ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಅಶೋಕ್‌

ಶುಕ್ರವಾರ, ಏಪ್ರಿಲ್ 26, 2019
36 °C
ಎಲ್ಲರೂ ಸೇರಿ ಬೆಂಗಳೂರಿನ ಬೋರೇಗೌಡ ಮಾಡಿಟ್ಟಿದ್ದಾರೆ: ಬೇಸರ

ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಅಶೋಕ್‌

Published:
Updated:

ಬೆಂಗಳೂರು: ‘ನಾನೂ ಸಹ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ’ ಎಂದು ಶಾಸಕ ಆರ್. ಅಶೋಕ್‌ ಬಹಿರಂಗಪಡಿಸಿದರು.

ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಾತು– ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಡಿಸೆಂಬರ್‌ನಲ್ಲೇ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮುಂದೆ ಹೋಗಿತ್ತು’ ಎಂದರು.

‘ನಾನು ಬೆಂಗಳೂರಿನಲ್ಲಿ ಹುಟ್ಟಿದವನು. ಹಾಗೆಂದು, ಬೆಂಗಳೂರಿಗೆ ಸೀಮಿತನಲ್ಲ. ಆದರೆ, ಎಲ್ಲರೂ ನನ್ನನ್ನು ಬೆಂಗಳೂರಿನ ಬೋರೇಗೌಡ ಮಾಡಿಬಿಟ್ಟಿದ್ದಾರೆ. ನಾನೇನೂ ಸನ್ಯಾಸಿಯಲ್ಲ. ಪಕ್ಷ ಜವಾಬ್ದಾರಿ ನೀಡಿದರೆ ಖಂಡಿತ ನಿಭಾಯಿಸುತ್ತೇನೆ. ಹಾಗೆಂದು ಅದಕ್ಕೆ ಆಸೆಪಟ್ಟು ಖುರ್ಚಿ ಮೇಲೆ ಟವೆಲ್‌ ಹಾಕಿ ಕಾದು ಕುಳಿತಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಕೆಲವೇ ಪ್ರಮುಖರಿಗೆ ಸೀಮಿತವಾಗಿದೆ. ಎಚ್.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಜಿ.ಪರಮೇಶ್ವರ ಅವರಿಗೆ ಮೈತ್ರಿ ಬೇಕಾಗಿದೆ. ಆದರೆ, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ಮೈತ್ರಿಗೆ ಸಮ್ಮತಿ ವ್ಯಕ್ತಪಡಿಸಿಲ್ಲ. ಹಾಗಾಗಿ, ‍ಪ್ರತಿದಿನ ಬೀದಿಕಾಳಗ ನಡೆಯುತ್ತಿದೆ. ಜತೆಗೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಮುಖ ಹೆದ್ದಾರಿಗಳಲ್ಲಿ ಹಂಪ್‌ ಹಾಕಿದ್ದಾರೆ’ ಎಂದು ಅವರು ಲೇವಡಿ ಮಾಡಿದರು.

‘ಸರ್ಕಾರ ಪತನಗೊಳಿಸುವ ಯತ್ನ ಕಾಂಗ್ರೆಸ್‌ನಿಂದಲೇ ಆರಂಭವಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ತಾನಾಗಿಯೇ ಬಿದ್ದು ಹೋಗಲಿದೆ’ ಎಂದು ಅವರು ಹೇಳಿದರು.

‘ಬಿಜೆಪಿ ತರಬೇತಿ ಶಾಲೆ ಇದ್ದಂತೆ. ಬಿಜೆಪಿ ಬೆಂಬಲಿಗರಲ್ಲಿ ಯುವಕರೇ ಹೆಚ್ಚು. ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ವರಿಷ್ಠರು ಹೊಸಬರಿಗೆ ಮಣೆ ಹಾಕಿದ್ದಾರೆ. ಈ ಕ್ಷೇತ್ರ ಬಿಜೆಪಿ ಭದ್ರಕೋಟೆ. ಪಕ್ಷ ಗೆಲುವು ಸಾಧಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 7

  Frustrated
 • 6

  Angry

Comments:

0 comments

Write the first review for this !