಗೆ ಅಲ್ಲಿ ವಾಸ್ತವ್ಯ ಮಾಡಲಾಗಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಈ ಮಧ್ಯೆ ಸುಪ್ರೀಂಕೋರ್ಟ್‌ನಿಂದ ಪೂರಕ ಆದೇಶ ಬರಬಹುದೆಂಬ ನಿರೀಕ್ಷೆ ಬಿಜೆಪಿ ಪಾಳೆಯಕ್ಕಿತ್ತು. ಆದರೆ, ಸುಪ್ರೀಂಕೋರ್ಟ್‌ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತು. ಇದು ‘ಕೇಸರಿ’ ಪಕ್ಷದ ನಾಯಕರಿಗೆ ಇನ್ನಷ್ಟು ಕಸಿವಿಸಿಗೆ ಕಾರಣವಾಯಿತು. ‘ಮೈತ್ರಿ’ ಪಕ್ಷದ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳಲು, ರಾಜೀನಾಮೆ ನೀಡಿರುವ ಶಾಸಕರನ್ನು ಮತ್ತೊಮ್ಮೆ ಮನವೊಲಿಸಿ ಕರೆತರಲು ಇನ್ನಷ್ಟು ಕಾಲಾವಕಾಶ ಸಿಕ್ಕಿದಂತಾಗಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಈಗಾಗಲೇ ರಾಜೀನಾಮೆ ನೀಡಿರುವ ಕೆಲವು ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ಇತ್ಯರ್ಥಗೊಳಿಸಲು ಸಭಾಧ್ಯಕ್ಷರಿಗೆ ಸಾಧ್ಯವಾಗದು. ಸಭಾಧ್ಯಕ್ಷರ ಕೈಕಟ್ಟಿ ಹಾಕಿದಂತಾಗಿದೆ ಎಂಬ ಸಣ್ಣ ಸಮಾಧಾನವೂ ಬಿಜೆಪಿ ನಾಯಕರದು.


ಬಿಜೆಪಿ ಶಾಸಕರು ರಮಾಡ ಹೋಟೆಲ್‌ಗೆ ಬಸ್‌ನಲ್ಲಿ ಶುಕ್ರವಾರ ಆಗಮಿಸಿದರು

‘ಕುಮಾರಣ್ಣನ ಕೊನೇ ಆಟ’: ‘ಆಡಳಿತ ನಡೆಸಲು ತಮ್ಮ ಬಳಿ ಲೆಕ್ಕವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆ ಆಟ ಆಡಲು ಶುರು ಮಾಡಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಆದರೆ ಗಾಬರಿ ಆಗಬೇಕಾಗಿಲ್ಲ’ ಎಂದು ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಾಸಕರಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

‘ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾಗಿರುವುದು ಒಂದು ತಂತ್ರವಲ್ಲದೇ ಬೇರೇನೂ ಅಲ್ಲ. ಈ ಮಧ್ಯೆ ಬಿಜೆಪಿಯ ಕೆಲವು ಶಾಸಕರನ್ನು ತಮ್ಮ ಕಡೆ ಸೆಳೆದಿದ್ದೇವೆ ಎಂದೂ, ರಾಮಲಿಂಗಾರೆಡ್ಡಿ, ಬೈರತಿ ಬಸವರಾಜ್‌, ಸೋಮಶೇಖರ್ ಮತ್ತು ಮುನಿರತ್ನ ಅವರನ್ನು ಸಂಪರ್ಕಿಸಿ ಮನವೊಲಿಸಿದ್ದೇವೆ ಎಂಬ ವದಂತಿಯನ್ನೂ ಹರಿಬಿಡಲಾಗಿದೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಮುಂಬೈನಲ್ಲಿ ಇರುವ ಅತೃಪ್ತರನ್ನು ದಾರಿ ತಪ್ಪಿಸುವ ಏಕೈಕ ಉದ್ದೇಶದಿಂದ ಈ ದಾಳ ಉರುಳಿಸಿದ್ದಾರೆ’ ಎಂದು ಅವರು ಶಾಸಕರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂನಬಿ ಆಜಾದ್‌ ಅವರು ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿದಾಗ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ವಾಪಸ್‌ ಬರುವ ಬಗ್ಗೆ ಪೂರ್ಣ ಭರವಸೆ ನೀಡಿಲ್ಲ. ಫಿಫ್ಟಿ– ಫಿಫ್ಟಿ ಎಂಬ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದರು.

ಈ ಮಧ್ಯೆ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಅವರು ಮಾಧ್ಯಮದ ಜತೆ ಮಾತನಾಡಿ, ‘ಮೈತ್ರಿ ನಾಯಕರು ತಮಗೆ ದೂರವಾಣಿ ಕರೆ ಮಾಡಿ ಮಂತ್ರಿಗಿರಿ ಮತ್ತು ಹಣ ನೀಡುವುದಾಗಿ ಆಮಿಷ ಒಡ್ಡಿದರು. ಅದನ್ನು ನಿರಾಕರಿಸಿ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

**

ಎಲ್ಲರೂ ಒಟ್ಟಾಗಿ ಇರೋಣ ಎಂಬ ಶಾಸಕರ ಸಲಹೆಯಂತೆ ನಾವು ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ಎರಡು ದಿನ ಅಲ್ಲಿದ್ದು, ಸೋಮವಾರ ಬರುತ್ತೇವೆ.
-ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 8

  Happy
 • 7

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !