ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮತ ಬ್ಯಾಂಕ್‌ಗಾಗಿ ಶಬರಿಮಲೆ ವಿವಾದ: ರಾಮಚಂದ್ರ ಗುಹಾ ವಿಶ್ಲೇಷಣೆ

ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ
Last Updated 27 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದಲ್ಲಿ ಬಲ ಹೆಚ್ಚಿಸಿಕೊಳ್ಳಲು ಕಣ್ಣಿಟ್ಟಿರುವ ಬಿಜೆಪಿಯ ಮತ ಬ್ಯಾಂಕ್‌ ರಾಜಕಾರಣದಿಂದಾಗಿ, ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ ಧಾರ್ಮಿಕ ಸುಧಾರಣೆ ವಿಚಾರವಾಗಿ ಉಳಿದಿಲ್ಲ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ‌‘ಭಾರತೀಯ ಸಮಾನತೆ– ದಾರಿ ಇದೆಯೇ’ ಎಂಬ ಕುರಿತು ವಿಚಾರ ಮಂಡಿಸಿದ ಅವರು ‘ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬಾಲ್ಯವಿವಾಹ, ಸತಿ ಪದ್ಧತಿ, ಬಹುಪತ್ನಿತ್ವ ವಿರುದ್ಧ ಕಾನೂನು ಜಾರಿಯಾಗದಿದ್ದರೆ ಅವುಗಳೂ ಮುಂದುವರಿಯುತ್ತಿದ್ದವು’ ಎಂದರು.

‘ಜಾತಿ ಹಾಗೂ ಲಿಂಗ ತಾರತಮ್ಯ ನಿರ್ಮೂಲನೆ ಮಾಡದೆ ಸಮಾನತೆ ಆಶಯ ಈಡೇರದು. ಮಹಾತ್ಮ ಗಾಂಧಿ, ಗೋಪಾಲಕೃಷ್ಣ ಗೋಖಲೆ, ಅಂಬೇಡ್ಕರ್‌, ನೆಹರೂ ಅವರಂತಹ ನಾಯಕರು ಇಂತಹ ತಾರತಮ್ಯ ನಿವಾರಣೆಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಆಗ ಅವರ ಹೋರಾಟ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು. ಏಕೆಂದರೆ ಆಗ ಮತ ರಾಜಕಾರಣ ಇರಲಿಲ್ಲ’ ಎಂದರು.

ಸಂವಿಧಾನದಲ್ಲಿ ದಲಿತರಿಗೆ, ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ಇನ್ನೂ ಇದು ಜಾರಿಯಾಗಿಲ್ಲ.
ಈಗಲೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಗ್ರಾಮೀಣ ಪ್ರದೇಶದ ದೇವಾಲಯಗಳಿಗೆ ದಲಿತರಿಗೆ ಪ್ರವೇಶ ಸಿಗುತ್ತಿಲ್ಲ. ಇಂತಹ ವೈರುಧ್ಯಗಳು ಕೊನೆಯಾಗಬೇಕು’ ಎಂದರು.

‘90 ವರ್ಷಗಳ ಹಿಂದೆ ಕೇರಳದಲ್ಲಿ ದಲಿತರಿಗೂ ದೇವಸ್ಥಾನಗಳಿಗೆ ಪ್ರವೇಶಾವಕಾಶ ಇರಲಿಲ್ಲ. ಇದು ಸಂಪ್ರದಾಯ ಹಾಗೂ ಆರಾಧನೆಗೆ ಸಂಬಂಧಿಸಿದ ವಿಚಾರ ಎಂಬ ಕಾರಣಕ್ಕೆ ಶೇ 99.8ರಷ್ಟು ಜನ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ನಾರಾಯಣಗುರು ಅವರು ಇದನ್ನು ಪ್ರಶ್ನಿಸಿದರು. ಹೋರಾಟದಿಂದಾಗಿ ದಲಿತರಿಗೆ ದೇವಾಲಯ ಪ್ರವೇಶದ ಅವಕಾಶ ಸಿಕ್ಕಿತು. ಈ ವಿಚಾರದಲ್ಲಿ ಮಹಿಳೆಯರು ದಲಿತರಂತೆ ಚಳವಳಿ ನಡೆಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ’ ಎಂದರು.

’ದೇವಸ್ಥಾನಕ್ಕೆ ಪ್ರವೇಶ ಪಡೆಯುವ ವಿಚಾರದಲ್ಲಿ ದಲಿತರು ಸ್ವಲ್ಪ ಮಟ್ಟಿಗಾದರೂ ಯಶಸ್ಸು ಗಳಿಸಿದ್ದಾರೆ. ಆದರೆ, ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ಬೆಳವಣಿಗೆ ನೋಡಿದಾಗ ಮಹಿಳೆಯರಿಗೆ ಈ ವಿಚಾರದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ತೋರುತ್ತಿದೆ' ಎಂದರು.

ಮೀ–ಟೂ ಅಭಿಯಾನಕ್ಕೆ ಬೆಂಬಲ: ‘ಮಹಿಳೆಯರು ಈಗಲೂ ಕುಟುಂಬದಲ್ಲಿ, ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರೈಲಿನಲ್ಲಿ, ಬಸ್‌ನಲ್ಲಿ, ಪತ್ರಿಕಾ ಕಚೇರಿಗಳಲ್ಲಿ ಎಲ್ಲ ಕಡೆಯೂ ಆತ್ಮಗೌರವಕ್ಕಾಗಿ, ಪದೋನ್ನತಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಇದೆ. ಹಾಗಾಗಿ ನಾನು # ಮೀ–ಟೂ ಅಭಿಯಾನವನ್ನು ಸಂಪೂರ್ಣ ಬೆಂಬಲಿಸುತ್ತೇನೆ’ ಎಂದು ಹೇಳಿದರು.

ಲಿಂಗ ಸೂಕ್ಷ್ಮತೆ ಒಳಗೊಂಡ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದರು.

‘ಚಂದ್ರನಂತಾ ಸುಂದ್ರ, ಮುಂದೆ ಹೋದನವ್ವಾ...’

‘ಮಹಿಳೆಯರ ದೃಷ್ಟಿಯಲ್ಲಿ ಗಂಡಸನ್ನು ವರ್ಣಿಸುವ ಸಾಹಿತ್ಯಿಕ ಪ್ರಯತ್ನಗಳು ಬಹಳ ಕಡಿಮೆ ಆಗಿವೆ’ ಎಂಬ ದೂರಿನೊಂದಿಗೆ ಕವಿತ ವಾಚನ ಆರಂಭಿಸಿದರು ಲೇಖಕಿ ಪ್ರತಿಭಾ ನಂದಕುಮಾರ್‌.

‘ಚಂದ್ರನಂತಾ ಸುಂದ್ರ/ಬಂದು ಮುಂದೆ ಹೋದನವ್ವಾ/ಕಂಡು ಆತನ ಮ್ಯಾಲೆ ನನ್ನ ಜೀವಾ ಜೀವಾ/ ದೀಪ ಹಚ್ಚಿದಂಗೆ ರೂಪಾ/ತಾಸಗಳಿಗಿ ಆರದು ನೆನಪ/ತಿದ್ದಿ ಹ್ಯಾಂಗೆ ಬರದಿದ್ದಾನೊ ಶಿವಾ ಶಿವಾ’ ಎಂದು ವಾಚಿಸಿದರು. ‘ಮುದರಿ ಒತ್ತಿ ಬತ್ತಿ ಸುತ್ತಿ/ಹತ್ತಿ ಕುದರಿ ತಿರವ್ಯಾನ ಪೇರಿ/ಕುದರಿ ಹತ್ತಿದಾರ ಸುಪಾಯ್‌ ಭರ್ತಿ ಭರ್ತಿ’ ಎಂಬ ಜಾನಪದದ ಸಾಲುಗಳು ಸಭಿಕರ ಚಿತ್ತ ಸೆಳೆದವು.

ಕವಯತ್ರಿ ಮಧು ರಾಣಿ, ‘ನೀನೆಂದರೆ.. ಇಂಪಾದ ಜೋಗುಳಕೆ ತಣಿದು ಎದೆಗವಚಿ/ ಮೊಲೆತೊಟ್ಟು ಕಚ್ಚಿ ನಿದ್ದೆಗೆ ಜಾರಿದ ಕೂಸು/ ಭುಜಕೆ ಭುಜ ತಗುಲಿಸಿ ಕೂತರೂ ಬೇರಾರದೋ/ ಎದೆಗೆ ನೆಟ್ಟ ಕಂಗಳ ಕಳ್ಳ ಕನಸು, ನೀನೆಂದರೆ... ಒಂದೆಳೆ ರಾಜಕಾರಣ, ಒಂದು ಹನಿ ಗಮ್ಮತ್ತು/ ಒಂದರೆ ಗಂಟೆಯಲೇ ಬೆವರ ಕಸರತ್ತು/ ಒಂದಿಣುಕು ವೈಚಿತ್ರ್ಯ ಒಂದಷ್ಟು ಹಿಕಮತ್ತು/ ಒಂದು ಜನುಮಕಾಗುವಷ್ಟು ಪ್ರೀತಿ ಸಂಪತ್ತು’ ಎಂದು ತನ್ನವನ ಗುಣಗಾನದ ಸಾಲು ಓದಿದರು.

‘ಸಿ.ಎಂ. ಮನೆ ಕಾಂಪೌಂಡ್‌ ಹಾರುತ್ತಿದ್ದೆವು’
‘ಆಗ ಕುಮಾರಕೃಪಾ– ಕಾವೇರಿ ನಿವಾಸದ ನಡುವೆ ಮಾವಿನತೋಪು ಇತ್ತು. ನಾವು ಸಣ್ಣವರಿದ್ದಾಗ ಇಲ್ಲಿ ಮಾವಿನ ಹಣ್ಣುಗಳನ್ನು ಕದ್ದು ತಿನ್ನುತ್ತಿದ್ದೆವು. ಮುಖ್ಯಮಂತ್ರಿ ಮನೆಯಂಗಳದ ಕೊಳದಲ್ಲಿದ್ದ ಚಿನ್ನದ ಬಣ್ಣದ ಮೀನನ್ನು ನೋಡಲು ಕಾಂಪೌಂಡ್‌ ಹಾರಿ ಹೋಗುತ್ತಿದ್ದೆವು’

1960ರ ದಶಕದಲ್ಲಿ ಬೆಂಗಳೂರಿನಲ್ಲಿದ್ದ ಮುಕ್ತ ವಾತಾವರಣವನ್ನು ಹಿರಿಯ ಪತ್ರಕರ್ತ ಚಿದಾನಂದ ರಾಜಘಟ್ಟ ಅವರು ಕಟ್ಟಿಕೊಟ್ಟಿದ್ದು ಹೀಗೆ.

‘ವಿಧಾನಸೌಧದಿಂದ ಮರಳುತ್ತಿದ್ದ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ತಮ್ಮ ಮನೆಯ ಕೊಳದಲ್ಲಿ ಆಡುತ್ತಿದ್ದ ನಮ್ಮನ್ನು ಉದ್ದೇಶಿಸಿ, ‘ಓದಿಕೊಳ್ಳಿ ಹೋಗಿ‘ ಎಂದು ಗದರುತ್ತಿದ್ದ ದಿನಗಳು ಈಗಲೂ ನೆನಪಿನಂಗಳದಲ್ಲಿ ಹಚ್ಚಹಸುರಾಗಿವೆ’ ಎಂದು ಅವರು ಗತದಿನಗಳನ್ನು ಮೆಲುಕು ಹಾಕಿದರು.

‘ಭಾರತದಲ್ಲಿ ಉದಾರವಾದ ಇದೆಯೇ’ಕುರಿತ ಸಂವಾದದಲ್ಲಿ ಅನಿಸಿಕೆ ಹಂಚಿಕೊಂಡರು.

* ಭಾರತದಲ್ಲಿ ಮಹಿಳಾ ದೇವತೆಗಳಿದ್ದಾರೆ. ಆದರೆ, ಮಹಿಳೆಯರು ಅರ್ಚಕಿಯರಾಗಲು ಅವಕಾಶವಿಲ್ಲ. ಇದೆಂಥ ವಿಪರ್ಯಾಸ?

-ರಾಮಚಂದ್ರ ಗುಹಾ,ಇತಿಹಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT