ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಕಚೇರಿ ಕಡೆ ನುಗ್ಗಿದ ಬಿಜೆಪಿ ದಂಡು

ನಾಯಕರ ವಶಕ್ಕೆ ಪಡೆದು ಬಿಡುಗಡೆ ಮಾಡಿದ ಪೊಲೀಸರು * ಕೆಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ
Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಬಿಜೆಪಿ ಮುಖಂಡರು, ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ಗೆ ಮುತ್ತಿಗೆ ಹಾಕುವ ಯತ್ನವನ್ನು ಭಾನುವಾರ ನಡೆಸಿದರು.

ಈ ಸಮಯದಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್. ಸುರೇಶ್ ಕುಮಾರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿ, ಸಮಯ ತಿಳಿಸುವಂತೆ ಕೋರಿದ್ದರು. ಧರಣಿ, ಮುತ್ತಿಗೆ ಕೈಬಿಡುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಪರವಾಗಿ ಸಚಿವ ವೆಂಕಟರಾವ್ ನಾಡಗೌಡ ಸ್ಥಳಕ್ಕೆ ಬಂದು ಮಾತುಕತೆಯ ಆಹ್ವಾನ ಪತ್ರ ನೀಡಿದರು. ಇದಕ್ಕೆ ಸ್ಪಂದಿಸದ ಬಿಜೆಪಿ ನಾಯಕರು, ಮುತ್ತಿಗೆ ಯತ್ನ ನಡೆಸಿದರು.

ಅಹೋರಾತ್ರಿ ಧರಣಿ ನಡೆಸುತ್ತಿದ್ದ ಆನಂದರಾವ್ ವೃತ್ತದಿಂದ ಮೆರವಣಿಗೆಗೆ ಹೊರಟ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದ್ದರು. ಮೆರವಣಿಗೆಯು ಗಾಂಧಿಭವನದ ಬಳಿಗೆ ಬರುತ್ತಿದ್ದಂತೆ ಬ್ಯಾರಿಕೇಡ್ ಹಾಕಿದ ಪೊಲೀಸರು ಅವರನ್ನು ಅಲ್ಲಿಯೇ ತಡೆದರು. ನಿರ್ಬಂಧ ಲೆಕ್ಕಿಸದೆ ಮುನ್ನುಗ್ಗಲು ಮುಂದಾದ ನಾಯಕರನ್ನು ಹಿಮ್ಮೆಟ್ಟಿಸಲು ಪೊಲೀಸರು ಮುಂದಾದರು. ನೂಕಾಟ–ತಳ್ಳಾಟ ಜೋರಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಯಡಿಯೂರಪ್ಪ ಆಕ್ರೋಶ: ‘ನಾವು ಸರ್ಕಾರದ ಜತೆ ಕುಸ್ತಿ ಮಾಡಲು ಬಂದಿಲ್ಲ. ಜನರ ಹಿತಕ್ಕಾಗಿ ಹೋರಾಟಕ್ಕೆ ಇಳಿದಿದ್ದು, ನಮ್ಮ ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ. ಕುಮಾರಸ್ವಾಮಿ ವಿರುದ್ಧ ನಮ್ಮ ಹೋರಾಟ ಅಲ್ಲ. ಜನರ ಪರವಾಗಿ, ನ್ಯಾಯಕ್ಕಾಗಿ ಹೋರಾಟ ನಡೆದಿದೆ. ಜಿಂದಾಲ್ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿಲ್ಲ’ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಒಂದು ಕಡೆ ಸಂಧಾನಕ್ಕೆ ಕರೆದು, ಮತ್ತೊಂದೆಡೆ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಸರ್ಕಾರ ಮಗುವನ್ನು ಚಿವುಟಿ, ಇನ್ನೊಂದೆಡೆ ನಗಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ
ಬಿರಿಯಾನಿ ಕೊಡುತ್ತಾರೆ. ಆದರೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ’ ಎಂದು ಆರ್.ಅಶೋಕ್ ಕಿಡಿಕಾರಿದರು.

ಧರಣಿ ಅಂತ್ಯ:ಬಿಜೆಪಿ ನಾಯಕರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಭಾನುವಾರ ಅಂತ್ಯಗೊಂಡಿದೆ.

ಅಗ್ಗದ ಪ್ರಚಾರ: ಕುಮಾರಸ್ವಾಮಿ
‘ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆಗೆ ಬರುವಂತೆ ಆಹ್ವಾನಿಸಿದ ಪತ್ರವನ್ನು ಸಚಿವ ಸಹೋದ್ಯೋಗಿ ವೆಂಕಟರಾವ್ ನಾಡಗೌಡರ ಮೂಲಕ ವಿರೋಧ ಪಕ್ಷದ ನಾಯಕರಿಗೆ ಕಳುಹಿಸಿದ್ದೆ. ಚರ್ಚೆಗೆ ಸಮಯ ಕೋರಬಹುದು ಎಂದೂ ನಿರೀಕ್ಷಿಸಿದ್ದೆ. ಆದರೆ ಬಿಜೆಪಿಯವರ ನಿಜ ಬಣ್ಣ ಬಯಲಾಗಿದೆ. ಅವರಿಗೆ ಬೇಕಿರುವುದು ಕೇವಲ ಅಗ್ಗದ ಪ್ರಚಾರ, ಅಭಿವೃದ್ಧಿ ಆಧಾರಿತ ಚರ್ಚೆಯಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಕುಟುಕಿದ್ದಾರೆ. ಮಾಡಿದ್ದಾರೆ.

ಇದಕ್ಕೆ ಮುನ್ನ ಮತ್ತೊಂದು ಟ್ವೀಟ್ ಮಾಡಿದ್ದ ಅವರು, ‘ಬಿಜೆಪಿನಾಯಕರ 'ಅಹೋರಾತ್ರಿ' ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ
ಕಚೇರಿಗೆ ಮುತ್ತಿಗೆಯ ಅವಶ್ಯ ಇರಲಿಲ್ಲ. ಜಿಂದಾಲ್, ಬರ ಪರಿಹಾರ, ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ.

ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ದ’ ಎಂದೂ ಆಹ್ವಾನ ನೀಡಿದ್ದರು.

ಜಿಂದಾಲ್‌ಗೆ ಭೂಮಿ ಕೊಡುವುದು ಸರಿಯಲ್ಲ: ಹೊರಟ್ಟಿ
ವಿಜಯಪುರ:
‘ಮೈಸೂರು–ಬೆಂಗಳೂರಿನಲ್ಲಿ 10 ಎಕರೆ ಭೂಮಿ ನೀಡಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಿ ಸಾವಿರಾರು ಎಕರೆ ಜಮೀನು ಜಿಂದಾಲ್‌ಗೆ ಬಿಡುತ್ತಾರೆ. ಇದು ಈ ಭಾಗದ ಜನಪ್ರತಿನಿಧಿಗಳ ಬೇಜವಾಬ್ದಾರಿ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಈ ಭಾಗಕ್ಕೆ ಪ್ರಾತಿನಿಧ್ಯ ಕೊಡುವ ಪದ್ಧತಿಯನ್ನೇ ಕೈ ಬಿಡಲಾಗಿದೆ. ಇಷ್ಟು ಸಾಲದೆಂಬಂತೆ ಈ ಭಾಗದ ಸಾವಿರಾರು ಎಕರೆ ಭೂಮಿಯನ್ನು ಜಿಂದಾಲ್‌ಗೆ ಮಾರಾಟ ಮಾಡುವುದು ಸರಿಯಲ್ಲ. ರೈತರ ಭೂಮಿಯನ್ನು ಸರ್ಕಾರವೇ ಇಟ್ಟುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಐಎಂಎ ಬಹುಕೋಟಿ ಪ್ರಕರಣದಲ್ಲಿ ಸಚಿವರು ಭಾಗಿ ಆಗಿದ್ದಾರೆಂಬ ಆರೋಪ ಮಾಡಲಾಗುತ್ತಿದೆ. ಅಂತಿಮ ತೀರ್ಮಾನ ಆಗುವವರೆಗೂ ಏನೂ ಹೇಳಲು ಆಗುವುದಿಲ್ಲ. ತನಿಖೆ ಆದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ’ ಎಂದು ಹೇಳಿದರು.

ಜೈಲುಗಳನ್ನು ಸಿದ್ಧ ಮಾಡಿಕೊಳ್ಳಿ: ಈಶ್ವರಪ್ಪ
ಕೊಪ್ಪಳ:
'ಜೈಲು ತುಂಬಲು ನಾವು ತಯಾರಿದ್ದೇವೆ. ಕುಮಾರಸ್ವಾಮಿಯವರೇ, ನೀವು ಜೈಲುಗಳನ್ನು ಸಿದ್ಧಪಡಿಸಿಕೊಳ್ಳಿ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸಂಸದ ಸಂಗಣ್ಣ ಕರಡಿ ಅವರ ಅಭಿನಂದನಾ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ರಾಜ್ಯ ಸರ್ಕಾರವು ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ’ ಎಂದರು.

‘ರಾಜ್ಯದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಜೆಪಿ ಎಂದಿಗೂ ಬಿಡುವುದಿಲ್ಲ. ನಮ್ಮನ್ನು ಬಂಧಿಸಿದರೂ ರಾಜ್ಯದಲ್ಲಿರುವ ಎಲ್ಲ ಜೈಲನ್ನು ಭರ್ತಿ ಮಾಡುತ್ತೇವೆ. ನಮ್ಮ ಆಸ್ತಿ ನಮಗೆ ಉಳಿಯಬೇಕು’ ಎಂದರು.

‘ಜಿಂದಾಲ್‌ಗೆ ನೀಡಿದ ಭೂಮಿಯನ್ನು ತಕ್ಷಣ ವಾಪಸ್‌ ಪಡೆಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವ ಚಿಂತನೆ ಇದೆ’ ಎಂದರು.

‘ಸಚಿವ ಡಿ.ಕೆ.ಶಿವಕುಮಾರ ಅವರು ಕನಕಪುರದಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟ ಮಾಡಲಿ. ರಾಜ್ಯದ ಆಸ್ತಿ ಮಾರಾಟ ಮಾಡುವ ಅಧಿಕಾರವನ್ನು ಅವರಿಗೆ ಯಾರು ಕೊಟ್ಟರು? ವಿಧಾನಸೌಧವನ್ನೇ ಮಾರಾಟ ಮಾಡುವ ಜನರಿದ್ದಾರೆ’ ಎಂದು ಟೀಕಿಸಿದರು.

*
ಜಿಂದಾಲ್‌ವಿಚಾರದಲ್ಲಿ ಬಿಜೆಪಿ ಹೋರಾಟ ನೋಡುತ್ತಿದ್ದೇನೆ. ಸ್ವಲ್ಪ ಮನೋರಂಜನೆ ಪಡೆಯೋಣ ಅಂತ ಸುಮ್ಮನಿದ್ದೇನೆ. ಜಿಂದಾಲ್‌ಗೆ ವಿಷಯದಲ್ಲಿ ಏನೆಲ್ಲ ಆಗಿದೆ ಎಂಬುದೂ ಗೊತ್ತಿದೆ.
-ಎಚ್.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

*
ಮುಖ್ಯಮಂತ್ರಿ ಜತೆ ಮಾತನಾಡುವುದಕ್ಕೆ ಏನಿದೆ? ನಾವು ಮಂಡಿಸಿರುವ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಅವರು ಮೊದಲು ಮಾಡಲಿ.
-ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT