ಗುರುವಾರ , ಏಪ್ರಿಲ್ 2, 2020
19 °C

ಗಡಿ ವಿಷಯ ಕೆದಕುತ್ತಿರುವ ಮಹಾರಾಷ್ಟ್ರದ ಕ್ರಮ ಸರಿಯಲ್ಲ:ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬೆಳಗಾವಿ ಗಡಿ ವಿಚಾರ ಕುರಿತು ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೇಂದ್ರ ಸರ್ಕಾರ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ ಮೇಲೆಯೂ ಅಲ್ಲಿನ ಸರ್ಕಾರ ಇದೇ ವಿಷಯವಾಗಿ ಕೆದಕುತ್ತಿರುವುದು ಸರಿಯಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಗಳ ರಚನೆ ಸಂದರ್ಭದಲ್ಲಿಯೇ ಗಡಿ ವಿಷಯವು ಇತ್ಯರ್ಥವಾಗಿದೆ.  ಇಂದು ಮಹಾರಾಷ್ಟ್ರ ಸರ್ಕಾರ ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಅಂದಿನ ಸಮಿತಿಯು ಅಧ್ಯಯನ ಮಾಡಿದ ನಂತರವೇ ಗಡಿ ಗುರುತಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೇಂದ್ರ ಸರ್ಕಾರವು ತನ್ನ ಹೇಳಿಕೆಯನ್ನು ಅಫಿಡವಿಟ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ’ ಎಂದು ವಿವರಿಸಿದರು. 

‘ಬೆಳಗಾವಿಯಲ್ಲಿ ಎರಡೂ ಭಾಷಿಕರ ಮಧ್ಯೆ ಸಾಮರಸ್ಯ ಇದೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಬಂಧಗಳು ಇವೆ. ಇವುಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು.  ಮಹಾರಾಷ್ಟ್ರದಲ್ಲಿ ಪ್ರತಿ ಸಲ ಸರ್ಕಾರ ಬದಲಾದಾಗ ಬೆಳಗಾವಿ ವಿಷಯವನ್ನು ಕದಡುವ ಕೆಲಸ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

‘ಗಡಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ರಾಜ್ಯದ ವಕೀಲರ ತಂಡಕ್ಕೆ ಎಲ್ಲ ಮಾಹಿತಿಯನ್ನು ಪೂರೈಸಲಾಗುವುದು. ಸದ್ಯದಲ್ಲಿಯೇ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರು ಬೆಳಗಾವಿ ಭೇಟಿ ನೀಡಿ, ಸ್ಥಳೀಯರ ಅಭಿಪ್ರಾಯವನ್ನೂ ಸಂಗ್ರಹಿಸುವ ಕಾರ್ಯ ಮಾಡಲಿದ್ದಾರೆ’ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು