ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಲಾಕ್‌ಡೌನ್‌ ನಡುವೆಯೂ ರಕ್ತ ನಿರ್ವಹಣೆ: ರೋಗಿಗಳಿಗೆ ನೆರವು

Last Updated 27 ಮೇ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ ಹಾಗೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆಯ ನಡುವೆಯೂ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗದಂತೆ ನಿರ್ವಹಿಸುವಲ್ಲಿ ಇಲ್ಲಿನ ಬಿಮ್ಸ್‌ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ಯಶಸ್ವಿಯಾಗಿದೆ.

ಮಾರಕ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಘೋಷಿಸಲಾಗಿದ್ದ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ರಕ್ತದಾನ ಶಿಬಿರಗಳನ್ನು ನಡೆಸುವುದಕ್ಕೆ ಅವಕಾಶವಿರಲಿಲ್ಲ. ಹೆಚ್ಚು ಜನರು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಬರೋಬ್ಬರಿ ತಿಂಗಳಿಗೂ ಹೆಚ್ಚು ಕಾಲ ಶಿಬಿರಗಳು ನಡೆದಿರಲಿಲ್ಲ. ಇದರಿಂದಾಗಿ, ಇಲ್ಲಿನ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ರಕ್ತದ ಕೊರತೆ ಉಂಟಾಗುವ ಆತಂಕ ಎದುರಾಗಿತ್ತು. ಆದರೆ, ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ಕೇಂದ್ರದವರು ಮಾಡಿದ್ದಾರೆ.

ಶಿಬಿರಗಳು ಇರಲಿಲ್ಲ:ಬಿಮ್ಸ್‌ನಲ್ಲಿರುವುದು ಸರ್ಕಾರಿ ಕೇಂದ್ರ. ಉಳಿದಂತೆ ಜಿಲ್ಲೆಯಲ್ಲಿ 6 ಖಾಸಗಿ ಬ್ಲಡ್‌ ಬ್ಯಾಂಕ್‌ಗಳಿವೆ. ಆಗಾಗ ಶಿಬಿರ ಆಯೋಜನೆ ಮಾಡಲಾಗುತ್ತಿತ್ತು. ಕೆಲವರು ಸ್ವಯಂಪ್ರೇರಣೆಯಿಂದ ಬಂದು ರಕ್ತ ದಾನ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಂಘಟನೆಯವರು ನಾಯಕರ ಹುಟ್ಟುಹಬ್ಬ, ಮಹಾತ್ಮರ ಜಯಂತಿ ಮೊದಲಾದ ಕಾರ್ಯಕ್ರಮಗಳ ಅಂಗವಾಗಿ ಶಿಬಿರ ಆಯೋಜಿಸುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಈ ವಿಷಯದಲ್ಲಿ ಸಂಘ–ಸಂಸ್ಥೆಗಳೂ ಹಿಂದೆ ಬಿದ್ದಿರಲಿಲ್ಲ. ಆದರೆ, ಕೋವಿಡ್‌–19 ಆತಂಕದ ನಡುವೆ ಶಿಬಿರಗಳು ಜರುಗಲಿಲ್ಲ. ಪರಿಣಾಮ, ಖಾಸಗಿ ರಕ್ತನಿಧಿ ಕೇಂದ್ರಗಳಿಂದ ಲಭ್ಯವಿರುವ ರಕ್ತವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪರಿಸ್ಥಿತಿ ನಿರ್ವಹಿಸುವ ಕಾರ್ಯವನ್ನು ಬಿಮ್ಸ್‌ ರಕ್ತನಿಧಿ ಕೇಂದ್ರ ಮಾಡಿದೆ.

ಜಿಲ್ಲೆಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ 13 ರಕ್ತ ಶೇಖರಣಾ ಕೇಂದ್ರಗಳಿದ್ದು, ಅವುಗಳ ಮೂಲಕ ತುರ್ತು ಅಗತ್ಯ ಇರುವವರಿಗೆ ರಕ್ತ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಲ್ಲಿಂದಿಲ್ಲಿಗೆ:‘ಲಾಕ್‌ಡೌನ್‌ನಿಂದಾಗಿ ಮಾರ್ಚ್‌ 25ರಿಂದ ಏಪ್ರಿಲ್‌ ತಿಂಗಳಿಡೀ ಶಿಬಿರಗಳನ್ನು ನಡೆಸಿರಲಿಲ್ಲ. ಸಾರ್ವಜನಿಕರು ಕೂಡ ದಾನಕ್ಕೆ ಮುಂದಾಗಿರಲಿಲ್ಲ. ಆದರೂ ರೋಗಿಗಳಿಗೆ ಕೊರತೆಯಾಗದಂತೆ ನಿರ್ವಹಿಸಿದ್ದೇವೆ. ರೋಗಿಗಳ ಕುಟುಂಬದವರು, ಬಂಧುಗಳಿಗೆ ಮನವರಿಕೆ ಮಾಡಿಕೊಟ್ಟು ಹಾಗೂ ಪ್ರೋತ್ಸಾಹ ನೀಡಿ ರಕ್ತ ಸಂಗ್ರಹಿಸಿ ತುರ್ತು ಅಗತ್ಯವಿರುವವರಿಗೆ ನೀಡಿದ್ದೇವೆ. ಖಾಸಗಿ ರಕ್ತನಿಧಿಯವರು ಶೇ 25ರಷ್ಟನ್ನು ಜಿಲ್ಲಾಸ್ಪತ್ರೆಗೆ ಕೊಡಬೇಕು ಎನ್ನುವ ನಿಯಮವಿದೆ. ಅದನ್ನು ಬಳಸಿಕೊಂಡಿದ್ದೇವೆ. ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾಸ್ಪತ್ರೆಯ ರಕ್ತನಿಧಿಯವರು ಕೂಡ ಸಹಕರಿಸಿದ್ದಾರೆ. ಇದಕ್ಕೆಂದೆ ಇರುವ ವಾಹನದಲ್ಲಿ ಅಲ್ಲಿಂದ ರಕ್ತ ತರಲಾಗಿತ್ತು’ ಎಂದು ರಕ್ತನಿಧಿ ಅಧಿಕಾರಿ ಡಾ.ಶ್ರೀದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಸ್ಪತ್ರೆ ರೋಗಿಗಳಿಗೆ ಮಾತ್ರವಲ್ಲದೆ 13 ಶೇಖರಣಾ ಕೇಂದ್ರಗಳ ಮೂಲಕ ಇತರ ಆಸ್ಪತ್ರೆಗಳಿಗೂ ಒದಗಿಸಿದ್ದೇವೆ. ಹೋದ ವಾರದಿಂದ ಶಿಬಿರಗಳನ್ನು ಪುನರಾರಂಭ ಮಾಡಿದ್ದೇವೆ. 130 ಯುನಿಟ್‌ಗಳಷ್ಟು ರಕ್ತ ಸಂಗ್ರಹವಾಗಿದೆ. ಅಂತರ ಕಾಯ್ದುಕೊಂಡು, ಪಿಪಿಇ (ವೈಯಕ್ತಿಕ ಸುರಕ್ಷಾ ಕವಚ) ಕಿಟ್‌ ಧರಿಸಿಕೊಂಡು ಸಂಗ್ರಹಿಸಲಾಗುತ್ತಿದೆ. ದಾನ ಮಾಡುವವರ ಪ್ರಯಾಣದ ಮಾಹಿತಿಯನ್ನು ಪಡೆದು ಮುಂದುವರಿಯಲಾಗುತ್ತಿದೆ. ನಿತ್ಯ ರೋಗಿಗಳಿಗೆ ಸಂಬಂಧಿಸಿದ ಸರಾಸರಿ 5–6 ಮಂದಿ ರಕ್ತ ಕೊಡುತ್ತಿದ್ದಾರೆ. ಸ್ವಯಂಸ್ಫೂರ್ತಿಯಿಂದ ಬಂದು ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ’ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ನಿಯಮಗಳ ಪ್ರಕಾರ, 18 ವರ್ಷದಿಂದ 60 ವರ್ಷ ವಯಸ್ಸಿನ ಆರೋಗ್ಯವಂತರು ರಕ್ತ ದಾನ ಮಾಡಬಹುದಾಗಿದೆ‌‌. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ: 0831– 2491408 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT