ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವಳಕ್ಕೆ ಕಾರಣವಾದ ಕತ್ತಿ, ಮುರಳೀಧರ ಹೇಳಿಕೆ | ಅನರ್ಹ ಶಾಸಕರ ಸ್ಥಿತಿ ತ್ರಿಶಂಕು?

Last Updated 29 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ 17 ಅನರ್ಹ ಶಾಸಕರಿಗೆ ಆ ಪಕ್ಷದ ವಿವಿಧ ನಾಯಕರು ಭಾನುವಾರ ನೀಡಿದ ಸರಣಿ ಹೇಳಿಕೆಗಳು ಆಘಾತವನ್ನುಂಟು ಮಾಡಿವೆ. ತಮ್ಮ ರಾಜಕೀಯ ಭವಿಷ್ಯ ತ್ರಿಶಂಕು ಸ್ಥಿತಿಗೆ ಒಳಗಾಗಬಹುದೇನೋ ಎಂಬ ಆತಂಕವನ್ನೂ ಮೂಡಿಸಿವೆ.

‘ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ’ ಎಂಬರ್ಥದಲ್ಲಿ ಹಿರಿಯ ಶಾಸಕ ಉಮೇಶ್‌ ಕತ್ತಿ ನೀಡಿದ ಹೇಳಿಕೆಯು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಜತೆಗೆ ವಾಕ್ಸಮರಕ್ಕೂ ಕಾರಣವಾಯಿತು. ಪಕ್ಷದ ವಿವಿಧ ನಾಯಕರು ಈ ಕುರಿತು ಸಮಜಾಯಿಷಿಯನ್ನು ನೀಡಿದರು. ಆದರೆ, ಯಾವ ಸಮಜಾಯಿಷಿಯೂ ಅನರ್ಹ ಶಾಸಕರಲ್ಲಿ ವಿಶ್ವಾಸ ತುಂಬಲಿಲ್ಲ. ಇಡೀ ದಿನದ ಬೆಳವಣಿಗೆಯನ್ನು ಕಳವಳದಿಂದಲೇ ಗಮನಿಸಿದ ಅನರ್ಹ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದೇ ಮುಗುಂ ಆಗಿಯೇ ಉಳಿದರು.

ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಅವರು ಪ್ರತಿನಿಧಿಸಿದ್ದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ, ಪಕ್ಷದ ನಾಯಕರು ತಲೆಗೊಂದು ಹೇಳಿಕೆ ನೀಡುತ್ತಿರುವುದು ಅವರನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಶಾಸಕ ಸ್ಥಾನದಿಂದ ಅನರ್ಹಗೊಂಡವರು ಈವರೆಗೆ ಬಿಜೆಪಿ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿಲ್ಲ. ಪಕ್ಷದ ಸದಸ್ಯರಲ್ಲದವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ವಿ.ಮುರಳೀಧರ ರಾವ್‌ ಖಡಕ್ ಆಗಿ ಹೇಳಿರುವುದು ಅನರ್ಹ ಶಾಸಕರ ಆತಂಕವನ್ನು ಹೆಚ್ಚಿಸಿದೆ.

ಕತ್ತಿ ಹೇಳಿದ್ದೇನು?

ಹುಕ್ಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕತ್ತಿ, ‘ಉಪಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ. ಅಥಣಿಯಲ್ಲಿ ಲಕ್ಷ್ಮಣ ಸವದಿ, ಕಾಗವಾಡದಲ್ಲಿ ರಾಜು ಕಾಗೆ ಹಾಗೂ ಗೋಕಾಕದಲ್ಲಿ ಅಶೋಕ ಪೂಜಾರಿಗೆ ಬಿಜೆಪಿ ಟಿಕೆಟ್‌ ಖಚಿತ’ ಎಂದು ಹೇಳಿದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಯಿತು.

ಕತ್ತಿ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ ಸವದಿ, ‘ಯಾರಿಗೆಟಿಕೆಟ್‌ ಕೊಡಬೇಕು ಎನ್ನುವುದನ್ನು ಕತ್ತಿಯವರಾಗಲೀ, ನಾನಾಗಲೀ ತೀರ್ಮಾನಿಸುವುದಿಲ್ಲ. ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್‌ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಈ ಬೆಳವಣಿಗೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮುರಳೀಧರ ರಾವ್‌, ‘ಪಕ್ಷ ಸೇರಲು ಯಾರೂ ಅರ್ಜಿ ಹಾಕಿಲ್ಲ, ಪಕ್ಷ ಸೇರದವರಿಗೆ ಟಿಕೆಟ್‌ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು.

ಯಾರೆಲ್ಲ ಸೇರುತ್ತಾರೋ ಗೊತ್ತಿಲ್ಲ

‘ಅನರ್ಹ ಶಾಸಕರಲ್ಲಿ ಎಷ್ಟು ಜನ ಬಿಜೆಪಿ ಸೇರುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಚಿತ್ರದುರ್ಗದಲ್ಲಿ ಹೇಳಿದರು.

‘ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೆಲವರು ಬಿಜೆಪಿಗೆ ಬರುವ ಬಗ್ಗೆ ಮಾಹಿತಿ ಇದೆ. ಆದರೆ, ಎಲ್ಲರೂ ಪಕ್ಷಕ್ಕೆ ಸೇರುತ್ತಾರೋ ಇಲ್ಲವೋ ಎಂಬ ಕುರಿತು ಸ್ಪಷ್ಟತೆ ಇಲ್ಲ. ವದಂತಿಗಳ ಮೇರೆಗೆ ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಹುಟ್ಟಿಕೊಂಡಿದೆ. ಪಕ್ಷ ಕಟ್ಟಿ ಬೆಳೆಸಿದವರು ಆತಂಕಗೊಳ್ಳುವುದು ಸಹಜ’ ಎಂದರು.

ಇಷ್ಟೆಲ್ಲಾ ನಡೆದರೂ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಮಗೂ ಈ ವಿದ್ಯಮಾನಕ್ಕೂ ಸಂಬಂಧವೇ ಇಲ್ಲ ಎಂಬಂತೆ ಉಳಿದಿರುವುದು ಪಕ್ಷದಲ್ಲಿ ಅಚ್ಚರಿ ಮೂಡಿಸಿದೆ.

ಬಿಎಸ್‌ವೈ ಗುಣಗಾನ

‘ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲಾ ತುಂಬಿವೆ. ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ಪಾಲಿಗೆ ದೇವರಾಗಿ ಕೆಲಸ ಮಾಡ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಗುಣಗಾನ ಮಾಡಿದರು.

ಮೈಸೂರು ದಸರಾ ಉದ್ಘಾಟನೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಟಿ.ದೇವೇಗೌಡ, ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ಸಾಕಷ್ಟು ಕೆಲಸಗಳು ಆಗ್ತಿವೆ. ಅವರು ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತಾರೆ. ಮುಂದೆಯೂ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡುತ್ತಾರೆ ಎಂದರು.

* ಉಪಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹೈಕಮಾಂಡ್‌ ಆಯ್ಕೆ ಮಾಡುತ್ತದೆ. ಸಂಘಟನೆ ಪ್ರಬಲವಾಗಿರುವುದರಿಂದ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ

ವಿ.ಮುರಳೀಧರ ರಾವ್‌,ಬಿಜೆಪಿ ರಾಜ್ಯ ಉಸ್ತುವಾರಿ

* ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದಿರುವ ಶಾಸಕ ಉಮೇಶ್ ಕತ್ತಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ

ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌,ಉಪಮುಖ್ಯಮಂತ್ರಿ

ತಂತಿ ಮೇಲೆ ನಡೆಯುತ್ತಿದ್ದೇನೆ: ಯಡಿಯೂರಪ್ಪ

ದಾವಣಗೆರೆ: ‘ನಾನು ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ತೀರ್ಮಾನ ಕೈಗೊಳ್ಳಲು 10 ಬಾರಿ ಯೋಚಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ವಯಂ ವಿಮರ್ಶೆ ಮಾಡಿಕೊಂಡರು.

ನಗರದ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಅವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ನಿರ್ಧಾರ ಕೈಗೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಬೀರುವ ಪರಿಣಾಮದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT