ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಷ್ಟಾನ್ನ ಭೋಜನಕ್ಕೆ ‘ಚಿನ್ನ’ದ ತಟ್ಟೆ

ನಿಗಮ–ಮಂಡಳಿ, ಪ್ರಾಧಿಕಾರಗಳ ಸುತ್ತ ರಾಜಕಾರಣಿಗಳ ಗಿರಕಿ
Last Updated 17 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಮೈಸೂರು’ ಬ್ರ್ಯಾಂಡ್‌ ಹೆಸರಿನ ಉತ್ಪನ್ನಗಳನ್ನು ತಯಾರಿಸಿ ಕರ್ನಾಟಕದ ಹೆಮ್ಮೆಯನ್ನು ಜಗದಗಲ ಹರಡಲು ಕಾರಣವಾಗಿದ್ದ ಅನೇಕ ಕಾರ್ಖಾನೆಗಳು ರಾಜಕಾರಣಿಗಳು, ಅಧಿಕಾರಿಗಳ ದುರಾಸೆಯ ಪರಿಣಾಮವಾಗಿ ಇಂದು ನೆಲಕಚ್ಚಿವೆ. ಜನರ ಕಲ್ಯಾಣಕ್ಕಾಗಿ, ವಿವಿಧ ಸೌಲಭ್ಯಗಳನ್ನು ಒದಗಿಸಲು ರಚಿಸಿರುವ ನಿಗಮಗಳು ರಾಜಕೀಯ ನೇತಾರರ ಹಿಂಬಾಲಕರಿಗೆ ಆಶ್ರಯತಾಣಗಳಾಗಿವೆ. ನಿರ್ಲಕ್ಷ್ಯ–ಅತಿಯಾಸೆಯಿಂದ ಸೊರಗಿಹೋದ ನಿಗಮ–ಮಂಡಳಿ, ಪ್ರಾಧಿಕಾರಗಳ ಹಣೆಬರಹದ ಅನಾವರಣ ಇಂದಿನ ‘ಒಳನೋಟ’ದ ಹೂರಣ.

ಬೆಂಗಳೂರು: ನಕಲಿ ಬಿಲ್‌ಗಳ ಕರಾಮತ್ತು, ಕಾಮಗಾರಿಗಳ ಹೆಸರಿನಲ್ಲಿ ಪರ್ಸಂಟೇಜು, ಭೂಸ್ವಾಧೀನ–ಡಿನೋಟಿಫೈ, ಸೈಟು ಹಂಚಿಕೆಗಳ ಅಡ್ಡಮಾರ್ಗದಲ್ಲಿ ಕೋಟಿಕೋಟಿ ಸಂಪಾದನೆ ಬೇಕೆ; ನಿಗಮ–ಮಂಡಳಿ ಅಥವಾ ಪ್ರಾಧಿಕಾರದ ಅಧ್ಯಕ್ಷಗಾದಿ ಹಿಡಿಯಿರಿ. ಇದು ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿರುವ ‘ಉಚಿತ ಸಲಹೆ’.

ಒಂದೇ ಮಾತಿನಲ್ಲಿ ಹೇಳಬೇಕಾದರೆ, ಲಾಭ ಅಥವಾ ನಷ್ಟದಲ್ಲಿರುವ ‘ಗಂಜಿ ಕೇಂದ್ರ’ಗಳನ್ನು ನೀಡುವುದೆಂದರೆ ಮೃಷ್ಟಾನ್ನ ಭೋಜನದ ದುರಾಸೆ ಇರುವವರಿಗೆ ಚಿನ್ನದ ತಟ್ಟೆಯಲ್ಲಿ ಊಟ ಬಡಿಸಿದಂತೆ. ಸರ್ಕಾರದ ಪಾಲಿಗೆ ಬಹುತೇಕ ನಿಗಮ–ಮಂಡಳಿಗಳು ಹೊರೆಯಾದರೆ, ಲಾಬಿ ನಡೆಸಿ ಈ ಆಯಕಟ್ಟಿನ ಹುದ್ದೆಗಳನ್ನು ಆಕ್ರಮಿಸಿಕೊಳ್ಳುವವರಿಗೆ ಇವು ಆನೆಗಳಂತೆ. ಆನೆ ಇದ್ದರೂ ಲಾಭ, ಸತ್ತರೂ ಲಾಭ ಎಂಬಂತೆ ನಷ್ಟದಲ್ಲಿದ್ದರೂ ಅಲ್ಲಿಯೇ ದುಡ್ಡು ಸಂಪಾದಿಸುವ ದಾರಿಗಳನ್ನು ಅಲ್ಲಿಗೆ ಹೋದವರು ಹುಡುಕಿಕೊಳ್ಳುತ್ತಾರೆ. ಇಲ್ಲವೇ, ಅಲ್ಲಿ ಕಾಯಂ ಆಗಿ ಝಂಡಾ ಊರಿರುವವರು ಅಡ್ಡಕಸುಬಿನ ಮಾರ್ಗಗಳನ್ನು ತೋರಿಸುತ್ತಾರೆ.

ಚುನಾವಣೆಯಲ್ಲಿ ಗೆದ್ದರೂ ಸಚಿವರಾಗುವುದು ಕಷ್ಟ; ಆದರೆ, ಸೋತು ಸೊರಗಿದರೂ ‘ಪ್ರಭಾವಿ’ಗಳ ಅಂಗಿಯ ಚುಂಗು ಹಿಡಿದು, ದುಂಬಾಲು ಬಿದ್ದರೆ ಆಯಕಟ್ಟಿನ ಹುದ್ದೆ ಸಿಗುವುದು ಖಚಿತ. ಏಕೆಂದರೆ ಅಲ್ಲಿ ಮೊಗೆದಷ್ಟು ದುಡ್ಡು ಇದೆ; ಸರ್ಕಾರ ಇರುವಷ್ಟು ಅಥವಾ 20–30 ತಿಂಗಳ ಅವಧಿಯಲ್ಲಿ ಜನರ ದುಡ್ಡಿನಲ್ಲಿ ರಾಜಭೋಗ ಅನುಭವಿಸುವ ಎಲ್ಲ ದಾರಿಗಳು ಇಲ್ಲಿ ತೆರೆದುಕೊಳ್ಳುತ್ತವೆ. ಅದಕ್ಕಾಗಿಯೇ ಸಚಿವ ಸ್ಥಾನ ಸಿಗದೇ ಇದ್ದ ಶಾಸಕರು ಬಹುಕೋಟಿ ವ್ಯವಹಾರ ಅಥವಾ ಕಾಮಗಾರಿಗಳನ್ನು ನಡೆಸುವ ನಿಗಮ ಮಂಡಳಿಗಳ ಅಧಿಕಾರ ಹಿಡಿಯಲು ಯಾವ ಒಳಮಾರ್ಗಗಳನ್ನು ಬೇಕಾದರೂ ಅನುಸರಿಸುತ್ತಾರೆ.

ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಈ ಸಂಸ್ಥೆಗಳು ಮೂಲ ಉದ್ದೇಶವನ್ನೇ ಮರೆತು, ರಾಜಕೀಯ ನಾಯಕರ ಮೋಜು– ಮಸ್ತಿಯ ವೇದಿಕೆಗಳಾಗಿವೆ. ಅವರ ಬಾಲಂಗೋಚಿಗಳ ಪುನರ್ವಸತಿ ಕೇಂದ್ರಗಳಾಗಿವೆ. ಮಂತ್ರಿಗಿರಿ ತಪ್ಪಿದ ಶಾಸಕರನ್ನು ಸಮಾಧಾನಪಡಿಸುವ ಪುನರ್ವಸತಿ ತಾಣಗಳಾಗಿವೆ. ಎಲ್ಲ ಪ್ರಭಾವಿ ನಾಯಕರೂ ತಮ್ಮ ಆಪ್ತರು, ನಿಷ್ಠರು, ಹಿಂಬಾಲಕರಿಗೆ ನಿಗಮ– ಮಂಡಳಿಗಳ ಕುರ್ಚಿ ಕೊಡಿಸುವುದಕ್ಕಾಗಿ ತಂತ್ರಗಳನ್ನು ಮಾಡುತ್ತಾರೆ. ‌

ನಿಗಮ– ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾದಾಗಿನಿಂದ ಮುಗಿಯುವವರೆಗೂ ನಡೆಯುವ ರಾಜಕೀಯ ಪ್ರಹಸನವೇ ನಡೆಯುತ್ತದೆ. ಮುಖ್ಯಮಂತ್ರಿ, ಮಂತ್ರಿಗಳು, ಪಕ್ಷದ ಅಧ್ಯಕ್ಷರು ಹಾಗೂ ಪ್ರಭಾವಿ ನಾಯಕರ ಸುತ್ತಲೂ ದೊಡ್ಡ ದಂಡೇ ಇರುತ್ತದೆ. ಅವರು ಎಲ್ಲಿಗೆ ಹೋದರೂ ಇದು ಹಿಂಬಾಲಿಸುತ್ತದೆ. ಕಂಡಕಂಡ ಕಡೆ ಕೈಮುಗಿಯುವುದು, ಕಾಲಿಗೆ ಬೀಳುವುದು, ಅಂಗಲಾಚುವುದು... ತಮ್ಮ ನೆಚ್ಚಿನ ನಾಯಕರಿಗೆ ಬೆಡ್‌ರೂಂ ಬಾತ್‌ರೂಂಗೆ ಹೋಗಲೂ ಬಿಡದೆ ತಡೆಯುವುದು ನಡೆಯುತ್ತದೆ.

ಕೆಲವು ನಿಗಮ–ಮಂಡಳಿಗಳನ್ನು ಕೇವಲ ಐಷಾರಾಮಿ ಕಚೇರಿ, ಕಾರು, ಆಪ್ತ ಸಿಬ್ಬಂದಿ ಇತರ ಸೌಲಭ್ಯಕ್ಕಾಗಿ ಉಳಿಸಿಕೊಳ್ಳಲಾಗಿದೆ. ಇದರ ಹಿಂದೆ ಯಾರೋ ಒಬ್ಬರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಎಂಬ ಭೇದವಿಲ್ಲದೇ ಯಾವುದೇ ಪಕ್ಷ ಅಧಿಕಾರಲ್ಲಿದ್ದರೂ ಇಂತಹ ‘ಗಂಜಿ ಗಿರಾಕಿ’ಗಳಿಗೆ ಮಾತ್ರ ಅವಕಾಶ ತಪ್ಪಿಹೋಗುವುದಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ನೇರವಾಗಿ ಕೈಗಾರಿಕಾ ಸಚಿವರ ಅಧೀನದಲ್ಲಿ ಬರುತ್ತದೆ. ಹಿಂದೆ ಸಚಿವರಾಗಿದ್ದವರೊಬ್ಬರು ಇಟಾಸ್ಕ ಹೆಸರು ಬೋಗಸ್‌ ಕಂಪನಿ ಸ್ಥಾಪಿಸಿದ್ದರು. ಭೂಸ್ವಾಧೀನ ಹಾಗೂ ಡಿನೋಟಿಫೈ ಹೆಸರಿನಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುವವರು, ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕುವವರ ಹೆಸರಿಗೂ ಭೂಮಿ ಕೊಡಿಸಿ, ಸರ್ಕಾರದ ಕೋಟಿ ಕೋಟಿ ಹೊಡೆದರು.

ಕರ್ನಾಟಕ ಗೃಹ ಮಂಡಳಿಯಂತೂ ನುಂಗುಬಾಕರ ಸ್ವರ್ಗ. ಇಲ್ಲಿ ಅಧ್ಯಕ್ಷರಾಗಿದ್ದವರು, ನಿರ್ದೇಶಕರಿಗೆ ಕೈತುಂಬಾ ಕೆಲಸ. ದುಡ್ಡಿನ ಹಾಸಿಗೆಯ ಮೇಲೆ ಮಲಗುವಷ್ಟು ಸಂಪತ್ತು ಖಚಿತ. ಇಂತಹ ಹತ್ತಾರು ನಿಗಮ–ಮಂಡಳಿ, ಪ್ರಾಧಿಕಾರಗಳ ಎಲ್ಲಿಲ್ಲದ ಬೇಡಿಕೆ.

ರಿಯಲ್ ಎಸ್ಟೇಟ್‌ ಉದ್ಯಮ ಹಿನ್ನೆಲೆಯ ಬೆಂಗಳೂರಿನ ಮೂವರು ಶಾಸಕರು ಹಿಂದಿನ ಸರ್ಕಾರದ ಅವಧಿಯಲ್ಲಿ ತಮ್ಮ ಜತೆ 30ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಹುಯಿಲೆಬ್ಬಿಸಿದರು. ಇವರನ್ನೆಲ್ಲ ಒಗ್ಗೂಡಿಸಿ ಲಾಬಿಯನ್ನೂ ಮಾಡಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರನ್ನಾಗಿಸಿದ ಕೂಡಲೇ ಈ ಮೂವರು ತಾವು ಸರ್ಕಾರ, ಸಿದ್ದರಾಮಯ್ಯನವರ ಪರ ಎಂದು ಭಜನೆ ಮಾಡತೊಡಗಿದರು.

ಮೈತ್ರಿ ಸರ್ಕಾರದ ಬಂದ ಮೇಲೆ ಸಚಿವ ಸ್ಥಾನಕ್ಕಾಗಿ ಅನೇಕ ಶಾಸಕರು ತಮ್ಮದೇ ಆದ ಲಾಬಿ ಮಾಡುತ್ತಿದ್ದಾರೆ. ತಮಗೆ ಬಿಜೆಪಿಯಿಂದ ಕರೆ ಬಂದಿದೆ ಎಂದು ತಿಂಗಳಿಗೊಮ್ಮೆ ಹೇಳಿಕೆ ನೀಡುತ್ತಾ ಸರ್ಕಾರವನ್ನೇ ನಡುಗಿಸುತ್ತಿದ್ದಾರೆ. ಸಚಿವ ಸ್ಥಾನ ಕೈಗೆಟುಕುವುದಿಲ್ಲ ಎಂಬುದು ಅವರಿಗೂ ಗೊತ್ತು; ಸಚಿವ ಸ್ಥಾನ ಸಿಗದೇ ಇದ್ದರೂ ಗರಿಷ್ಠ ಲಾಭ ತರುವ ನಿಗಮ–ಮಂಡಳಿಯಾದರೂ ಸಿಗಲಿ ಎಂಬುದು ಇವರ ಒತ್ತಾಸೆ ಎಂಬುದು ರಾಜಕೀಯ ಅನುಭವಸ್ಥರ ಖಚಿತ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT