ಗುರುವಾರ , ಫೆಬ್ರವರಿ 27, 2020
19 °C

ಬರಿಗೈಯಲ್ಲಿ ಮರಳಿದ ಸಚಿವಾಕಾಂಕ್ಷಿಗಳು, ಬಿಎಸ್‌ವೈ ಮನೆ ಬಳಿ ದಿನವಿಡೀ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸುತ್ತ ಪ್ರದಕ್ಷಿಣೆ ಹಾಕಿ, ಕಾಡಿ ಬೇಡಿ ಬಸವಳಿದಿದ್ದ ಸಚಿವಾಕಾಂಕ್ಷಿ ಶಾಸಕರಿಗೆ ಸಚಿವ ಸ್ಥಾನ ಖಾತರಿಯಾಗದ ಕಾರಣ ಬುಧವಾರ ಸಂಜೆ ಅಕ್ಷರಶಃ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಧ್ಯಾಹ್ನದ ವೇಳೆಗೆ 10 ಜನರಿಗೆ ಮಾತ್ರ ಸಚಿವ ಸ್ಥಾನ ಮಾಹಿತಿ ಹರಿದಾ ಡಿತ್ತು. ರಾತ್ರಿಗೆ ಅದು ಖಚಿತವಾಯಿತು. ಮುಖ್ಯಮಂತ್ರಿ ಮನೆಯಿಂದ ಸಪ್ಪೆ ಮೋರೆ ಹಾಕಿಕೊಂಡು ಹೋಗಬೇಕಾದ ಸ್ಥಿತಿ ಶಾಸಕರದ್ದಾಗಿತ್ತು. ವಿಸ್ತರಣೆಯಲ್ಲಿ ತಮಗೆ ಅವಕಾಶ ಸಿಗದ ಬಗ್ಗೆ ಕೆಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯವರ ಮನೆ ಬೆಳಗ್ಗಿನಿಂದಲೇ ಚಟುವಟಿಕೆಯ ಕೇಂದ್ರ ವಾಗಿತ್ತು. ಶಾಸಕರಾದ ಉಮೇಶ ಕತ್ತಿ, ನೆಹರೂ ಓಲೆಕಾರ್‌, ಅರವಿಂದ ಲಿಂಬಾವಳಿ, ಡಾ.ಸುಧಾಕರ್‌ ಅವರು ಬೆಳಿಗ್ಗೆಯೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ಒಂದು ಕಡೆ ಸಚಿವಾಕಾಂಕ್ಷಿಗಳ ಒತ್ತಡ ಮತ್ತು ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂಬ ಆಗ್ರಹ ಹೆಚ್ಚಾಗಿದ್ದರಿಂದ ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಂದ ಸಲಹೆ ಕೇಳಿದರು ಎನ್ನಲಾಗಿದೆ.

ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅಲ್ಲಿ ನಿಗದಿಯಾಗಿದ್ದ ಸುದ್ದಿಗೋಷ್ಠಿಯನ್ನೂ ರದ್ದುಪಡಿಸಿ ಬೆಂಗಳೂರಿಗೆ ದೌಡಾಯಿಸಿದರು. ಬಳಿಕ ಅವರು ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ ರಾದ 11 ಶಾಸಕರಲ್ಲಿ 10 ಮಂದಿಗೆ ದೂರವಾಣಿ ಮೂಲಕ ಕರೆ ಮಾಡಿ ಪ್ರಮಾಣ ವಚನಕ್ಕೆ ಸಿದ್ಧರಾಗುವಂತೆ ಮಾಹಿತಿ ನೀಡಿದರು. 

ರೇಣುಕಾಚಾರ್ಯ ಟ್ವೀಟ್‌: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಟ್ವೀಟ್‌ ಮೂಲಕ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಬಿಎಸ್‌ವೈ ನಮ್ಮ ನಾಯಕರು. ನಾಯಕತ್ವ, ಪಕ್ಷ ಮತ್ತು ಸರ್ಕಾರದ ವಿರುದ್ಧ ಯಾರೂ ಧ್ವನಿ ಎತ್ತಿಲ್ಲ ಮತ್ತು ಎತ್ತುವುದೂ ಇಲ್ಲ. ಆದರೆ, ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಶ ನೀಡಿ, ಪ್ರಾದೇಶಿಕ ಸಮತೋಲನ ಕಾಪಾ ಡಬೇಕಾಗಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

ಮೂಲ– ವಲಸಿಗ ಪ್ರಶ್ನೆ ಇಲ್ಲ: ‘ನಮ್ಮ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬ ತಾರತಮ್ಯವಿಲ್ಲ. ಒಮ್ಮೆ ಬಿಜೆಪಿ ಸೇರಿದ ಬಳಿಕ ಬಿಜೆಪಿಯವರೇ ಆಗುತ್ತಾರೆ. ಹೊರಗಿನಿಂದ ಬಂದವರು, ಇಲ್ಲೇ ಇದ್ದವರು ಎಂಬ ಅರ್ಥದಲ್ಲಿ ನೋಡುವುದೂ ಇಲ್ಲ’ ಎಂದು ಸಚಿವ ಆರ್‌. ಅಶೋಕ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು