ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Last Updated 9 ಜುಲೈ 2019, 13:02 IST
ಅಕ್ಷರ ಗಾತ್ರ

ಬೀದರ್: ರಾಜ್ಯದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದ ಕಾರಣ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಮ್ಮಿಶ್ರ ಸರ್ಕಾರ ಅಸ್ಥಿರವಾಗಿದೆ. ಶಾಸಕರು, ಸಚಿವರು ಪದೇ ಪದೇ ರಾಜೀನಾಮೆ ನೀಡುವ ಬೆದರಿಕೆ ಒಡ್ಡುತ್ತಲೇ ಬಂದಿದ್ದಾರೆ ಎಂದು ದೂರಿದರು.

ಆಡಳಿತ ಯಂತ್ರ ನಿಷ್ಕ್ರೀಯಗೊಂಡಿದೆ. ಜನಸಾಮಾನ್ಯರ ಕೆಲಸ ಕಾರ್ಯಗಳು ನಿಂತು ಹೋಗಿವೆ. ಸರ್ಕಾರದ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಬರಗಾಲದಿಂದ ಜನ ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ರೈತರು ಸಂಕಷ್ಟದಲ್ಲಿ ಇದ್ದಾರೆ. ಇನ್ನೂ ಹಲವು ಜ್ವಲಂತ ಸಮಸ್ಯೆಗಳು ಉದ್ಭವಗೊಂಡಿವೆ. ಆದರೆ, ಮುಖ್ಯಮಂತ್ರಿ ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಆಡಳಿತ ಪಕ್ಷಗಳ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರಸಿಂಗ್ ಠಾಕೂರ್, ಬಾಬುರಾವ್ ಕಾರಬಾರಿ, ಜಯಕುಮಾರ ಕಾಂಗೆ, ಸೋಮನಾಥ ಪಾಟೀಲ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಮುಖಂಡರಾದ ಗುರುನಾಥ ಜ್ಯಾಂತಿಕರ್, ರಾಜು ಚಿದ್ರಿ, ಜಗನ್ನಾಥ ಬಿ. ಪಾಟೀಲ, ಹಣಮಂತ ಬುಳ್ಳಾ, ಸಂಗಮೇಶ ನಾಸಿಗಾರ, ಬಸವರಾಜ ಪವಾರ್, ಸುಭಾಷ ಮಡಿವಾಳ, ಚಂದ್ರಶೇಖರ ಗಾದಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT