ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷಗಿರಿ ಸವಾರಿ; ಅಕ್ರಮಕ್ಕೆ ನೂರೆಂಟು ದಾರಿ!

ನಿಗಮ ಮಂಡಳಿಗಳು ನೂರಾರು, ಲಾಭಕ್ಕಿಂತ ನಷ್ಟವೇ ಜಾಸ್ತಿ– ಜನರ ಕಲ್ಯಾಣ ನಾಸ್ತಿ
Last Updated 17 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಮೈಸೂರು’ ಬ್ರ್ಯಾಂಡ್‌ ಹೆಸರಿನ ಉತ್ಪನ್ನಗಳನ್ನು ತಯಾರಿಸಿ ಕರ್ನಾಟಕದ ಹೆಮ್ಮೆಯನ್ನು ಜಗದಗಲ ಹರಡಲು ಕಾರಣವಾಗಿದ್ದ ಅನೇಕ ಕಾರ್ಖಾನೆಗಳು ರಾಜಕಾರಣಿಗಳು, ಅಧಿಕಾರಿಗಳ ದುರಾಸೆಯ ಪರಿಣಾಮವಾಗಿ ಇಂದು ನೆಲಕಚ್ಚಿವೆ. ಜನರ ಕಲ್ಯಾಣಕ್ಕಾಗಿ, ವಿವಿಧ ಸೌಲಭ್ಯಗಳನ್ನು ಒದಗಿಸಲು ರಚಿಸಿರುವ ನಿಗಮಗಳು ರಾಜಕೀಯ ನೇತಾರರ ಹಿಂಬಾಲಕರಿಗೆ ಆಶ್ರಯತಾಣಗಳಾಗಿವೆ. ನಿರ್ಲಕ್ಷ್ಯ–ಅತಿಯಾಸೆಯಿಂದ ಸೊರಗಿಹೋದ ನಿಗಮ–ಮಂಡಳಿ, ಪ್ರಾಧಿಕಾರಗಳ ಹಣೆಬರಹದ ಅನಾವರಣ ಇಂದಿನ ‘ಒಳನೋಟ’ದ ಹೂರಣ.

ಬೆಂಗಳೂರು: ನಿಗಮ–ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗುವುದೆಂದರೆ ಭೋಜನಕ್ಕೆ ಸಿದ್ಧರಾಗಿ ಊಟದೆಲೆಯ ಮುಂದೆ ಕುಳಿತಂತೆ ಎಂಬ ಕುಹಕದ ಮಾತು ಅವುಗಳ ಪಡಸಾಲೆಗಳಲ್ಲೇ ಹೊರಹೊಮ್ಮುತ್ತದೆ. ಸರ್ಕಾರಿ ಸಂಸ್ಥೆಗಳನ್ನು ಸದೃಢಗೊಳಿಸಲು ಬಂದ ರಾಜಕಾರಣಿಗಳು ಎಷ್ಟು ಹಸಿದಿರುತ್ತಾರೆ ಎನ್ನುವುದು ಇದರಿಂದ ಸ್ಪಷ್ಟ.

ಭೂಸ್ವಾಧೀನ ಮಾಡುವುದಿರಲಿ, ನಟ್‌ ಬೋಲ್ಟ್‌ ಖರೀದಿಯಿರಲಿ, ಕೊನೆಗೆ ಗುಜರಿ ಮಾರಾಟದಲ್ಲೂ ಹೇಗೆ ದುಡ್ಡು ಮಾಡಲಾಗುತ್ತದೆ ಎನ್ನುವುದನ್ನು ಇದುವರೆಗಿನ ಹಲವು ತನಿಖಾ ವರದಿಗಳು ಬಟಾಬಯಲುಗೊಳಿಸಿವೆ.

ವರ್ಷಾನುಗಟ್ಟಲೆ ಅಧಿಕಾರದಿಂದ ದೂರ ಇರುವ ರಾಜಕಾರಣಿಗಳು ನಿಗಮ– ಮಂಡಳಿ, ಪ್ರಾಧಿಕಾರಗಳಲ್ಲಿ ಅಧಿಕಾರ ಸ್ಥಾನ ಸಿಕ್ಕ ಕೂಡಲೇ ‘ಊಟದೆಲೆ’ ಕಾಣುತ್ತದೆ. ತೇಗಿದ ಮೇಲೂ ಅವರ ಹಸಿವು ತಣಿಯುವುದಿಲ್ಲ. ಇಂತಹ ‍ಪುನರ್ವಸತಿ ಕೇಂದ್ರಗಳನ್ನೇ ಹುಡುಕಿ ನಿಯೋಜನೆ ಮಾಡಿಸಿಕೊಂಡಿರುವ ಭ್ರಷ್ಟ ಅಧಿಕಾರಿಗಳು ಅಧ್ಯಕ್ಷರಿಗೆ ಒಳ ಮಾರ್ಗಗಳನ್ನು ಹೇಳಿಕೊಡುತ್ತಾರೆ.

ರಾಜ್ಯದಲ್ಲಿ ಪ್ರಮುಖವಾದ 60 ಸಾರ್ವಜನಿಕ ಉದ್ದಿಮೆಗಳಿವೆ. ಸಣ್ಣ–ಪುಟ್ಟವನ್ನೂ ಸೇರಿಸಿಕೊಂಡರೆ ಇವುಗಳ ಸಂಖ್ಯೆ ನೂರರ ಗಡಿ ದಾಟುತ್ತದೆ. ಬೆರಳೆಣಿಕೆಯಷ್ಟು ಉದ್ದಿಮೆಗಳು ಲಾಭ ತಂದುಕೊಟ್ಟರೆ, ಮಿಕ್ಕವುಗಳೆಲ್ಲ ರೋಗಗ್ರಸ್ತವಾಗಿವೆ. ಅದರಲ್ಲಿ ಹಲವು ಶಿಲಾಯುಗದ ಪಳೆಯುಳಿಕೆಯ ಸ್ವರೂಪ ತಾಳಿವೆ. ನೀರಿನ ಪಸೆಯೇ ಆರಿ ಹೋಗಿರುವ, ಎಷ್ಟೇ ಆಳಕ್ಕಿಳಿದರೂ ಪುನಶ್ಚೇತನವನ್ನೇ ಮಾಡಲಾಗದ ಕೊಳವೆ ಬಾವಿಗಳಂತಿರುವ ನಿಗಮ ಮಂಡಳಿಗಳ ದರ್ಬಾರು, ದುಂದುವೆಚ್ಚ ಗಮನಿಸಿದರೆ ದಿಗಿಲು ಹುಟ್ಟುತ್ತದೆ.

ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳಿವೆ. ಇವುಗಳು ಇತ್ತೀಚಿನ ವರ್ಷಗಳಲ್ಲಿ ನಷ್ಟದ ಸುಳಿಯಿಂದ ಹೊರಬಂದಿದ್ದೇ ಇಲ್ಲ. ಆದರೆ, ವರ್ಷಕ್ಕೆ ನೂರಾರು ಬಸ್‌ಗಳ ಖರೀದಿ ಭರಾಟೆ ನಿಂತಿಲ್ಲ. 10 ಬಸ್‌ ಖರೀದಿಸಿದರೆ ಒಂದು ಬಸ್‌ ಉಚಿತ ಎಂಬ ಒಪ್ಪಂದದ ಮಹಿಮೆ ಇದಂತೆ. ಹೀಗೆ, ನಿಗಮದ ಆಡಳಿತ ಚುಕ್ಕಾಣಿ ಹಿಡಿದವರೊಬ್ಬರು ಈಗ ಹತ್ತಾರು ಬಸ್‌ಗಳ ಮಾಲೀಕರು. ಬಸ್‌ಗಳನ್ನು ಗುಜರಿಗೆ ಹಾಕುವುದು ಇನ್ನೊಂದು ಬಗೆಯ ದಂಧೆ. ಹೊಸ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಬಂದಾಗಲೆಲ್ಲ ಗುಜರಿಗೆ ಹಾಕುವ ‘ಮಾರ್ಗಸೂಚಿ’ ಕೂಡ ಬದಲಾಗುತ್ತದೆ. ಅದರ ಸ್ಕ್ರ್ಯಾಪ್‌ ಐಟಂಗಳು ಲಕ್ಷಗಟ್ಟಲೆ ಮಾರಾಟವಾಗುತ್ತವೆ. ಅದಕ್ಕೆ ರಾಮನ ಲೆಕ್ಕ ಕೃಷ್ಣನ ಲೆಕ್ಕ ಇರುತ್ತದೆ.

ಸಚಿವ ಸ್ಥಾನ ಸಿಗದ ಶಾಸಕರ ಚಿತ್ತ ಮೊದಲು ಹೊರಳುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಡೆಗೆ. ಅಲ್ಲಿಯ ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂದು ಹತ್ತಾರು ಮಂದಿ ಸ್ಪರ್ಧೆ ಒಡ್ಡುತ್ತಾರೆ. ಕೊನೆಗೆ ಅದೃಷ್ಟ ಒಲಿಯುವುದು ಮುಖ್ಯಮಂತ್ರಿಯ ಆಪ್ತರಿಗೆ. ಬೆಂಗಳೂರು ಮಹಾನಗರದ ಜನರಿಗೆ ನಿವೇಶನ ಹಂಚುವ ಭಾರ ಹೆಗಲಿಗೆ ಏರಿಸಿಕೊಂಡ ಈ ಸಂಸ್ಥೆ ಈವರೆಗೆ ವಿವಾದಮುಕ್ತವಾಗಿ ಒಂದೇ ಒಂದು ನಿವೇಶನ ಹಂಚಿಲ್ಲ. ಡಿನೋಟಿಫಿಕೇಷನ್‌, ಬದಲಿ ನಿವೇಶನ ಹಂಚಿಕೆ ಸೇರಿದಂತೆ ಹತ್ತಾರು ಹಗರಣಗಳಿಂದ ನಿತ್ಯ ಸುದ್ದಿಯಾಗುತ್ತಿದೆ. ಕಳಂಕ ಮೆತ್ತಿಕೊಳ್ಳದೆ ಹೊರಬಂದ ಸಚಿವರು, ಅಧ್ಯಕ್ಷರು ಹಾಗೂ ಆಯುಕ್ತರನ್ನು ಹುಡುಕಲು ದುರ್ಬೀನೇ ಬೇಕಾದೀತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ಸಿಬಿಐವರೆಗೆ ಹೋಗಿದೆ. ಹಗರಣದ ಕೊಳೆ ಅಂಟಿಸಿಕೊಳ್ಳದ ಅಭಿವೃದ್ಧಿ ಪ್ರಾಧಿಕಾರಗಳು ಸಿಗುವುದು ಕಷ್ಟ. ಗೃಹ ಮಂಡಳಿಯಂತೂ ಹಗರಣಗಳ ಸರದಾರ. ಭೂಸ್ವಾಧೀನ, ಬದಲಿ ನಿವೇಶನ ಹಂಚಿಕೆ, ನಿವೇಶನ ಹಂಚಿಕೆಯ ಹಗರಣಕ್ಕೆ ಅಡಿಪಾಯ ಹಾಕಿಕೊಟ್ಟ ರಾಜಕಾರಣಿಗಳು ಈಗ ಮತ್ತಷ್ಟು ‘ಉನ್ನತ’ ಸ್ಥಾನಕ್ಕೆ ಹೋಗಿದ್ದಾರೆ.

ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಂಡ ಉದಾಹರಣೆಗಳೇ ಇಲ್ಲ. ಈ ಯೋಜನೆಗಳ ಹೆಸರಿನಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತದೆ. ‍ಪಾಲು ನಿಗದಿಪಡಿಸಿಯೇ ಟೆಂಡರ್‌ ಕರೆಯುವ ‍ಪರಿಪಾಠ ಬೆಳೆದಿದೆ. ₹100 ಕೋಟಿಯ ಯೋಜನೆಯ ಗಾತ್ರವನ್ನು ₹110 ಕೋಟಿಗೆ ಹೆಚ್ಚಿಸಿ ಟೆಂಡರ್‌ ಕರೆಯುವ ವ್ಯವಸ್ಥೆ ದಶಕದಿಂದ ಇದೆ. ಅದನ್ನು ಈಗ ಮತ್ತಷ್ಟು ಹಿಗ್ಗಿಸಲಾಗಿದೆ.

ಮೈಸೂರು ಮಿನರಲ್ಸ್‌ ಕಥೆ ಇನ್ನೊಂದು ಬಗೆಯದು. ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಈ ಸಂಸ್ಥೆ ಪೂರಕವಾಗಿ ಕೆಲಸ ಮಾಡಿದೆ ಎಂಬುದು ಜಗಜ್ಜಾಹೀರು. ಸಾವಿರಾರು ಕೋಟಿ ರೂಪಾಯಿ ಗಳಿಕೆ ಸಾಮರ್ಥ್ಯವಿದ್ದರೂ ಹಗರಣದ ಸುಳಿಯಲ್ಲಿ ಹೊರಬರಲು ಅದಕ್ಕೆ ಸಾಧ್ಯವಾಗಿಲ್ಲ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯನ್ನು (ಕೆಐಎಡಿಬಿ) ರಿಯಲ್‌ ಎಸ್ಟೇಟ್‌ ಸಂಸ್ಥೆ ಎಂದು ವ್ಯಂಗ್ಯವಾಡುವವರು ಇದ್ದಾರೆ. ಭೂಸ್ವಾಧೀನದ ಹೆಸರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ.

ವ್ಯವಸ್ಥೆಯ ಸುಧಾರಣೆ ಮಾಡುವ ಆಸೆಯಿಂದ ಬಂದ ಅಧ್ಯಕ್ಷರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಸೀಮಿತ ಅವಧಿಯಲ್ಲಿ ಕಾಯಕಲ್ಪದ ಪ‍್ರಯತ್ನ ಮಾಡಿ ಕೈಚೆಲ್ಲಿ ಹೋದವರೇ ಹೆಚ್ಚು. ಎರಡು–ಮೂರು ವರ್ಷಗಳ ಕಿರು ಅವಧಿಯಲ್ಲಿ ಸಾಧ್ಯವಿದ್ದಷ್ಟು ಬಾಚಿಕೊಳ್ಳಬೇಕು ಎಂದು ಬರುವವರೇ ಜಾಸ್ತಿ.

ಕರ್ಮಕಾಂಡದ ಇಣುಕು ನೋಟ

ನಿಗಮ–ಮಂಡಳಿಗಳು ಹೇಗೆ ಬಿಳಿಯಾನೆಯಾಗಿವೆ ಎನ್ನುವುದಕ್ಕೆ ಇಲ್ಲಿವೆ ಕೆಲವು ಉದಾಹರಣೆಗಳು:

1 ಮೈಸೂರು ಕಾಗದದ ಕಾರ್ಖಾನೆಯು ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಹೆಸರಿನಲ್ಲಿ ಆರು ನೌಕರರನ್ನು ಬೆಂಗಳೂರಿನಲ್ಲಿ ಉಳಿಸಿಕೊಳ್ಳಲು 2015ರಲ್ಲಿ ನಿರ್ಧರಿಸಿತು. ಇದಕ್ಕಾಗಿ ರಾಜಧಾನಿಯಲ್ಲಿ 5,500 ಚದರ ಅಡಿಯ ಕಟ್ಟಡವನ್ನು ಮೂರು ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಿತು. ಈ ಕಟ್ಟಡಕ್ಕೆ ತಿಂಗಳ ಬಾಡಿಗೆ ₹5.27 ಲಕ್ಷ ಅಷ್ಟೇ. ಬಾಡಿಗೆ ಪಾವತಿಗಾಗಿ ಮೂರು ವರ್ಷಗಳಲ್ಲಿ ಮಾಡಿದ ವಿವೇಚನಾರಹಿತ ವೆಚ್ಚ ₹1.28 ಕೋಟಿ! ರೋಗಗ್ರಸ್ತ ಕಾರ್ಖಾನೆ ಎಂದು ಪ್ರಮಾಣಪತ್ರ ಪಡೆದು ರಾಜ್ಯ ಸರ್ಕಾರದಿಂದ ದೊಡ್ಡ ಮೊತ್ತದ ನೆರವಿನ ಇಡುಗಂಟು ಪಡೆದ ಬಳಿಕವೂ ಕಾರ್ಖಾನೆಯ ಆಡಳಿತ ಮಂಡಳಿ ಪ್ರದರ್ಶಿಸಿದ ದೌಲತ್ತು ಇದು.

2 ಕರ್ನಾಟಕ ವಿದ್ಯುತ್‌ ನಿಗಮವು ಬೆಂಗಳೂರಿನ ಯಲಹಂಕದಲ್ಲಿ ತಲಾ 18 ಮೆಗಾವಾಟ್‌ ಸಾಮರ್ಥ್ಯದ ಎಂಟು ಘಟಕಗಳನ್ನು ಹೊಂದಿದೆ. ನಿಗಮವು ಕಾರ್ಯಾಚರಣೆ ನಡೆಸಲು ಪ್ರತಿವರ್ಷ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕಿದೆ. ಕಾರ್ಯಾಚರಣೆಗಾಗಿ 2011ರಲ್ಲಿ ಅನುಮತಿಯನ್ನೇ ಪಡೆಯಲಿಲ್ಲ. ಆದರೆ, ಇದೇ ಅವಧಿಯಲ್ಲಿ ₹14.50 ಕೋಟಿ ಮೊತ್ತದ ಬಿಡಿಭಾಗಗಳನ್ನು ಖರೀದಿಸಿತು. ಅದಾಗಲೇ, ಘಟಕದಲ್ಲಿ ₹12.07 ಕೋಟಿ ಮೊತ್ತದ ಬಿಡಿಭಾಗಗಳು ದಂಡಿಯಾಗಿ ಬಿದ್ದಿದ್ದವು. ತತ್ಪರಿಣಾಮವಾಗಿ, ಬಿಡಿಭಾಗಗಳು ರಾಶಿಯಾಗುತ್ತಾ ಹೋದವು. ಇದು ಮತ್ತೊಂದು ಅನುತ್ಪಾದಕ ವೆಚ್ಚಕ್ಕೆ ಉದಾಹರಣೆ.

3 ಬ್ರಿಟಿಷರ ಕಾಲದ ತಂತ್ರಜ್ಞಾನದ ಅನುಭವ ಹೊಂದಿರುವ 85 ವರ್ಷದ ಹಿರಿಯಾಳು ‘ಕರ್ನಾಟಕ ವಿದ್ಯುತ್‌ ಕಾರ್ಖಾನೆ’ಯು ಒಂದು ಕಾಲದಲ್ಲಿ ಟ್ರಾನ್ಸ್‌ಫಾರ್ಮರ್‌ ತಯಾರಿಕೆಗೆ ದೊಡ್ಡ ಹೆಸರು. ಇತ್ತೀಚಿನ ವರ್ಷಗಳಲ್ಲಿ ಆಡಳಿತಗಾರರು ಅದನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ. ಇದೀಗ ಅದೊಂದು ‘ಗಂಜಿಕೇಂದ್ರ’ವಾಗಷ್ಟೇ ಉಳಿದಿದೆ. ಸರ್ಕಾರದ ಅಧೀನದ ಯಾವುದೇ ವಿದ್ಯುತ್‌ ನಿಗಮಗಳು ಕಾರ್ಖಾನೆಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ರಾಜ್ಯದಲ್ಲಿ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ಸ್ಥಾಪನೆಗೆ ಆಸಕ್ತಿ ತೋರಲಾಯಿತೇ ಹೊರತು ನಿಗಮದ ಪುನಶ್ಚೇತನಕ್ಕೆ ಅಲ್ಲ. ಇಂಧನ ಹಾಗೂ ಜಲಸಂಪನ್ಮೂಲ ಇಲಾಖೆಗಳಿಗೆ ಸಂಬಂಧಿಸಿದ ನಿಗಮ ಹಾಗೂ ಮಂಡಳಿಗಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ ಹಾಗೂ ಸಂಬಂಧಿಸಿದ ಸಚಿವರು ಉಪಾಧ್ಯಕ್ಷರು.

ವರದಿಗಿಲ್ಲ ಮನ್ನಣೆ

ಸಾರ್ವಜನಿಕ ಉದ್ಯಮಗಳ ಮೇಲ್ವಿಚಾರಣೆಗೆ ರಾಜ್ಯ ಸರ್ಕಾರ 1980ರಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಬ್ಯೂರೋ ಸ್ಥಾಪಿಸಿತು. ರೋಗಗ್ರಸ್ತ, ನಷ್ಟಕ್ಕೀಡಾದ ಸಾರ್ವಜನಿಕ ಉದ್ದಿಮೆಗಳಿಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ 1990ರ ದಶಕದ ಅಂತ್ಯದಲ್ಲಿ ಐಎಎಸ್ ಅಧಿಕಾರಿ ಪಿ. ಪದ್ಮನಾಭನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ನಿಗಮ ಮಂಡಳಿ ಪುನಾರಚನೆ ಸಂಬಂಧ ಪ್ರತ್ಯೇಕ ನೋಡಲ್ ಏಜೆನ್ಸಿ ಸ್ಥಾಪಿಸಬೇಕು ಹಾಗೂ ಬಂಡವಾಳ ಹಿಂತೆಗೆತ ಘಟಕ ತೆರೆಯಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ‌

ಬಳಿಕ ಹೂಡಿಕೆ ಹಿಂತೆಗೆತ ಹಾಗೂ ಸಾರ್ವಜನಿಕ ಉದ್ಯಮನಗಳ ಸುಧಾರಣಾ ಇಲಾಖೆ (ಡಿಡಿಪಿಇಆರ್) ಸ್ಥಾಪಿಸಲಾಯಿತು. ನಂತರ 2005 ರಲ್ಲಿ ಈ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡಿ ಸಾರ್ವಜನಿಕ ಉದ್ಯಮಗಳ ಇಲಾಖೆ ಎಂದು ನಾಮಕರಣ ಮಾಡಲಾಯಿತು. ನಿಗಮಕ್ಕೆ 60 ಸಾರ್ವಜನಿಕ ನಿಗಮಗಳ ಹೊಣೆ ಇದೆ. ಸರ್ಕಾರದ ಅವಕೃಪೆಗೆ ಒಳಗಾದ ಅಧಿಕಾರಿಯನ್ನು ಇಲ್ಲಿಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಸಂಪ್ರದಾಯವನ್ನು ಆಯಾ ಸರ್ಕಾರಗಳು ಪಾಲಿಸುತ್ತಾ ಬಂದಿವೆ. ಇಲಾಖೆಯ ವೆಬ್‌ಸೈಟ್ ನೋಡಿದರೆ ಕಾರ್ಯವೈಖರಿಯ ದರ್ಶನವಾಗುತ್ತದೆ.

ಸಿಬ್ಬಂದಿ ಲಕ್ಷ ಲಕ್ಷ: ಲಾಭ ನಗಣ್ಯ

1.76 ಲಕ್ಷ ಜನರಿಗೆ ಉದ್ಯೋಗ ಕೊಟ್ಟು ಪೋಷಿಸುತ್ತಿರುವ ಸಾರ್ವಜನಿಕ ಉದ್ಯಮಗಳು ಬರುವ ಪ್ರತಿಫಲ ನಗಣ್ಯ. ಇವುಗಳ ಲಾಭ ಪ್ರಮಾಣ 0.01ನಷ್ಟು! ‌

ರಾಜ್ಯದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿ (2017ರ ಮಾರ್ಚ್‌ 31ಕ್ಕೆ ಕೊನೆಗೊಂಡ ವರ್ಷ) ಸಲ್ಲಿಸಲಾದ ಸಿಎಜಿ ವರದಿಯಲ್ಲಿ ಸಾರ್ವಜನಿಕ ಉದ್ಯಮಗಳ ಕಾರ್ಯವೈಖರಿ ಬಗ್ಗೆ ಬೆಳಕು ಚೆಲ್ಲಲಾಗಿದೆ. ಪ್ರತಿಫಲವಿಲ್ಲದೆ ಹೀಗೆ ಹೂಡಿಕೆಯಾಗುತ್ತಿರುವ ಮೊತ್ತ ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಏರುತ್ತಿದೆ.

2016 ಮಾರ್ಚ್‌ ಅಂತ್ಯಕ್ಕೆ ನಷ್ಟದ ಪ್ರಮಾಣ ₹ 1,570.21 ಕೋಟಿ ಇತ್ತು. ಅದಕ್ಕೆ ಕೋಟಿ ಹೋಲಿಸಿದರೆ ನಷ್ಟದ ಪ್ರಮಾಣದ ಶೇ 19.4ರಷ್ಟು ಕಡಿಮೆಯಾಗಿದೆ. ಆದರೆ, ಲಾಭದ ಪ್ರಮಾಣ ಬಹುತೇಕ ಅಷ್ಟೇ ಇದೆ.

ಕಾರ್ಯಸ್ಥಗಿತಗೊಳಿಸಿರುವ 12 ಕಂಪನಿಗಳು ಮತ್ತು ಕಾರ್ಯನಿರ್ವಹಿಸುತ್ತಿರುವ ಮೂರು ಕಂಪನಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಅಲ್ಲದೆ, ಎಂಟು ಕಾರ್ಯನಿರತ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಮತ್ತು ಒಂದು ಕಂಪನಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕದ ಹಿರಿಮೆ ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಷಿಂಗ್‌!

ಎಲ್ಲ ನಿಗಮ– ಮಂಡಳಿಗಳು ಅಥವಾ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ನಷ್ಟದಲ್ಲಿಲ್ಲ. ಕೆಲವು ಸಂಸ್ಥೆಗಳು ಲಾಭವನ್ನು ಮಾಡುತ್ತಿವೆ. ‘ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಷಿಂಗ್‌ ಲಿ’. (ಎಂಎಸ್‌‍ಪಿಎಲ್‌) ಸತತ ಲಾಭದಲ್ಲಿದೆ. 1937ರಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ಈ ಕಾರ್ಖಾನೆ, ದೇಶದ ಎಲ್ಲ ಚುನಾವಣೆಗೂ ಶಾಯಿ ಪೂರೈಸುತ್ತದೆ. ಅಷ್ಟೇ ಅಲ್ಲ, ಸುಮಾರು 27 ದೇಶಗಳ ಚುನಾವಣೆಗೆ ಅಗತ್ಯವಿರುವ ಶಾಯಿ ರಫ್ತು ಮಾಡುತ್ತಿದೆ. ಲಾಭಾಂಶದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರಕ್ಕೂ ಪಾವತಿಸುತ್ತಿದೆ.

ಕರ್ನಾಟಕದ ಹಿರಿಮೆಯಾಗಿರುವ ಈ ಕಾರ್ಖಾನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಿಗೆ ಬಳಿಯಲು ಬಣ್ಣವನ್ನೂ ಪೂರೈಸುತಿತ್ತು. ಆದರೆ,ಟೆಂಡರ್‌ ವ್ಯವಸ್ಥೆಯನ್ನು ಸಾರಿಗೆ ಸಂಸ್ಥೆ ಜಾರಿಗೆ ತಂದ ಬಳಿಕ ಬಣ್ಣ ಸರಬರಾಜು ಸ್ಥಗಿತಗೊಂಡಿದೆ. ‘ಸಕಾಲಕ್ಕೆ, ಉತ್ಕೃಷ್ಟ ಗುಣಮಟ್ಟದ ಬಣ್ಣ ಕೊಡುತ್ತಿರುವುದರಿಂದ ನಮ್ಮ ಕಾರ್ಖಾನೆ ಬಣ್ಣಕ್ಕೆ ವಿ‍ಪರೀತ ಬೇಡಿಕೆ ಇದೆ’ ಎಂದು ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಹೆಮ್ಮೆಯಿಂದಹೇಳುತ್ತಾರೆ.

ಕಾರ್ಖಾನೆಗೆ ಆಧುನಿಕ ಸ್ಪರ್ಷ ನೀಡಲು ₹ 21 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಇದು ಬೇರೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಿಗೆ ಮಾದರಿಯಾಗಿದೆ.

ಅಭಿಪ್ರಾಯಗಳು....

* ನಿಗಮ ಮಂಡಳಿಗಳನ್ನು ಪುನರ್ವಸತಿ ಕೇಂದ್ರಗಳೆಂದು ಕರೆಯುವುದೇ ತಪ್ಪು. ಹೆಚ್ಚಿನ ಸಂದರ್ಭಗಳಲ್ಲಿ ಅರ್ಹರನ್ನು ಹುಡುಕಿ ನೇಮಕ ಮಾಡಲಾಗುತ್ತದೆ. ಅವರಿಗೆ ಜವಾಬ್ದಾರಿಗಳಿವೆ. ನಿಗಮ ಮಂಡಳಿಗಳಿಗೆ ಇನ್ನಷ್ಟು ಬಲ ನೀಡಬೇಕು. ನಷ್ಟದಲ್ಲಿರುವ ಸಂಸ್ಥೆಗಳಿಗೆ ನೆರವು ನೀಡಬೇಕು.

–ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

* ಈಗಾಗಲೇ ಶೇ 50ರಷ್ಟು ನಿಗಮ ಮಂಡಳಿಗಳು ಅನಾಥಾಶ್ರಮದಂತೆ ಆಗಿವೆ. ಸಚಿವ ಸ್ಥಾನ ಸಿಗದ ಅತೃಪ್ತರನ್ನು ಹಾಗೂ ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಇಲ್ಲಿಗೆ ನೇಮಕ ಮಾಡಲಾಗುತ್ತದೆ. ಇವುಗಳು ಅತೃಪ್ತರ ತಾಣಗಳಾಗಿವೆ. ಇದರಿಂದ ಸರ್ಕಾರದ ಘನತೆ ಪಾತಾಳಕ್ಕೆ ಇಳಿಯುತ್ತಿದೆ. ರಾಜಕೀಯ ನೇಮಕಾತಿ ಕಡಿಮೆ ಮಾಡಿ ಅರ್ಹರನ್ನು ನೇಮಕ ಮಾಡಬೇಕು.

–ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

*ನಿಗಮ– ಮಂಡಳಿಗಳಿಗೆ ರಾಜಕೀಯ ನೇಮಕಾತಿ ಅನಿವಾರ್ಯ. ಆದರೆ, ‘ಹುಲ್ಲುಗಾವಲು’ ಆಗಿರುವ ಅವುಗಳ

ನ್ನು ಲಾಭದಾಯಕವಾಗಿ ನಡೆಯುವಂತೆ ಮಾಡಬೇಕು. ಹೊಣೆಗಾರಿಕೆ ನಿಗದಿಪಡಿಸಿ, ಖಾಸಗಿಯವರ ಜೊತೆ ಸ್ಪರ್ಧೆಗಿಳಿಯುವಂತೆ ನೋಡಿಕೊಳ್ಳಬೇಕು. ಕಡಿಮೆ ದರ ಮತ್ತು ಗುಣಮಟ್ಟ ಕಾಯ್ದುಕೊಂಡರೆ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಉತ್ಪನ್ನಗಳಿಗೂ ಬೇಡಿಕೆ ಸೃಷ್ಟಿಯಾಗುತ್ತದೆ

-ಎ.ಟಿ. ರಾಮಸ್ವಾಮಿ, ಜೆಡಿಎಸ್‌ ಶಾಸಕ, ಅರಕಲಗೂಡು

ಇಂ‘ಧನ’ ತುಂಬುವುದು ಹೇಗೆ?

ರಸ ಕಳೆದುಕೊಂಡು ಅಸ್ಥಿ‍ಪಂಜರವಾಗಿರುವ ನಿಗಮ–ಮಂಡಳಿಗಳ ಸಂಖ್ಯೆ ದೊಡ್ಡದಿದೆ. ರಾಜಕೀಯ ಇಚ್ಚಾಶಕ್ತಿ ಇದ್ದರೆ ಇವುಗಳಿಗೆ ಶಕ್ತಿ ತುಂಬಲು ಸಾಧ್ಯ.

* ಶಾಲಾ ವಿದ್ಯಾರ್ಥಿಗಳು ಹಾಗೂ ಸರ್ಕಾರದ ಸಿಬ್ಬಂದಿಗೆ ಸಮವಸ್ತ್ರ ಪೂರೈಸುವ ಹೊಣೆಯನ್ನುಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ವಹಿಸಬಹುದು. ಇದರಿಂದ ಸಾವಿರಾರು ಉದ್ಯೋಗ ಸೃಜಿಸುವುದರ ಜೊತೆಗೆ ನೇಕಾರರ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ನೀಡಬಹುದು.

* ಎಣ್ಣೆ ಬೀಜ ನಿಗಮದ ಉತ್ಪನ್ನಗಳಾದ ಶೇಂಗಾ, ಕೊಬ್ಬರಿ ಹಾಗೂ ಸೂರ್ಯಕಾಂತಿ ಅಡುಗೆ ಎಣ್ಣೆಗಳ ಬಗ್ಗೆ ಮೆಚ್ಚುಗೆ ಮಾತಿದೆ. ಸರ್ಕಾರ ಈ ಉತ್ಪನ್ನಗಳನ್ನು ಖರೀದಿಸಿ ಮರುಜೀವ ನೀಡಲು ಸಾಧ್ಯ.

* ಸರ್ಕಾರಿ ಕಚೇರಿ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಪೀಠೋಪಕರಣ ಒದಗಿಸುವ ಜವಾಬ್ದಾರಿಯನ್ನು ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮಕ್ಕೆ ವಹಿಸಬಹುದು.

* ಕುಕ್ಕುಟ ಅಭಿವೃದ್ಧಿ ನಿಗಮಕ್ಕೆ ಹೊಸ ರೂಪ ನೀಡಿ ಉದ್ಯಮದ ವ್ಯಾಪ್ತಿಯನ್ನು ವಿಸ್ತಾರ ಮಾಡಬಹುದು. ಕೆಎಫ್‌ಸಿ ಮಾದರಿಯಲ್ಲಿ ಗ್ರಾಹಕರಿಗೆ ರೆಡಿ ಟು ಈಟ್‌ ಚಿಕನ್‌ ಒದಗಿಸಬಹುದು. ಕೆಎಂಎಫ್‌ ಮಾದರಿಯಲ್ಲಿ ಕೋಳಿಯ ಹಸಿ ಮಾಂಸವನ್ನೂ ಪೂರೈಸಬಹುದು.

ಕತ್ತಲೆ ತುಂಬಿರುವ ಸುರಂಗದಂಚಿನಲ್ಲಿ ಬೆಳಕಿನ ಸುಳಿವೇ ಇಲ್ಲ... ಹಟ್ಟಿ ಚಿನ್ನದ ಗಣಿಯ ನೋಟ –ಪ್ರಜಾವಾಣಿ ಚಿತ್ರ: ಶ್ರೀನಿವಾಸ್‌ ಇನಾಮದಾರ್‌
ಕತ್ತಲೆ ತುಂಬಿರುವ ಸುರಂಗದಂಚಿನಲ್ಲಿ ಬೆಳಕಿನ ಸುಳಿವೇ ಇಲ್ಲ... ಹಟ್ಟಿ ಚಿನ್ನದ ಗಣಿಯ ನೋಟ –ಪ್ರಜಾವಾಣಿ ಚಿತ್ರ: ಶ್ರೀನಿವಾಸ್‌ ಇನಾಮದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT