ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ: ಗೋಮಾಳದಲ್ಲಿ 50 ಬೋರ್‌ವೆಲ್‌!

Last Updated 18 ಜನವರಿ 2019, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಸತತ ಬರದಿಂದ ಕಂಗೆಟ್ಟಿರುವ ತಾಲ್ಲೂಕಿನ ಸಿಂಗಾಪುರ ಗ್ರಾಮಸ್ಥರು ಫಸಲಿಗೆ ಬಂದಿರುವ ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಅಂತರ್ಜಲ ಉಕ್ಕುತ್ತಿರುವ ಒಂದೂವರೆ ಎಕರೆ ಗೋಮಾಳದಲ್ಲಿ 50ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದಾರೆ.

ಇವುಗಳಲ್ಲಿ 40ಕ್ಕೂ ಅಧಿಕ ಕೊಳವೆಬಾವಿಗಳು 2ರಿಂದ 3 ಇಂಚು ನೀರು ಕೊಡುತ್ತಿವೆ. ಗ್ರಾಮದಿಂದ 4 ಕಿ.ಮೀ ದೂರದಲ್ಲಿರುವ ಗೋಮಾಳದಿಂದ ಬಹುತೇಕ ಎಲ್ಲ ತೋಟಗಳಿಗೂ ಕೊಳವೆಮಾರ್ಗ ನಿರ್ಮಿಸಲಾಗಿದೆ. ಒಂದೂವರೆ ತಿಂಗಳಿಂದ ಗೋಮಾಳದ ಚಿತ್ರಣವೇ ಬದಲಾಗಿದೆ.

ಪ್ರತಿ ಐದು ಅಡಿ ಅಂತರಕ್ಕೆ ಒಂದು ಕೊಳವೆಬಾವಿ ಇದೆ. ಸಮೀಪದ ತೋಟದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ನಿತ್ಯ ಕನಿಷ್ಠ ಆರು ಗಂಟೆ ಇವು ಕಾರ್ಯನಿರ್ವಹಿಸುತ್ತಿವೆ. ಬೀಳು ಬಿದ್ದಿದ್ದ ಭೂಮಿಯಲ್ಲಿ ಜಲ ಉಕ್ಕುತ್ತಿರುವ ಪರಿ ಸುತ್ತಲಿನ ಗ್ರಾಮಸ್ಥರನ್ನು ಮೂಕವಿಸ್ಮಿತಗೊಳಿಸಿದೆ.

ಬಹುತೇಕ ಬೋರ್‌ವೆಲ್‌ಗಳನ್ನು 400ರಿಂದ 600 ಅಡಿ ಆಳದವರೆಗೆ ಕೊರೆಸಲಾಗಿದೆ. ಕೊಳವೆಮಾರ್ಗದ ಮೂಲಕ ಸರಬರಾಜು ಆಗುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ತೋಟಗಳಲ್ಲಿ ಹೊಂಡಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಕನಿಷ್ಠ ₹ 5 ಲಕ್ಷದಿಂದ ₹ 10 ಲಕ್ಷದವರೆಗೂ ವೆಚ್ಚ ಮಾಡಿದ್ದಾರೆ.

ಸಿಂಗಾಪುರ ಹಾಗೂ ತೊಡರನಾಳು ಗ್ರಾಮದ ಗಡಿಯಲ್ಲಿರುವ ಗೋಮಾಳವನ್ನು ಶಿವಣ್ಣ ಎಂಬುವರು 8 ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಯುತ್ತಿದ್ದರು. 2018ರ ಬೇಸಿಗೆಯಲ್ಲಿ ಪಕ್ಕದ ತೋಟದ ಕೃಷಿಕರೊಬ್ಬರು ಕೊಳವೆಬಾವಿ ಕೊರೆಸಿದರು. ನಿರೀಕ್ಷೆಗೂ ಮೀರಿ ನೀರು ಸಿಕ್ಕಿದ್ದು ಗ್ರಾಮಸ್ಥರ ಗಮನ ಸೆಳೆಯಿತು. ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಆಗಿದ್ದು, ಅದನ್ನು ನೀಗಿಸಿಕೊಳ್ಳಲು ರೈತರು ಗೋಮಾಳದ ಮೊರೆಹೋಗಿದ್ದಾರೆ.

*2018ರ ಬೇಸಿಗೆಯಲ್ಲಿ ಐದು ಕೊಳವೆಬಾವಿಗಳಿದ್ದವು. ಬೇಸಿಗೆಯಲ್ಲೂ ನೀರು ಬತ್ತದಿರುವುದು ಎಲ್ಲರ ಗಮನ ಸೆಳೆಯಿತು. ಎಲ್ಲ ಬಾವಿಗಳಲ್ಲಿ ನೀರು ಬರುತ್ತಿರುವುದು ವಿಸ್ಮಯ.

-ಅಜ್ಜಪ್ಪ, ರೈತ ತೊಡವನಾಳು

* ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಸ್ಥಳ ಪರಿಶೀಲಿಸಿದ್ದೇವೆ. ಗೋಮಾಳಅರಣ್ಯ ಇಲಾಖೆಗೆ ಸೇರಿಲ್ಲ. ಅರಣ್ಯ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಸಲು ಅವಕಾಶವಿಲ್ಲ.

-ಮಂಜುನಾಥ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT