ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ ಸುತ್ತ ರಾಜಕೀಯ: ಕುಮಾರಸ್ವಾಮಿ ಹೇಳಿಕೆಗೆ ಪ್ರಲ್ಹಾದ ಜೋಶಿ ತಿರುಗೇಟು

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು/ ಮಂಗಳೂರು/ ಹುಬ್ಬಳ್ಳಿ:ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣ ಇದೀಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ.‘ಈ ಪ್ರಕರಣ ಮೇಲ್ನೋಟಕ್ಕೆ ಅಣಕು ಪ್ರದರ್ಶನದಂತೆ ಕಾಣುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗೇಲಿ ಮಾಡಿದರೆ, ‘ಪೊಲೀಸರನ್ನು ಅನುಮಾನಿಸಿ ಅವರು ದೇಶದ್ರೋಹಿ ಹೇಳಿಕೆ ನೀಡಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ,‘ಇವತ್ತಿನ ಬೆಳವಣಿಗೆ ಏನ್‌ ಬ್ರದರ್‌, ಮಂಗಳೂರು ಕಮಿಷನರ್‌ ಹರ್ಷ ಅವರು ಇವತ್ತೆಲ್ಲಾದ್ರೂ ಬಾಂಬ್‌ ಹಾಕಿಸಿದ್ರ...’ ಎಂದೂ ಪ್ರಶ್ನಿಸಿದ್ದಾರೆ.

‘ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ಕಾರಣ ಎಂದು ನಾವು ದೂರುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಭಾರತವು ವಿಶ್ವಸಂಸ್ಥೆ ಸೇರಿದಂತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಯಶಸ್ವಿಯಾಗಿದೆ. ಹಾಗಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು. ಒಂದು ವೇಳೆ, ಪೊಲೀಸರೇ ಬಾಂಬ್ ಇಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೆ, ಪ್ರಕರಣ ದಾಖಲಿಸಲಿ’ ಎಂದು ಜೋಶಿ ಸವಾಲು ಹಾಕಿದ್ದಾರೆ.

‘ಮಂಗಳೂರಿನಲ್ಲಿ ಪದೇಪದೇ ದುರ್ಘಟನೆಗಳು ನಡೆಯುತ್ತಿದ್ದು, ಗುಪ್ತದಳದ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಬಾಂಬ್‌ ಇರಿಸಿದ್ದು ಉಡುಪಿ ವ್ಯಕ್ತಿ?
ಬಾಂಬ್‌ ಇರಿಸಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಉಡುಪಿಯ ಮಣಿಪಾಲದ ಕೆಎಚ್‌ಬಿ ಕಾಲೊನಿ ನಿವಾಸಿ ಆದಿತ್ಯರಾವ್‌ (36)ಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ, ಕೆಂಜಾರುವಿನ ಕ್ಷೌರದಂಗಡಿ ಒಂದರ ಮಾಲೀಕ ಹಾಗೂ ಶಂಕಿತ ಆರೋಪಿ ಬಳಸಿದ ಆಟೊ ರಿಕ್ಷಾ ಚಾಲಕನ ಹೇಳಿಕೆಗಳನ್ನು ಪರಿಶೀಲಿಸಿರುವ ಪೊಲೀಸರು, 12 ಶಂಕಿತರನ್ನು ಗುರುತಿಸಿದ್ದಾರೆ. ಈ ಪೈಕಿ ಆದಿತ್ಯರಾವ್‌ ಹೆಸರು ಮೊದಲ ಸ್ಥಾನದಲ್ಲಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಆದಿತ್ಯರಾವ್‌

ಆರೋಪಿಯು ಒಂದು ಬ್ಯಾಗ್‌ ಅನ್ನು ಕೆಂಜಾರುವಿನ ಕ್ಷೌರದಂಗಡಿಯಲ್ಲಿ ಇರಿಸಿ ಹೋಗಲು ಯತ್ನಿಸಿರುವುದು ಹಾಗೂ ಆಟೊ ರಿಕ್ಷಾ ಚಾಲಕನ ಬಳಿ ತುಳು ಭಾಷೆಯಲ್ಲೇ ಮಾತನಾಡಿದ್ದ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಬಸ್‌ನಲ್ಲೇ ಆತ ಬಂದು, ವಾಪಸ್‌ ಹೋಗಿದ್ದ ಎಂಬ ಮಾಹಿತಿ ಕೂಡ ಆರೋಪಿಯು ಸ್ಥಳೀಯನೇ ಇರಬಹುದು ಎಂಬ ಅನುಮಾನವನ್ನು ಮತ್ತಷ್ಟು ಬಲಗೊಳಿಸಿದೆ.

ಹಳೆಯ ಆರೋಪಿ: ಆದಿತ್ಯರಾವ್‌ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆಗಳನ್ನು ಮಾಡಿ, ಬಂಧಿತನಾಗಿದ್ದ.

ಎಸ್‌ಪಿಜಿ, ಎಟಿಎಸ್‌ ದೌಡು
ವಿಶೇಷ ಭದ್ರತಾ ದಳದ (ಎಸ್‌ಪಿಜಿ) ತಂಡ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ, ಬಾಂಬ್‌ ಪತ್ತೆ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿತು. 16 ಸದಸ್ಯರ ಎಸ್‌ಪಿಜಿ ತಂಡ ಸ್ಫೋಟಕವಿದ್ದ ಬ್ಯಾಗ್‌ ಅನ್ನು ಸ್ಫೋಟಿಸಿದ್ದ ಕೆಂಜಾರು ಮೈದಾನಕ್ಕೂ ತೆರಳಿ ಪರಿಶೀಲನೆ ನಡೆಸಿತು.

*
ಈ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ಪೊಲೀಸರ ಮೇಲೆ ನಂಬಿಕೆ ಇರಿಸೋಣ. ಅವರಿಗೆ ನೈತಿಕ ಬೆಂಬಲ ನೀಡೋಣ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*
ಮಂಗಳೂರಿನಲ್ಲಿ ಸಿಕ್ಕಿರುವುದು ಬಾಂಬ್‌ ಅಲ್ಲ, ಪಟಾಕಿ ಸಿದ್ಧಪಡಿಸುವ ಪೌಡರ್‌ ಮತ್ತು ವೈರ್‌ನ ಕೆಲವು ತುಂಡುಗಳಷ್ಟೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT