ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನ ಗಾನ, ಸೂಫಿಯ ನಾದ

ಉಧೋ, ಉಧೋ ಯಲ್ಲಮ್ಮ ದೇವಿ, ನಿನಗ ನಮೋ ನಮೋ
Last Updated 27 ಅಕ್ಟೋಬರ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ಜಾನಪದ ಮತ್ತು ಸೂಫಿ ಗೀತಗಾಯನ, ಮಕ್ಕಳು ಕಥೆ ಹೇಳುವ ಹಾಗೂ ಕಥನ ಕಟ್ಟುವ ಕಾರ್ಯಾಗಾರ, ಓದಿದ ಪುಸ್ತಕವನ್ನು ಬರೆದ ಲೇಖಕರೊಂದಿಗಿನ ನೇರ ಮಾತುಕತೆ, ಇಷ್ಟದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಸಾಹಿತ್ಯಾಸಕ್ತರನ್ನು ಸೆಳೆದವು.

‘ಉಧೋ, ಉಧೋ ಯಲ್ಲಮ್ಮ ದೇವಿ, ನಿನಗ ನಮೋ ನಮೋ ತಾಯಿ’ ಎಂಬ ಗೀತೆಯನ್ನು ಕಲಾವಿದರು ನಡುಮಧ್ಯಾಹ್ನದ ಬಿಸಿಲಲ್ಲಿ ಹಾಡುತ್ತ, ಸೇರಿದ್ದ ಜನರ ಮೇಲೆ ಜಾನಪದದ ಸಿಂಚನ ಮಾಡಿದರು. ರೇಖಾ ಭಾರಧ್ವಾಜ್ ಸಂಜೆ ಹಾಡಿದ ಸೂಫಿ ಸಾಲುಗಳನ್ನು ಕೇಳಿದವರು ತಲೆದೂಗಿದರು, ಕರತಾಡನ ಮಾಡಿದರು.

ಮಕ್ಕಳಿಗಾಗಿಯೇ ಉತ್ಸವದ ಉಪ ವೇದಿಕೆಗಳಲ್ಲಿ ಕಥೆಗಳನ್ನು ಓದುವ ಹಾಗೂ ಕಟ್ಟುವ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಬೋರ್ಡ್‌ಗೇಮ್‌ಗಳಲ್ಲಿ ಚಿತ್ರಗಳನ್ನು ಜೋಡಿಸುತ್ತ, ತಮ್ಮ ಕಲ್ಪನೆಗೆ ನಿಲುಕಿದ ಕಥಾಹಂದರವನ್ನು ಪುಟಾಣಿಗಳು ನಲ್ನುಡಿಯಲ್ಲಿ ಬಿಚ್ಚಿಟ್ಟರು.

ಇನ್‌ಸ್ಕ್ರಿಪ್‌ಷನ್ಸ್‌ ಸ್ಟೋನ್ಸ್‌ ಆಫ್‌ ಬೆಂಗಳೂರು ಸಮೂಹದ ಉದಯಕುಮಾರ್‌ ಪಿ.ಎಲ್‌., ‘ಕ್ರಿ.ಶ.890ರ ಬೇಗೂರು ಶಾಸನ ಮತ್ತು ಕ್ರಿ.ಶ.750ರ ಹೆಬ್ಬಾಳದ ಶಿಲಾಶಾಸನಗಳ ಪ್ರತಿಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಆ ಮೂಲಕ ನಗರದ ಪ್ರದೇಶಗಳ ಪ್ರಾಚೀನತೆಯನ್ನು ಆಸಕ್ತರಿಗೆ ಹರುವಿದರು. ಶಾಸನಗಳ ಉಳಿವಿನ ಅಗತ್ಯತೆ ತಿಳಿಸಿದರು.

ಕೆನಾ ಸಮೂಹದ ಯುವಕರು ಎಂಟು ಹಳೆಯ ಟೆಲಿವಿಷನ್‌ಗಳನ್ನು ಜೋಡಿಸಿ ತಯಾರಿಸಿದ ಕಲಾಕೃತಿಯಲ್ಲಿ ಗಾಂಧೀಜಿ ತತ್ವಗಳ ಚಿತ್ರಗಳನ್ನು ಬಿತ್ತರಿಸುತ್ತ, ಅದರ ಸಾರಾಂಶವನ್ನು ಆಸಕ್ತರಿಗೆ ಹೇಳಿದರು.

ಸಾಹಿತ್ಯದ ಸಂತೆಗೆ ಬಂದಿದ್ದ ಆಸಕ್ತರು ಪುಸ್ತಕ ಅಂಗಡಿಗಳಲ್ಲಿ ಖರೀದಿ ಮಾಡಿದರು. ಮಳಿಗೆಗಳಲ್ಲಿ ಇದ್ದ ತಿನಿಸುಗಳನ್ನು ಬಾಯಿಗೆ ತುಂಬುತ್ತ, ಗೋಷ್ಠಿಗಳ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡರು.

₹15 ಲಕ್ಷದ ಕಮಲಾಬಾಯಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪ್ರದಾನ

ನ್ಯೂ ಇಂಡಿಯಾ ಫೌಂಡೇಷನ್‌ ಕೊಡಮಾಡುವ ಕಮಲಾಬಾಯಿ ಚಟ್ಟೋಪಾಧ್ಯಾಯ ಪ್ರಶಸ್ತಿಗೆ ರಾಜಕೀಯ ರಂಗದ ಒಳನೋಟಗಳನ್ನು ಒಳಗೊಂಡಿರುವ ‘ವೆನ್‌ ಕ್ರೈಮ್‌ ಪೇಯ್ಸ್‌: ಮನಿ ಅಂಡ್‌ ಮಸಲ್‌ ಇನ್‌ ಇಂಡಿಯನ್‌ ಪಾಲಿಟಿಕ್ಸ್‌’ ಕೃತಿ ಭಾಜನವಾಯಿತು. ಪ್ರಶಸ್ತಿಯು ₹15 ಲಕ್ಷ ಒಳಗೊಂಡಿದೆ.

ಕೃತಿಯ ಕರ್ತೃ ಮಿಲನ್‌ ವೈಷ್ಣವ್‌ ಅವರಿಗೆ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಆಧುನಿಕ ಭಾರತದ ಕುರಿತ ರಚನಾತ್ಮಕ ಪುಸ್ತಕಗಳಿಗೆ ಪ್ರಶಸ್ತಿ ಮೀಸಲಿಡಲಾಗಿದೆ. ಆಯ್ಕೆ ಸಮಿತಿಯ ಮುಂದೆ 60 ಕೃತಿಗಳಿದ್ದವು. ಅದರಲ್ಲಿ 6 ಕೃತಿಗಳು ಅಂತಿಮ ಹಂತಕ್ಕೆ ಆಯ್ಕೆ ಆಗಿದ್ದವು. ಕೊನೆಗೆ ರಾಜಕೀಯ ಅಪರಾಧಿಕರಣದ ಕುರಿತ ಕೃತಿ ಪ್ರಶಸ್ತಿ ಬಾಚಿಕೊಂಡಿತು’ ಎಂದು ಸಂಘಟಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT