ಆಕಾಶದಲ್ಲೇ ಹಾರಿಹೋಯ್ತು ಮಗುವಿನ ಪ್ರಾಣ

7
ವಿಮಾನದ ಮಾರ್ಗ ಬದಲಾಯಿಸಿದರೂ ಉಳಿಯಲಿಲ್ಲ ಜೀವ

ಆಕಾಶದಲ್ಲೇ ಹಾರಿಹೋಯ್ತು ಮಗುವಿನ ಪ್ರಾಣ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಿಂದ ಪಟ್ನಾಕ್ಕೆ ಹೊರಟಿದ್ದ ವಿಮಾನದಲ್ಲಿ ಉಸಿರಾಡಲು ತೊಂದರೆ ಉಂಟಾಗಿದ್ದರಿಂದ ನಾಲ್ಕು ತಿಂಗಳ ಗಂಡು ಮಗು ಮೃತಪಟ್ಟಿದೆ.

‘ಇಂಡಿಗೊ– 6ಇ 897’ ವಿಮಾನದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮಗುವಿನ ಹೆಸರು ಹಾಗೂ ವಿಳಾಸ ಗೊತ್ತಾಗಿಲ್ಲ ಎಂದು ನಿಲ್ದಾಣದ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಮಾನವು ಎಂದಿನಂತೆ ಬೆಳಿಗ್ಗೆ ಪಟ್ನಾದತ್ತ ಹಾರಿತ್ತು. 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮಗು ಸಹ ಪೋಷಕರ ಜತೆಗಿತ್ತು. ವಿಮಾನವು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಉಸಿರಾಟಕ್ಕೆ ತೊಂದರೆ ಉಂಟಾಗಿ ಮಗು ಅಳಲಾರಂಭಿಸಿತ್ತು’.

‘ಗಾಬರಿಗೊಂಡ ಪೋಷಕರು, ವಿಮಾನದ ಸಿಬ್ಬಂದಿಯ ಸಹಾಯ ಕೇಳಿದ್ದರು. ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದ ಸಿಬ್ಬಂದಿ, ಉಸಿರಾಡಲು ಕಷ್ಟಪಡುತ್ತಿದ್ದುದನ್ನು ಗಮನಿಸಿದ್ದರು. ತುರ್ತು ಚಿಕಿತ್ಸೆ ಅಗತ್ಯವಿರುವುದಾಗಿ ಪೈಲಟ್‌ಗೆ ಹೇಳಿದ್ದರು. ಆಗ ಪೈಲಟ್‌, ಪಟ್ನಾದತ್ತ ಹೊರಟಿದ್ದ ವಿಮಾನದ ಮಾರ್ಗ ಬದಲಾವಣೆ ಮಾಡಿ ಹೈದರಾಬಾದ್ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿದ್ದರು’ ಎಂದು ಮೂಲಗಳು ಹೇಳಿವೆ.

‘ವಿಮಾನ ಇಳಿಯುತ್ತಿದ್ದಂತೆ ಆಂಬುಲೆನ್ಸ್‌ನಲ್ಲಿ ಮಗುವನ್ನು ಸಮೀಪದ ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಪ್ರಯಾಣಿಕರೊಬ್ಬರು, ‘ವಿಮಾನದಲ್ಲಿ ಆಮ್ಲಜನಕದ ಕೊರತೆ ಇತ್ತು. ಅದರಿಂದಾಗಿ ಮಗು ಉಸಿರಾಡಲು ಕಷ್ಟಪಡುತ್ತಿತ್ತು. ವಿಮಾನದ ಮಾರ್ಗ ಬದಲಾವಣೆ ಮಾಡಿ ಜೀವ ಉಳಿಸಿಕೊಳ್ಳಲು ಪೈಲಟ್‌ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ’ ಎಂದಿದ್ದಾರೆ.

‘ಮಕ್ಕಳ ಜತೆ ವಿಮಾನದಲ್ಲಿ ಪ್ರಯಾಣಿಸುವಾಗ ಪೋಷಕರು ಹೆಚ್ಚು ಜಾಗೃತರಾಗಿರಬೇಕು. ಮಕ್ಕಳಿಗೆ ಉಸಿರಾಟದ ತೊಂದರೆ ಇದ್ದರೆ, ಮೊದಲೇ ಸಿಬ್ಬಂದಿಗೆ ತಿಳಿಸಬೇಕು. ಈಗ ಮೃತಪಟ್ಟ ಮಗುವಿನ ಸ್ಥಿತಿ ಬೇರೆ ಯಾರಿಗೂ ಬರಬಾರದು’ ಎಂದು ಹೇಳಿಕೊಂಡಿದ್ದಾರೆ.

‘ಘಟನೆಯಿಂದ ನೋವಾಗಿದೆ’: ‘ಘಟನೆಯಿಂದ ಸಿಬ್ಬಂದಿಗೆ ನೋವಾಗಿದೆ. ಮಗುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ’ ಎಂದು ಇಂಡಿಗೊ ಕಂಪನಿ ಪ್ರತಿನಿಧಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಗುವಿನ ಜೀವ ಉಳಿಸಲೆಂದು ಸಿಬ್ಬಂದಿ ಮಾರ್ಗ ಬದಲಾವಣೆ ನಿರ್ಧಾರವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡಿದ್ದರು. ಕಂಪನಿಯ ಪ್ರತಿಯೊಬ್ಬರು,  ಮಗುವಿನ ಜೀವ ಉಳಿಯಲಿ ಎಂದು ಪ್ರಾರ್ಥಿಸುತ್ತಿದ್ದರು.  ಅದಕ್ಕೆ ಫಲ ಸಿಗಲಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 10

  Sad
 • 2

  Frustrated
 • 3

  Angry

Comments:

0 comments

Write the first review for this !