ಭಿನ್ನಾಬಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಕೆ

7
‘ತಾವಾಗಿಯೇ ಬರಲಿದ್ದಾರೆ ಅತೃಪ್ತ ಶಾಸಕರು’

ಭಿನ್ನಾಬಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಕೆ

Published:
Updated:

ನವದೆಹಲಿ: ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಜೆಡಿಎಸ್– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ‘ಬಿರುಕು’ ಕಾಣಿಸಿಕೊಂಡಿದ್ದರ ಲಾಭ ಪಡೆಯಲು ಹವಣಿಸುತ್ತಿರುವ ಬಿಜೆಪಿ, ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ತಾವಾಗಿಯೇ ಪಕ್ಷದತ್ತ ಆಕರ್ಷಿತರಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದೆ.

‘ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ನಿಟ್ಟಿನಲ್ಲಿ ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡುವುದಾಗಿ ತಿಳಿಸಿದ್ದ ಕಾಂಗ್ರೆಸ್‌, ನಂತರ ಒಂದೊಂದೇ ಷರತ್ತು ವಿಧಿಸುತ್ತಿದೆ. ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದ ವಿರುದ್ಧ ಆ ಪಕ್ಷಗಳ ಶಾಸಕರೇ ಸಿಡಿದೇಳಲಿದ್ದಾರೆ ಎಂಬ ಆಶಾಭಾವ ಇದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

‘ವಿರೋಧ ಪಕ್ಷದಲ್ಲಿ ಇರುವವರು ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುವುದು ಸಹಜ. ಜೆಡಿಎಸ್‌– ಕಾಂಗ್ರೆಸ್‌ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದ್ದಲ್ಲಿ ಕನಿಷ್ಠ ಆರು ತಿಂಗಳುಗಳ ಕಾಲ ನಾವು ಸರ್ಕಾರದ ಕಾರ್ಯವೈಖರಿ ಕುರಿತು ಚಕಾರ ಎತ್ತುತ್ತಿರಲಿಲ್ಲ. ಈಗ ಅವರೇ ಕಚ್ಚಾಟ ಆರಂಭಿಸಿದ್ದರಿಂದ ಜನರೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಕಾಲ ದೂರವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಪಕ್ಷವು ಈಗಂತೂ ಯಾರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಹಣದಿಂದಾಗಿ ಸೋಲು: ‘ಬೆಂಗಳೂರು ನಗರದಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲಲಾಗಲಿಲ್ಲ. ಅದಕ್ಕೆ ಕಾಂಗ್ರೆಸ್‌ ಮುಖಂಡರು ಹಣದ ಹೊಣೆ ಹರಿಸಿದ್ದೇ ಕಾರಣ. ನಾಯಕತ್ವ ಕೇಂದ್ರಿತ ಬೆಂಗಳೂರಿನಲ್ಲಿ ನಮಗೆ ಇನ್ನೂ ಐದು ಸ್ಥಾನಗಳು ದೊರೆಯದೆ ಹೋಗಿದ್ದಕ್ಕೆ ಹಣವೂ ಕಾರಣವಾಯಿತು’ ಎಂದು ಅವರು ಹೇಳಿದರು.

‘ಲಿಂಗಾಯತ ಸಮುದಾಯ ಮಾತ್ರವಲ್ಲದೆ, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಮತಬ್ಯಾಂಕ್‌ ಈಗ ನಮ್ಮತ್ತ ವಾಲಿದೆ. ಮುಂದಿನ ದಿನಗಳಲ್ಲಿ ನೆಚ್ಚಿನ ಮತದಾರರೇ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !