ಸೋಮವಾರ, ಫೆಬ್ರವರಿ 17, 2020
30 °C

ರಾಜ್ಯ ಸರ್ಕಾರ, ಗುಪ್ತದಳದ ವೈಫಲ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

siddaramaiah

ಮಂಡ್ಯ: ‘ಮಂಗಳೂರಿನಲ್ಲಿ ಪದೇಪದೇ ದುರ್ಘಟನೆಗಳು ನಡೆಯುತ್ತಿದ್ದು, ಗುಪ್ತದಳದ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ, ಗುಪ್ತದಳ ಸಂಪೂರ್ಣವಾಗಿ ವಿಫಲವಾಗಿವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಆರೋಪಿಸಿದರು.

‘ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣ ಗಾಬರಿ ಹುಟ್ಟಿಸುವಂಥದ್ದು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆಯಾಗಬೇಕು. ಇಂತಹ ಘಟನೆಗಳು ನಡೆಯದಂತೆ ಸರ್ಕಾರ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ವಿಚಾರ ಕುರಿತು, ‘ಈ ಹಿಂದೆ ಆರ್‌.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರು ಇದ್ದರು. ಡಿ.ಕೆ.ಶಿವಕುಮಾರ್‌ ಕಾರ್ಯಾಧ್ಯಕ್ಷ ಆಗಿರಲಿಲ್ಲವೇ? ಕಾರ್ಯಾಧ್ಯಕ್ಷರ ನೇಮಕಾತಿಗೆ ನಾನೇ ಒತ್ತಡ ಹಾಕುತ್ತಿದ್ದೇನೆ ಎಂಬಂತೆ ಬಿಂಬಿಸಲಾಗುತ್ತಿದೆ. ನೇಮಕಾತಿ ಬೇಡ ಎಂದು ಪರಮೇಶ್ವರ್‌ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ’ ಎಂದರು.

ಸರ್ಕಾರ ಸತ್ತಿದೆ: ‘ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜೀವಂತವಾಗಿಲ್ಲ. ತಮ್ಮದು ರೈತರ ಸರ್ಕಾರ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೊಳ್ಳುತ್ತಾರೆ. ಆದರೆ, ರೈತರ ಆಸ್ತಿ ಜಪ್ತಿ ಮಾಡುತ್ತಾರೆ’ ಎಂದು ಟೀಕಿಸಿದರು.

ರಾಜೀನಾಮೆ ಕೊಡುತ್ತಿದ್ದೆ: ‘ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರಿಗೆ ಅವಕಾಶವನ್ನೇ ಕೊಡುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಂಪುಟ ವಿಸ್ತರಣೆಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ  10 ನಿಮಿಷಕ್ಕೆ ಸಹಿ ಮಾಡುತ್ತಿದ್ದರು. ಯಡಿಯೂರಪ್ಪ ಆಗಿದ್ದಕ್ಕೆ ಅಧಿಕಾರದಲ್ಲಿ ಇದ್ದಾರೆ, ನಾನಾಗಿದ್ದರೆ ತಕ್ಷಣವೇ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ’ ಎಂದರು.

‘ಯಡಿಯೂರಪ್ಪ ಅವರು ದಾವೋಸ್‌ ಪ್ರವಾಸ ಮಾಡಿದ ಮಾತ್ರಕ್ಕೆ ರಾಜ್ಯ ಅಭಿವೃದ್ಧಿಯಾಗುವುದಿಲ್ಲ. ದೇಶದಲ್ಲೇ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಇನ್ನು, ದಾವೋಸ್‌ಗೆ ತೆರಳಿದರೆ ಹೂಡಿಕೆ ಆಗುವುದೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು