ಬಿಜೆಪಿಯಲ್ಲಿ ಮತ್ತೆ ಮೊಳಗಿದ ಭಿನ್ನಧ್ವನಿ

7
ಪಕ್ಷದಲ್ಲಿ ವಲಸಿಗರ–ನಿಷ್ಠರ ಸಂಘರ್ಷ

ಬಿಜೆಪಿಯಲ್ಲಿ ಮತ್ತೆ ಮೊಳಗಿದ ಭಿನ್ನಧ್ವನಿ

Published:
Updated:

ಬೆಂಗಳೂರು/ಶಿವಮೊಗ್ಗ: ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನಾಯಕತ್ವದ ವಿರುದ್ಧ ಮತ್ತೆ ಭಿನ್ನ ಧ್ವನಿ ಮೊಳಗಿದೆ.

ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ವಿಧಾನ ಪರಿಷತ್‌ನ ಮಾಜಿ ಸದಸ್ಯ, ಶಿವಮೊಗ್ಗದವರೇ ಆಗಿರುವ ಎಂ.ಬಿ. ಭಾನುಪ್ರಕಾಶ್ ನಿರಾಕರಿಸಿದ್ದಾರೆ. ಈ ಮೂಲಕ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಉಪಚುನಾವಣೆ ವೇಳೆ ಡಾ.ಸಿದ್ದರಾಮಯ್ಯ (ಮಂಡ್ಯ), ಎಲ್‌ ಚಂದ್ರಶೇಖರ್‌ (ರಾಮನಗರ) ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್‌ ನೀಡಲಾಗಿತ್ತು. ಪಕ್ಷದ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಡಿಯೂರಪ್ಪ ಬಣದವರು ಈ ನಿರ್ಧಾರಕ್ಕೆ ಬಂದಿದ್ದರು. ಚುನಾವಣೆಗೆ ಎರಡು ದಿನಗಳು ಇರುವಾಗ ಚಂದ್ರಶೇಖರ್‌ ಕಣದಿಂದ ನಿವೃತ್ತರಾದರು. ಇದರಿಂದ ಪಕ್ಷಕ್ಕೆ ಭಾರಿ ಮುಜುಗರ ಉಂಟಾಯಿತು. ಇದು ಅಪಸ್ವರಕ್ಕೆ ಕಾರಣ ಎಂದು ಹೇಳಲಾಗಿದೆ.

ಬಿಜೆಪಿ ಪ್ರಮುಖರ ಸಮಿತಿಯಲ್ಲಿ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಗೋವಿಂದ ಕಾರಜೋಳ, ಆರ್‌.ಅಶೋಕ, ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಇದ್ದಾರೆ. ಸಮಿತಿ ಸಭೆಯಲ್ಲಿ ಚರ್ಚೆ ನಡೆಸದೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪಕ್ಷಕ್ಕೆ ಹಾನಿಯಾಗುವ ತೀರ್ಮಾನಗಳ ಬಗ್ಗೆ ಈ ಮುಖಂಡರು ಧ್ವನಿ ಎತ್ತುವುದಿಲ್ಲ ಎಂಬುದು ಪಕ್ಷದ ಕೆಲವು ಮುಖಂಡರ ಆರೋಪ.

ಭಾನುಪ್ರಕಾಶ್ ಹೇಳಿದ್ದೇನು: ‘ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿರುವುದಾಗಿ ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ತಕ್ಷಣವೇ ನಿರಾಕರಿಸಿದ್ದರೆ ಮತದಾರರಿಗೆ ಬೇರೆ ಸಂದೇಶ ರವಾನೆಯಾಗುವ ಸಾಧ್ಯತೆ ಇತ್ತು. ಅದಕ್ಕಾಗಿ ಈಗ ನಿರ್ಧಾರ ಪ್ರಕಟಿಸುತ್ತಿರುವೆ. ಸದ್ಯದ ಪರಿಸ್ಥಿತಿಯಲ್ಲಿ ಆ ಹುದ್ದೆ ಒಪ್ಪಿಕೊಳ್ಳಲು ತಾತ್ವಿಕ ವಾಗಿ ಸಾಧ್ಯವಾಗುತ್ತಿಲ್ಲ’ ಎಂದು ಭಾನುಪ್ರಕಾಶ್‌ ಸೋಮವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವ್ಯಕ್ತಿಗಿಂತ ದೇಶದ ಹಿತ ಮೊದಲು ಎಂಬ ನೀತಿ ಪಕ್ಷ ಹೇಳಿಕೊಟ್ಟಿದೆ. 35 ವರ್ಷ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಪಕ್ಷದಲ್ಲಿ ಹಿಂದೆ ಎಂದೂ ಲೀಡರ್ ಸಂಸ್ಕೃತಿ ಇರಲಿಲ್ಲ. ಈಗ ಅಂತಹ ಸಂಪ್ರದಾಯ ಹುಟ್ಟುಹಾಕಲಾಗಿದೆ. ಇದು ಮನಸ್ಸಿಗೆ ನೋವು ತಂದಿದೆ’ ಎಂದು ಬೇಸರ ತೋಡಿಕೊಂಡರು.

‘ಯಡಿಯೂರಪ್ಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲಬಹುದು. ಸರ್ಕಾರ ಉರುಳಿಸಬಹುದು. ಉಳಿಸಬಹುದು. ಆದರೆ, ಮನಸ್ಸು ಕಟ್ಟಲು ಆಗುವುದಿಲ್ಲ’ ಎಂದು ಕುಟುಕಿದರು.

‘ಕೆಜೆಪಿಯಿಂದ ಯಡಿಯೂರಪ್ಪ ಬಂದಾಗ ಎಲ್ಲರೂ ಸ್ವಾಗತಿಸಿದ್ದೆವು. ವರ್ತನೆ ಬದಲಾದಾಗ ಸರಿಪಡಿಸಿಕೊಳ್ಳಲು ಸಲಹೆ ನೀಡಿದ್ದೆವು. ‘ಪಕ್ಷ ಸಂಘಟನೆ ಉಳಿಸೋಣ’ ಎಂದು ಸಭೆ ನಡೆಸಿದವರನ್ನೇ ಕೆಟ್ಟವರಂತೆ ಬಿಂಬಿಸಿದರು. ಉಪಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದರು. ಸೊಗಡು ಶಿವಣ್ಣ, ಶಿವಯೋಗಿಸ್ವಾಮಿ, ಗಿರೀಶ್ ಪಟೇಲ್‌, ನಿರ್ಮಲ್ ಕುಮಾರ್ ಸುರಾನ ಅವರನ್ನೆಲ್ಲ ಕರೆದು ಮಾತನಾಡಿ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡದ ಹೊರತು ಸ್ಥಾನ ಒಪ್ಪಿಕೊಳ್ಳುವುದಿಲ್ಲ’ ಎಂದು ‌ಸ್ಪಷ್ಟಪಡಿಸಿದರು.

‘ವಿಪ್ರ ಸಮಾಜ ದೇಶದ ಹಿತದೃಷ್ಟಿ ಇಟ್ಟುಕೊಂಡು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದೆ. ಯಾರೋ ಒಬ್ಬರಿಗೆ ಪಕ್ಷದ ಹುದ್ದೆ ನೀಡಿದ್ದಾರೆ ಎಂದು ಮತ ನೀಡಿಲ್ಲ. ಚುನಾವಣೆ ಸಮಯದಲ್ಲಿ ದಿಢೀರ್ ಎಂದು ಉಪಾಧ್ಯಕ್ಷ ಸ್ಥಾನ ನೀಡಿದ್ದು ಏಕೆ ಎಂದು ಯಡಿಯೂರಪ್ಪ ಅವರನ್ನೇ ಪ್ರಶ್ನಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !