ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ದಕ್ಷಿಣ ಭಾರತ ಪ್ರಚಾರ ಬೈಠಕ್‌: ದಕ್ಷಿಣ ಗೆಲ್ಲಲು ಬಿಜೆಪಿ ತಂತ್ರ

ಬೈಠಕ್‌ನಲ್ಲಿ ವಿಸ್ತೃತ ಚರ್ಚೆ
Last Updated 15 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ರಣತಂತ್ರ ರೂಪಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಉಪಸ್ಥಿತಿಯಲ್ಲಿ ಬುಧವಾರ ರಾತ್ರಿ ನಡೆದ ಆರ್‌ಎಸ್‌ಎಸ್‌ ದಕ್ಷಿಣ ಭಾರತ ಪ್ರಚಾರ ಬೈಠಕ್‌ನಲ್ಲಿ ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ನೆಲೆಯನ್ನು ಗಟ್ಟಿಗೊಳಿಸುವ ಕುರಿತು ವಿಸ್ತೃತ ಚರ್ಚೆ ನಡೆದಿದೆ.

ಕೇರಳವನ್ನೇ ಗುರಿಯಾಗಿ ಇಟ್ಟುಕೊಳ್ಳಲಾಗಿದ್ದು, ಶಬರಿಮಲೆ ವಿಷಯದಲ್ಲಿ ಕೇರಳದ ಕಮ್ಯುನಿಸ್ಟ್‌ ಸರ್ಕಾರ ನಡೆದುಕೊಂಡ ರೀತಿಯನ್ನೇ ಪ್ರಮುಖ ವಿಷಯವನ್ನಾಗಿ ಮಾಡಲು ನಿರ್ಧರಿಸಲಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಜಾರಿಗೆ ಉತ್ಸಾಹ ತೋರಿದ ಕೇರಳ ಸರ್ಕಾರ, ಹಿಂದೂಗಳ ಭಾವನೆಗೆ ಸ್ಪಂದಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿಲ್ಲ. ಇದೇ ವಿಷಯವನ್ನು ಮುಂದಿಟ್ಟುಕೊಂಡು, ಕೇರಳದಲ್ಲಿ ಬಿಜೆಪಿ ನೆಲೆಯನ್ನು ವಿಸ್ತರಿಸಲು ಕಾರ್ಯಯೋಜನೆ ರೂಪಿಸುವಂತೆ ಬಿಜೆಪಿ ಅಧ್ಯಕ್ಷರಿಗೆ ಆರ್‌ಎಸ್‌ಎಸ್‌ ಪ್ರಮುಖರು ಸಲಹೆ ನೀಡಿದ್ದಾರೆ.

ಶಬರಿಮಲೆ ವಿಷಯದಲ್ಲಿ ತಳೆದಿರುವ ನಿಲುವಿನಿಂದ ಬಿಜೆಪಿಗೆ ಸಾಕಷ್ಟು ಲಾಭವಾಗುತ್ತಿದೆ. ಹಾಗಾಗಿ ಹಿಂದೂಗಳ ಭಾವನೆಯನ್ನು ರಕ್ಷಿಸುವುದರ ಜತೆಗೆ ಕೇರಳ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸುವ ಕೆಲಸವೂ ಆಗಬೇಕು ಎಂಬ ಮಾತುಗಳು ಕೇಳಿ ಬಂದಿವೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟದಿಂದ ಹೊರಹೋಗಿದ್ದು, ಅಲ್ಲಿಯೂ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಇದಕ್ಕಾಗಿ ಸೂಕ್ತ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು. ತಮಿಳುನಾಡು, ತೆಲಂಗಾಣದಲ್ಲಿಯೂ ಪಕ್ಷದ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ಇದೆಲ್ಲವನ್ನೂ ಹಿಂದುತ್ವದ ಆಧಾರದಲ್ಲಿಯೇ ಕಾರ್ಯಗತಗೊಳಿಸಲು ಸಂಘದ ಪ್ರಮುಖರು ಸೂಚನೆ ನೀಡಿದ್ದಾರೆ.

ರಾಮಮಂದಿರ ಆಗಲೇಬೇಕು: ಪ್ರಮುಖವಾಗಿ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಂದೂಗಳಿಗೆ ಭಾವನಾತ್ಮಕ ವಿಷಯವಾಗಿರುವ ರಾಮಮಂದಿರ ನಿರ್ಮಾಣವನ್ನು 2019 ರ ಲೋಕಸಭೆ ಚುನಾವಣೆಗೂ ಮೊದಲೇ ಕಾರ್ಯರೂಪಕ್ಕೆ ತರಬೇಕು ಎನ್ನುವ ಒತ್ತಾಯವನ್ನು ಅಮಿತ್‌ ಶಾ ಮೂಲಕ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ.

ಸಂಘದ ಪ್ರಮುಖರ ಸಲಹೆಗಳನ್ನು ಆಲಿಸಿದ ಅಮಿತ್‌ ಶಾ, ರಾಮಮಂದಿರ ಸೂಕ್ಷ್ಮ ವಿಷಯವಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡಬೇಕಾಗಿದೆ. ಈ ಕುರಿತು ವರಿಷ್ಠರ ಜತೆ ಚರ್ಚಿಸಿ, ಲೋಕಸಭೆ ಚುನಾವಣೆಗೂ ಮುನ್ನವೇ ಸ್ಪಷ್ಟ ನಿರ್ಧಾರಕ್ಕೆ ಬರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಆರ್‌ಎಸ್‌ಎಸ್‌ ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್‌ನ ಸರ ಕಾರ್ಯವಾಹ ಭಯ್ಯಾಜಿ ಸುರೇಶ್‌ ಜೋಷಿ, ಮುಕುಂದ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ನಾಲ್ಕು ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬಿಎಸ್‌ವೈ ಬದಲಾವಣೆ: ಸ್ಪಷ್ಟ ನಿರ್ಧಾರವಿಲ್ಲ

ಬೈಠಕ್‌ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುವ ಕುರಿತು ಪ್ರಸ್ತಾಪವಾಯಿತು.

ಆದರೆ, ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರಧಾನಿ ಜತೆ ಚರ್ಚಿಸಿದ ನಂತರ ಈ ನಿಟ್ಟಿನಲ್ಲಿ ಮುಂದುವರಿಯುವುದಾಗಿ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

‘ಗುರುಸ್ವಾಮಿ’ಗಳ ಸಂಘಟನೆಗೆ ಶಾ ಗುರಿ

ಬೆಂಗಳೂರು: ಅಯೋಧ್ಯೆ ಮಾದರಿಯಲ್ಲಿ ಶಬರಿಮಲೆ ಹೋರಾಟವನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಿರುವ ಬಿಜೆಪಿ ಇದಕ್ಕೆ ಪೂರ್ವಭಾವಿಯಾಗಿ ‘ಗುರುಸ್ವಾಮಿ’ಗಳನ್ನು ಸಂಘಟಿಸಲು ಮುಂದಾಗಿದೆ.

ಮಂಗಳೂರಿನಲ್ಲಿ ಬುಧವಾರ ತಡರಾತ್ರಿ ಅಮಿತ್ ಶಾ ಅವರು ನಡೆಸಿದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.

ಅಯ್ಯಪ್ಪಸ್ವಾಮಿ ಭಕ್ತರು ಕೇರಳದಲ್ಲಿ ಮಾತ್ರವಲ್ಲದೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಬರಿಮಲೆ ವಿಷಯದಲ್ಲಿ ಜಾಣತನದ ಹೆಜ್ಜೆ ಇಟ್ಟರೆ ಮೂರು ರಾಜ್ಯಗಳಲ್ಲೂ ಪಕ್ಷವನ್ನು ಬಲಗೊಳಿಸಬಹುದು. ಅಯ್ಯಪ್ಪ ಭಕ್ತರನ್ನು ಸಂಘಟಿಸುವ ಮುನ್ನ ಅವರಿಗೆ ದೀಕ್ಷೆ ನೀಡಿ, ಮುನ್ನಡೆಸುವ ‘ಗುರುಸ್ವಾಮಿ’ಗಳನ್ನು ಸಂಘಟಿಸಿದರೆ ಪಕ್ಷಕ್ಕೆ ಶಾಶ್ವತವಾಗಿ ಭದ್ರ ನೆಲೆ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಸೂಕ್ತ ಎಂಬ ಸಲಹೆ ಬಂದಿತು ಎಂದು ಮೂಲಗಳು ತಿಳಿಸಿವೆ.

ಅಯ್ಯಪ್ಪ ಭಕ್ತರು ಎಲ್ಲಾ ಪಕ್ಷಗಳಲ್ಲೂ ಗುರುತಿಸಿಕೊಂಡಿದ್ದಾರೆ. ಭಾವನಾತ್ಮಕ ವಿಷಯದಲ್ಲಿ ಭಕ್ತರನ್ನು ಸೆಳೆಯುವುದು ಸುಲಭ. ಇದಕ್ಕೆ ಪೂರಕವಾಗಿ ಗುರುಸ್ವಾಮಿಗಳ ಸಮಾವೇಶ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ಮುಖ್ಯಾಂಶಗಳು

* ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಪ್ರಮುಖರು ಭಾಗಿ

* ತಡರಾತ್ರಿವರೆಗೆ ಅಮಿತ್‌ ಶಾ ಚರ್ಚೆ

* ಬಿಜೆಪಿಗೆ ಮತ್ತೊಮ್ಮೆ ಅಧಿಕಾರ: ಆರ್‌ಎಸ್‌ಎಸ್‌ ವಿಶ್ವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT