ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅನುಮಾನದ ಹುತ್ತ: ಎಚ್‌.ಡಿ.ಕುಮಾರಸ್ವಾಮಿ

Last Updated 17 ಫೆಬ್ರುವರಿ 2020, 21:44 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ 7 ಶಾಸಕರ ಮತಗಳು ಅಸಿಂಧುಗೊಂಡಿರುವುದು ಬಿಜೆಪಿ ಪಾಳಯದಲ್ಲಿ ಅನುಮಾನದ ಹುತ್ತವನ್ನು ಹುಟ್ಟುಹಾಕಿದೆ.

ಅಭ್ಯರ್ಥಿ ಹೆಸರಿನ ಮುಂದೆ1 ಹಾಗೂ 2 ಎಂದು ಆದ್ಯತೆ ಮೇರೆಗೆ ಸಂಖ್ಯೆ (ಪ್ರಾಶಸ್ತ್ಯ ಮತದಾನ) ನಮೂದಿಸಬೇಕು. ಆದರೆ ಲಕ್ಷ್ಮಣ ಸವದಿ ಹೆಸರಿನ ಮುಂದೆ 6 ಶಾಸಕರು √, ಒಬ್ಬರು X ಚಿಹ್ನೆ ನಮೂದಿಸಿದ್ದಾರೆ. ಹಾಗಾಗಿ 7 ಮತಗಳು ಅಸಿಂಧುಗೊಂಡಿವೆ.

ಇಬ್ಬರು ಪಕ್ಷೇತರ ಶಾಸಕರು, ಜೆಡಿಎಸ್‌ನ ಜಿ.ಟಿ.ದೇವೇಗೌಡ, ಬಿಎಸ್‌ಪಿ ಎನ್.ಮಹೇಶ್ ಸೇರಿ ಒಟ್ಟು 120 ಮತಗಳು ಚಲಾವಣೆಯಾಗಿದ್ದವು. ಸಾವಿರಾರು ಜನರಿಂದ ಮತ ಹಾಕಿಸಿಕೊಂಡು ಗೆದ್ದು ಬಂದವರಿಗೆ ತಮ್ಮ ಮತವನ್ನು ಸರಿಯಾಗಿ ಹಾಕಲು ಬರಲಿಲ್ಲವೆ? ಇಲ್ಲವೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆಯೆ? ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆದಿವೆ.

ಸಚಿವ ಸಂಪುಟದಲ್ಲಿ ಅವಕಾಶ ವಂಚಿತರಾದ ಶಾಸಕರು ಬೇಕೆಂದೇ ಈ ರೀತಿ ಮಾಡುವ ಮೂಲಕ ತಮ್ಮ ಸಿಟ್ಟು ವ್ಯಕ್ತಪಡಿಸಿರಬಹುದು. ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿರಬಹುದು. ಬಂಡಾಯದ ಸೂಚನೆಗಳೂ ಇರಬಹುದು ಎಂಬಅನುಮಾನಗಳು ಪಕ್ಷದ ಮುಖಂಡರ ನಡುವೆ ಮೂಡಿವೆ.

ಚುನಾವಣೆ ಸಮಯದಲ್ಲಿ ಯಾವ ರೀತಿ ಮತದಾನ ಮಾಡಬೇಕು ಎಂಬ ಮಾಹಿತಿ ಪ್ರತಿಯನ್ನು ಎಲ್ಲ ಶಾಸಕರಿಗೂ ವಿಧಾನಸಭೆ ಕಾರ್ಯಾಲಯದಿಂದ ಮೊದಲೇ ನೀಡಲಾಗಿರುತ್ತದೆ. ಆದರೂ ಈ ರೀತಿ ಮತದಾನ ಮಾಡಿರುವುದು ಏನನ್ನು ಸೂಚಿಸುತ್ತದೆ ಎಂದು ಬಿಜೆಪಿ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

ಹೊಸ ಶಾಸಕರು: ‘ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಮತದಾನ ಮಾಡುವಾಗ ತಪ್ಪುಗಳು ಆಗಿರಬಹುದು. ಪ್ರತಿ ಚುನಾವಣೆ ಸಮಯದಲ್ಲೂ ಪಕ್ಷದ ಶಾಸಕರಿಗೆ ಮಾದರಿ ಮತಪತ್ರ ಕೊಟ್ಟು ಅಭ್ಯಾಸ ಮಾಡಿಸಲಾಗುತ್ತದೆ. ಈ ಸಲ ಸ್ಪರ್ಧೆಯಲ್ಲಿ ಇದ್ದ ಅಭ್ಯರ್ಥಿ ಕಣದಿಂದ ನಿವೃತ್ತಿ ಘೋಷಿಸಿದ್ದರಿಂದ ಅಭ್ಯಾಸ ಮಾಡಿಸಿರಲಿಲ್ಲ. ಮಾಹಿತಿ ಕೊರತೆಯಿಂದ ಈ ರೀತಿ ಆಗಿರಬಹುದು’ ಎಂದು ವಿಧಾನಸಭೆ ಮುಖ್ಯ ಸಚೇತಕ ಸುನಿಲ್ ಕುಮಾರ್ ಹೇಳಿದರು.

ಜಿ.ಟಿ.ದೇವೇಗೌಡಮತ ಬಿಜೆಪಿಗೆ
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರಿಗೆ ಮತ ಚಲಾಯಿಸಿದ್ದಾರೆ. ಮತದಾನದ ನಂತರ ಮಾಧ್ಯಮದವರ ಎದುರು ಅವರೇ ಈ ವಿಷಯ ಖಚಿತಪಡಿಸಿದರು.

ಜೆಡಿಎಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಾಂಗ್ರೆಸ್‌ನಿಂದ ನಿರೀಕ್ಷಿತ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಮತದಾನದಿಂದ ದೂರ ಉಳಿಯಲು ಜೆಡಿಎಸ್ ಮುಖಂಡರು ನಿರ್ಧರಿಸಿದ್ದರು. ಆದರೆ ಪಕ್ಷದ ವರಿಷ್ಠರ ನಿರ್ಧಾರವನ್ನು ಧಿಕ್ಕರಿಸಿ ಅವರು ಮತ ಹಾಕಿದ್ದಾರೆ.

ಈಗಾಗಲೇ ಪಕ್ಷದ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದು, ಸೋಮವಾರ ಬೆಳಿಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಪಾಲ್ಗೊಂಡಿರಲಿಲ್ಲ. ಬಿಜೆಪಿ ಮುಖಂಡರ ಜತೆಯಲ್ಲಿ ಬಂದು ಮತದಾನ ಮಾಡಿದರು.

ಎಲ್ಲಿಗೆ ಹೋಗ್ತಾರೆ ನೋಡೋಣ: ‘ಮತದಾನ ಮಾಡಬಾರದು ಎಂದು ಸೂಚಿಸಿದರೂ ಮತ ಚಲಾಯಿಸಿದ ಜಿ.ಟಿ.ದೇವೇಗೌಡರು ಮುಂದೆ ಎಲ್ಲಿಗೆ ಹೋಗುತ್ತಾರೆ ನೋಡೋಣ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದರು.

‘ಈಗ ಅವರು ನಮ್ಮಲ್ಲಿ ಇದ್ದಾರಾ’ ಎಂದು ಪ್ರಶ್ನಿಸಿದರು. ‘ಹಲವಾರು ಹೇಳಿಕೆಗಳನ್ನುಕೊಟ್ಟಿದ್ದಾರೆ. ಶಾಸಕಾಂಗ ಪಕ್ಷಕ್ಕೆ ಅಗೌರವ ತೋರಿಸಿದ್ದಾರೆ. ಬೇರೆ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ನಾವು ಬಾಗಿಲು ಹಾಕಿಕೊಂಡು ಕೂತಿಲ್ಲ. ಜನತಾದಳ ಮುಳುಗಿ ಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT